ಕಾಯ್ಕಿಣಿ ಸಾಹಿತ್ಯಕ್ಕೆ ಗಣೇಶ್, ಯುವಿಕಾ ಹೆಜ್ಜೆ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ 'ಮಳೆಯಲಿ ಜೊತೆಯಲಿ'. ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿರುವ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.
ಸಾಹಿತಿ ಜಯಂತ್ ಕಾಯ್ಕಿಣಿ ಅವರ ರಚನೆಯ 'ನೀ ಸನಿಹಕ್ಕೆ ಬಂದರೆ ಹೃದಯದ ಗತಿ ಏನು..." ಎಂಬ ಗೀತೆ ಪ್ರಕೃತಿ ಮಾತೆಯ ತವರುಮನೆಯಂತಿರುವ ಕೇರಳದ ರಮ್ಯ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಖ್ಯಾತ ಗಾಯಕ ಸೋನುನಿಗಂ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮುರುಳಿ ನೃತ್ಯ ನಿರ್ದೇಶನದಲ್ಲಿ ಗಣೇಶ್ ಹಾಗೂ ಯುವಿಕಾ ಚೌಧರಿ ಹೆಜ್ಜೆ ಹಾಕಿದ್ದಾರೆ.
ಸಾಹಿತಿ ಕವಿರಾಜ್ ರಚನೆಯ 'ಹಾಳಾದ್ ಹಾಳಾದ್ ಹಾರ್ಟಲೀ ಎಂಬ ಗೀತೆ ನಾಯಕ ಗಣೇಶ್ ಅಭಿನಯದಲ್ಲಿ ಬೆಂಗಳೂರಿನ ಕೆಂಗೇರಿ ಹಾಗೂ ಹೆಸರುಘಟ್ಟದಲ್ಲಿ ಚಿತ್ರೀಕರಣಗೊಂಡಿದೆ. ಈ ಗೀತೆಗೂ ಮುರಳಿ ಅವರೇ ನೃತ್ಯ ಸಂಯೋಜಿಸಿದ್ದಾರೆ.
ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ 'ಮಳೆಯಲಿ ಜೊತೆಯಲಿ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಾಹಕರಾಗಿದ್ದಾರೆ.
ವಿ.ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದೇವಶೆಟ್ಟಿ ಮಹೇಶ್ ಸಂಭಾಷಣೆ, ಕವಿರಾಜ್, ಜಯಂತ್ ಕಾಯ್ಕಿಣಿ ಗೀತರಚನೆ ಹಾಗೂ ಮೋಹನ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿಕಹಿಚಂದ್ರು, ಸಿಹಿಕಹಿಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











