ನಿರ್ದೇಶಕನಾಗಿ ಪ್ರಭುದೇವ್ ಆಖಾಡಕ್ಕೆ, ಪುನೀತ್ ಹೀರೋ

ಪ್ರಭುದೇವ್ ಆಕ್ಷನ್ ಕಟ್ ಹೇಳಲಿರುವುದು ಕನ್ನಡ ಬಾಕ್ಸ್ ಆಫೀಸ್ ನ ಸೂಪರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ. ಗಾಂಧಿನಗರದ ಮೂಲಗಳ ಪ್ರಕಾರ ಸದ್ಯ ಹಿಂದಿಯಲ್ಲಿ ಬ್ಯೂಸಿಯಾಗಿರುವ ಪ್ರಭುದೇವ್ ಇನ್ನೆರಡು ತಿಂಗಳ ನಂತರ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲಿದ್ದಾರೆ, ಅಂದರೆ ಬರುವ ಜನವರಿ 2012ರಲ್ಲಿ ಚಿತ್ರ ಸೆಟ್ಟೇರಲಿದೆ.
ಪ್ರಭುದೇವ್ ಈಗಾಗಲೇ 8 ಚಿತ್ರಗಳನ್ನು ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಅವರು ನಿರ್ದೇಶಿಸಿದ್ದ ಶಂಕರ್ ದಾದಾ ಜಿಂದಾಬಾದ್, ತಮಿಳಿನ ಪೋಕ್ಕಿರಿ, ವಿಲ್ಲು ಮತ್ತು ಹಿಂದಿಯಲ್ಲಿ ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ವಾಂಟೆಡ್ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು.
ಸದ್ಯ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ರೌಡಿ ರಾಥೋರ್ ಚಿತ್ರದಲ್ಲಿ ತೊಡಗಿಸಿ ಕೊಂಡಿರುವ ಪ್ರಭುದೇವ್ ಈ ಚಿತ್ರಕ್ಕೆ ಕುಂಬಳಕಾಯಿ ಹೊಡೆದ ನಂತರ ಪುನೀತ್ ಜೊತೆಗಿನ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಪುನೀತ್ ಮತ್ತು ಪ್ರಭುದೇವ್ ನಡುವೆ ಮೊದಲ ಸುತ್ತಿನ ಮಾತುಕತೆ ಮುಗಿದಿದ್ದು ಜನವರಿಯಲ್ಲಿ ಪುನೀತ್ ಕಾಲ್ ಶೀಟ್ ಗೆ ತಕ್ಕಂತೆ ಚಿತ್ರೀಕರಣ ಆರಂಭವಾಗಲಿದೆ ಎನ್ನುವುದು ಗಾಂಧಿನಗರದಿಂದ ನಮ್ಮ ಕಿವಿಗೆ ಬಿದ್ದ ಸುದ್ದಿ.
ಆದರೆ ಚಿತ್ರದ ನಿರ್ಮಾಪಕರಿಂದ ಹಿಡಿದು, ಉಳಿದ ತಾರಾಗಣ, ತಂತ್ರಜ್ಞಾನರ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಒಂದಂತೂ ನಿಜ ತನ್ನ ಚಿತ್ರವಿಚಿತ್ರ ಡ್ಯಾನ್ಸ್ ನಿಂದ ಪ್ರೇಕ್ಷಕರ ಮನಗೆದ್ದಿದ್ದ ಪ್ರಭುದೇವ್, ಪುನೀತ್ ರಾಜಕುಮಾರ್ ಅವರಿಂದ ಕೂಡಾ ಅದೇ ಡ್ಯಾನ್ಸ್ ಹೊರತೆಗೆದರೆ ಆಶ್ಚರ್ಯ ಪಡಬೇಕಾಗಿಲ್ಲ.


Click it and Unblock the Notifications











