"ಕಾಣದ ಕೈಗಳು ಇವೆ.. ಒಂದು ಸಿನಿಮಾಗಾಗಿ ಇನ್ನೊಂದನ್ನು ತುಳಿತಾರೆ"; '45' ನಿರ್ಮಾಪಕರ ಟಾರ್ಗೆಟ್ ಯಾರು?
ಕಳೆದ ವರ್ಷ ಕ್ರಿಸ್‌ಮಸ್‌ಗೆ ಕನ್ನಡದ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ಒಂದು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45'. ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಸಿನಿಮಾವಿದು. ಹೀಗಾಗಿ ದಿಗ್ಗಜರೇ ಸೇರಿ ಮಾಡಿರುವ ಸಿನಿಮಾ ಮೇಲೆ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು.
ಆದರೆ, '45' ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದ ಬಳಿಕ '45' ಸಿನಿಮಾದ ನಿರ್ಮಾಪಕ ಪರೋಕ್ಷವಾಗಿ ಕನ್ನಡ ಚಿತ್ರರಂಗದವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಫಿಲ್ಮಿ ಫಸ್ಟ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಿನಿಮಾವನ್ನು ತುಳಿಯುವುದಕ್ಕೆ ಕಾರಣದ ಕೈಗಳು ಕೆಲಸ ಮಾಡಿವೆ ಎಂದು ಹೇಳಿದ್ದಾರೆ.

ನಿರ್ಮಾಪಕ ರಮೇಶ್ ರೆಡ್ಡಿ ಯಾರನ್ನು ಗುರಿ ಮಾಡಿ ಈ ಆರೋಪ ಮಾಡಿದ್ದಾರೆ ಅನ್ನೋದು ಸದ್ಯಕ್ಕೆ ನಿಗೂಢ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭ ಆಗಿದೆ. ನಿರ್ಮಾಪಕರ ಪ್ರಕಾರ ಚಿತ್ರರಂಗದವರೇ '45' ಸಿನಿಮಾ ಸೋಲಿಸುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಮಾಡಿಸಿದ್ದು, ಜೊತೆಗೆ ಪೈರಸಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಆರೋಪಗಳು ಲಿಸ್ಟ್ ಇಲ್ಲಿವೆ.
"ನಾನು ಗಾರೆ ಕೆಲಸ ಮಾಡಿಕೊಂಡು, ಕಷ್ಟ ಪಟ್ಟು ಇಲ್ಲಿವರೆಗೂ ಬಂದಿದ್ದೇನೆ. ಒಂದು ಮೆಸೇಜ್ ಕೊಡಬೇಕು, ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತ ಬಂದೆ. ನನ್ನ ಹತ್ತಿರ ದುಡ್ಡು ಇದೆ ಅಂತ ತೆಲುಗಿನಲ್ಲಿ ತೆಗೆಯಬಾರದಾ? ತಮಿಳಿನಲ್ಲಿ ತೆಗೆಯಬಾರದಾ? ಮಲಯಾಳಂನಲ್ಲಿ ತೆಗೆಯಬಾರದಾ? ಹಿಂದಿಯಲ್ಲಿ ತೆಗೆಯುವುದಕ್ಕೆ ಆಗುವುದಿಲ್ವಾ? ನಮ್ಮ ಸೂಪರ್‌ಸ್ಟಾರ್‌ಗಳು.. ನಮ್ಮ ಕರ್ನಾಟಕ.. ನಾವು ಇಲ್ಲಿ ಹುಟ್ಟಿ ಬೆಳೆದಿರೋದು, ಪಿಕ್ಚರ್ ತೆಗೆಯಬೇಕು ಅಂತ ಮೂರು ವರ್ಷ ತೆಗೆದುಕೊಂಡರೆ, ಆ ಸಿನಿಮಾವನ್ನು ನೆಗೆಟಿವ್ ಹೊಡೆಯೋದಾ?" ಎಂದು ಪ್ರಶ್ನೆ ಮಾಡಿದ್ದಾರೆ.
"ಕಾಣದ ಕೈಗಳು.. ಇಂಡಸ್ಟ್ರಿಯಲ್ಲಿಯೇ ಇದ್ದಾರೆ. ಒಂದು ಸಿನಿಮಾವನ್ನು ಹೇಗೆ ಮುಗಿಸಬೇಕು ಅಂತ ಅವರು ಪ್ಲ್ಯಾನ್ ಮಾಡಿರುತ್ತಾರೆ. ಮಾತಾಡೋದು ಮಾತ್ರ ದೊಡ್ಡ ಮನುಷ್ಯನ ರೀತಿ ಮಾತಾಡುತ್ತಾರೆ. ಎಲ್ಲಾ ಕಡೆ ಇವರೇ ಅಂತ ಹೇಳುತ್ತಾರೆ. ಒಳಗಡೆ ಬೇರೆನೇ ಇದೆ. ನನಗೆ ತುಂಬಾನೇ ಬೇಜಾರಾಯ್ತು. ಈ ಇಂಡಸ್ಟ್ರಿಯಲ್ಲಿಯೇ ಇದ್ದಾರೆ. ಇದು ಹೇಗೆ ಉದ್ದಾರ ಆಗುತ್ತೋ ನನಗೆ ಗೊತ್ತಿಲ್ಲ." ಎಂದು ರಮೇಶ್ ರೆಡ್ಡಿ ಆರೋಪಿಸಿದ್ದಾರೆ.
"ನಾನೊಬ್ಬ ಕನ್ನಡ ನಿರ್ಮಾಪಕ. ನನಗೆ ನೆಗೆಟಿವ್ ಹೊಡೆಸೋದು, ಪೈರಸಿ ಮಾಡೋದು ಮಾಡಿದ್ದಾರೆ. ನನ್ನ ಮೊಬೈಲ್‌ಗೆ ಬಂತು, ನೋಡಿ ತುಂಬಾನೇ ಬೇಜಾರಾಯ್ತು. ಯಾರು ನನಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಪೋರ್ಟ್ ಮಾಡುತ್ತಾರೆ. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತ ಹೇಳುತ್ತೇವೆ. ಯಾರು ಬೆಂಬಲಕ್ಕೆ ಬಂದರು? ಮಾತಾಡುವುದಕ್ಕೆ ಮಾತ್ರ ಒಳ್ಳೊಳ್ಳೆ ಮಾತಾಡುತ್ತಾರೆ." ಎಂದು ಕಿಡಿಕಾರಿದ್ದಾರೆ.

"ಎಲ್ಲಾ ಕನ್ನಡ ಸಿನಿಮಾನೇ ಅಲ್ವಾ? ಒಂದು ಸಿನಿಮಾಗಾಗಿ ಇನ್ನೊಂದು ಸಿನಿಮಾವನ್ನು ತುಳಿಯುವುದಕ್ಕೆ ಆಗುತ್ತಾ? ಈಗಲೂ ಜನರು ಸಿನಿಮಾ ನೋಡಲಿ. ಸಿನಿಮಾ ಅಂದ್ಮೇಲೆ ಸಣ್ಣ ಪುಟ್ಟ ತಪ್ಪು ಇದ್ದೇ ಇರುತ್ತೆ. ಕನ್ನಡ ಇಷ್ಟು ಖರ್ಚು ಮಾಡಿದ್ದೇನಲ್ವಾ? ಬಿಗ್ ಬಜೆಟ್ ಸಿನಿಮಾ ಅಲ್ವಾ? ಹೇಗೆ ಮನಸ್ಸು ಬರುತ್ತೆ? ಕನ್ನಡ ಚಿತ್ರರಂಗದಲ್ಲಿ ಹೀಗಿದೆ ಅಂತ ಗೊತ್ತಿರಲಿಲ್ಲ. ಬೇರೆ ಭಾಷೆಗೆ ಹೋಗಿ ಸಿನಿಮಾ ಮಾಡೋಣ ಅಂತ ಅನಿಸಿದೆ." ಎಂದು ರಮೇಶ್ ರೆಡ್ಡಿ ಭಾವುಕರಾಗಿ ಮಾತಾಡಿದ್ದಾರೆ. ಆದರೆ, ಇದೆಲ್ಲ ಮಾಡಿಸುತ್ತಿರೋದು ಯಾರು ಅನ್ನೋದನ್ನು ಮಾತ್ರ ನೇರವಾಗಿ ಹೇಳಿಲ್ಲ. ಈ ಆರೋಪ ಯಾರ ಬುಡಕ್ಕೆ ಬಂದು ಬೀಳುತ್ತೋ ಕಾದು ನೋಡೋಣ.


Click it and Unblock the Notifications











