BIFFES-2026:ಪ್ಯಾಲೆಸ್ತೀನ್ ಫಿಲ್ಮ್ಸ್ ಬೆಂಬಲಿಸಿದ ಪ್ರಕಾಶ್ ರಾಜ್.."ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ತೋರಿಸಬೇಕು" ಎಂದ ಸಿಎಂ
ಸಿನಿಪ್ರಿಯರು ಎದುರು ನೋಡುತ್ತಿದ್ದ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 17ನೇ ಆವೃತ್ತಿ ಆರಂಭ ಆಗಿದೆ. ಸಂಪ್ರದಾಯದಂತೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಜನವರಿ 29ರಂದು ಉದ್ಘಾಟನಾ ಸಮಾರಂಭ ನಡೆದಿದೆ.
ಜನವರಿ 29 ರಿಂದ ಫೆಬ್ರವರಿ 6ರ ವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಸುಮಾರು 70 ದೇಶಗಳಿಂದ ಆಯ್ದ 240 ಸಿನಿಮಾ ಪ್ರದರ್ಶನ ಕಾಣಲಿದೆ. ದೇಶ-ವಿದೇಶಗಳ ಅಪರೂಪದ ಸಿನಿಮಾಗಳನ್ನು ವೀಕ್ಷಿಸಲು ವೇದಿಕೆ ಸಜ್ಜಾಗಿದೆ. ವಿಶ್ವದಲ್ಲಿ ಜನ ಮನ್ನಣೆ ಗಳಿಸಿರುವ 100ಕ್ಕೂ ಹೆಚ್ಚು ವಿದೇಶಿ ಸಿನಿಮಾಗಳು ಹಾಗೂ 30ಕ್ಕೂ ಹೆಚ್ಚು ವಿವಿಧ ಭಾಷೆಯ ಭಾರತೀಯ ಸಿನಿಮಾಗಳು ಪ್ರದರ್ಶನ ಕಾಣಲಿವೆ.

ಬೆಂಗಳೂರು 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ಧರಾಮಯ್ಯ, "ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇದಿಕೆ ಮೇಲೆ ಸಿಎಂ "ಚಲನಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾಾತರು, ಮಹಿಳೆಯರು ಕುರಿತು ಸಿನಿಮಾಗಳನ್ನು ಮಾಡಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಇಷ್ಟೇ ಅಲ್ಲದೆ, "ನಾವು ಮನುಷ್ಯರು, ನಾವು ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿಯಿಂದ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬೇಧ-ಭಾವ, ಅಸಮಾನತೆ ಹೋಗಲಾಡಿಸುವ ಕೆಲಸ ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತದೆ. ಬದುಕನ್ನು ಹಸನು ಮಾಡುವ ಕೆಲಸ ಚಲನ ಚಿತ್ರಗಳು ಮಾಡಲಿ" ಎಂದು ಚಿತ್ರೋತ್ಸವಕ್ಕೆ ಸಿಎಂ ಶುಭ ಹಾರೈಸಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಚಿತ್ರೋತ್ಸವದ ಬಗ್ಗೆ ಮಾತಾಡಿದ್ದು, "ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 255 ಚಿತ್ರಗಳು ಪ್ರದರ್ಶನ ಹಮಿಕೊಂಡಿದ್ದು ಅದರಲ್ಲಿ 65 ಮಹಿಳಾ ನಿರ್ದೇಶಕರ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವವನ್ನು ಮಹಿಳೆಯರಿಗೆ ಅರ್ಪಿಸಿರುವುದು ಅತ್ಯಂತ ಗೌರವಯುತ ಕಾರ್ಯವಾಗಿದೆ." ಎಂದು ಹೇಳಿದ್ದಾರೆ.

ಈ ಬಾರಿಯ ಹಿರಿಯ ನಟ ಪ್ರಕಾಶ್ ರಾಜ್, ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನ ರಾಯಭಾರಿಯಾಗಿದ್ದಾರೆ. ಈ ವೇಳೆ ಪ್ರಕಾಶ್ ರಾಜ್ ಮಾತಾಡಿ, "ಸುಮಾರು 16 ವರ್ಷಗಳ ಹಿಂದೆ ನಾನು ಈ ಚಲನಚಿತ್ರೋತ್ಸವವನ್ನು ಉದ್ಘಾಟನೆ ಮಾಡಿದ್ದೆ. ಇದೊಂದು ರಂಗನತಿಟ್ಟು ಇದ್ದಂತೆ, ಅಲ್ಲಿಯಂತೆಯೇ ಇಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಸಿನಿಮಾ ಪಕ್ಷಿಗಳು ಸೇರುವುದು ವಿಶೇಷ. ಅಂತರಾಷ್ಟ್ರೀಯ ಚಿತ್ರೋತ್ಸವ ಅಥವಾ ಸಾಹಿತ್ಯೋತ್ಸವಗಳು ಜನರ ಬದುಕು ಹಾಗೂ ಮನುಷ್ಯತ್ವವನ್ನು ಹಂಚಿಕೊಳ್ಳುವ ವೇದಿಕೆಗಳು. ಇಂತಹ ವೇದಿಕೆಗಳಿಗೆ ರಾಜಕೀಯ ಪ್ರವೇಶವಾಗಿರುವುದು ದುರಂತ, ಕೆಲದೇಶದ ಸಿನಿಮಾಗಳ ಪ್ರದರ್ಶನವನ್ನು ಕೇಂದ್ರ ಸರ್ಕಾರ ಅನುವು ಮಾಡಿಕೊಡದಿರುವುದನ್ನು ರಾಜ್ಯ ಸರ್ಕಾರ ಖಂಡಿಸಬೇಕು. ಹಾಗೇ ಅದನ್ನು ವಿರೋಧಿಸುವ ಮೂಲಕ ನಮ್ಮ ಚಿತ್ರೋತ್ಸವಕ್ಕೆ ಬೆಂಬಲವಾಗಿ ನಿಲ್ಲಬೇಕು." ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರಕಾಶ್ ರಾಜ್ ಪ್ಯಾಲೆಸ್ತೀನ್ ಸಿನಿಮಾಗಳನ್ನು ಬೆಂಬಲಿಸಿ ಕವನ ವಾಚನ ಮಾಡಿದರು. ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿದಾಮವನ್ನು ಹೋಲಿಸಿ ಮಾತನಾಡಿ "ಇಂತಹ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದಂತೆ ಪ್ರತಿರೋಧಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ನಟಿ ರುಕ್ಮಿಣಿ ವಸಂತ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. "ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ನನ್ನಂತ ಯುವನಟಿಯನ್ನು ಆಹ್ವಾನಿಸಿರುವುದು ನನಗೆ ಸಿಕ್ಕ ಸೌಭಾಗ್ಯ. ಬೆಂಗಳೂರು ಎಲ್ಲಾ ಕಲೆಗಳ ನೆಲೆ, ಸಿನಿಮಾ ಎಲ್ಲಾ ಕಲೆಯನ್ನು ಬಳಸಿಕೊಳ್ಳುವ ಮಾಧ್ಯಮ, ಎಲ್ಲಾ ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಮೂಲಕ ಸಿನಿಮಾಸಕ್ತರು ಕಲಿಯಲು ಇದೊಂದು ವೇದಿಕೆ. ಮುಖ್ಯವಾಗಿ ತಂತ್ರಜ್ಞರ ಹಾಗೂ ಸಿನಿಮಾ ಪ್ರಿಯರ ಸಿನಿಮಾ ವಿಷಯಗಳ ವಿನಿಮಯ ಅತ್ಯಂತ ಸಹಾಯಕವಾಗಲಿದೆ" ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ. ಹಿರಿಯ ನಟಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ ಹಾಗೂ ಹಿರಿಯ ನಟಿ ಮತ್ತು ಮಾಜಿ ಸಚಿವೆ ಡಾ. ಜಯಮಾಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ವಾರ್ತಾ ಇಲಾಖೆಯ ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ್ , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ಚೇತನ್ ಅಹಿಂಸ, ಪೂಜಾ ಗಾಂಧಿ, ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ಅನು ಪ್ರಭಾಕರ್, ರಘು ಮುಖರ್ಜಿ, ರಾಕ್ಲೈನ್ ವೆಂಕಟೇಶ್, ಸುಂದರ್ ರಾಜ್ ಮುಂತಾದವರು ಹಾಜರಿದ್ದರು. ಉದ್ಘಾಟನಾ ವೇದಿಕೆಯಲ್ಲಿ ನೆದರ್ಲ್ಯಾಂಡ್ ದೇಶದ 'ಪೋರ್ಟ್ ಬ್ಯಾಗೇಜ್' ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಯಿತು. ಬೆಂಗಳೂರಿನಲ್ಲಿ ಓರಾಯನ್ ಮಾಲ್‌ನಲ್ಲಿ ನಡೆಯುತ್ತಿದ್ದ ಈ ಸಿನಿಮೋತ್ಸವ ಈ ಬಾರಿ ಲುಲು ಮಾಲ್ ನಡೆಯಲ್ಲಿದೆ. ಹೀಗಾಗಿ ಆ ಆವರಣದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಟೆಂಟ್ ಸಿನಿಮಾ ಮಾದರಿಯ ಓಪನ್ ಏರ್ ಥೇಟರ್‌ನಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.


Click it and Unblock the Notifications











