ಗೋವಾ ತೀರದಲ್ಲಿ ಮಳೆಯಲಿ ಜೊತೆಯಲಿ
ಪ್ರವಾಸಿಗರ ಸ್ವರ್ಗ ಗೋವಾ. ಅಲ್ಲಿನ ಸಮುದ್ರ ತೀರ ಹಾಗೂ ರಮಣೀಯ ಸ್ಥಳಗಳ ಸೌಂದರ್ಯ ಬಣ್ಣಿಸಲು ಅಸಾಧ್ಯ. ಪ್ರಕೃತಿ ಮಾತೆಯ ವಿಶೇಷ ಸನ್ನಿಧಾನದಿಂದ ಕೂಡಿರುವ ಗೋವಾದಲ್ಲಿ 'ಮಳೆಯಲಿ ಜೊತೆಯಲಿ ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿದೆ.
ಸಾಹಿತಿ ಜಯಂತ ಕಾಯ್ಕಿಣಿ ರಚಿಸಿರುವ 'ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ಇನ್ನು ಈ ಕಾಡು...' ಎಂಬ ಗೀತೆಗೆ ನೃತ್ಯ ನಿರ್ದೇಶಕ ಇಮ್ರಾನ್ ಅವರ ಸಾರಥ್ಯದಲ್ಲಿ ಗೋವಾದಲ್ಲಿ ಚಿತ್ರೀಕರಣಗೊಂಡಿದೆ. ನಾಯಕ ಗಣೇಶ್ ಹಾಗೂ ನಾಯಕಿ ಯುವಿಕಾ ಚೌಧರಿ ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿದ್ದರು.
ಮೇಲಿನ ಹಾಡಿನ ಚಿತ್ರೀಕರಣದೊಂದಿಗೆ 'ಮಳೆಯಲಿ ಜೊತೆಯಲಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ಮಾಪಕಿ ಶ್ರೀಮತಿ ಶಿಲ್ಪಾಗಣೇಶ್ ತಿಳಿಸಿದ್ದಾರೆ.ಗೋಲ್ಡನ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಾಹಕರಾಗಿದ್ದಾರೆ. ವಿ.ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದೇವಶೆಟ್ಟಿ ಮಹೇಶ್ ಸಂಭಾಷಣೆ, ಕವಿರಾಜ್, ಜಯಂತ್ ಕಾಯ್ಕಿಣಿ ಗೀತರಚನೆ ಹಾಗೂ ಮೋಹನ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿಕಹಿಚಂದ್ರು, ಸಿಹಿಕಹಿಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











