ಸಿ ಎಂ ಸ್ಮಿಮ್ಮಿಂಗ್ ಪೂಲ್ ನಲ್ಲಿ ರಕ್ಷಿತ್ ಕಾರಲ್ಲ ಲಿಕಿತ್ ಶೆಟ್ಟಿ ಕಾರು!
ಮುಂಗಾರು ಮಳೆಗೂ ಮುನ್ನ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು ಕೂಡ ಮಳೆ ಅವಾಂತರಕ್ಕೆ ತತ್ತರಿಸಿ ಹೋಗಿದೆ. ಬೆಂಗಳೂರಿನ ಹಲವು ಏರಿಯಾಗಳು ವರುಣ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ನಿನ್ನೆ ( ಮೇ 17) ಸುರಿದ ಮಳೆಗೆ ಬೆಂಗಳೂರಿನ ಜಯನಗರ, ಬಸವನಗುಡಿ, ಮೈಸೂರು ರಸ್ತೆ, ಯಲಹಂಕ, ಬೊಮ್ಮನಹಳ್ಳಿ, ಬಿಟಿಎಂ ಲೇ ಔಟ್, ಕೋರಮಂಗಲದ ಹಲವು ಏರಿಯಾಗಳು ಜಲಾವೃತವಾಗಿದೆ.
ಗುಡುಗು ಸಹಿತ ನಿರಂತರ ಮಳೆ ಸುರಿದಿದ್ದರಿಂದ ಬೆಂಗಳೂರಿನ ರಸ್ತೆಗಳು ಸ್ವಿಮ್ಮಿಂಗ್ ಪೂಲ್‌ನಂತಾಗಿತ್ತು. ಇದೇ ವೇಳೆ ರಸ್ತೆ ಸಂಚಾರಕ್ಕೂ ಅಡೆ-ತಡೆಗಳಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಮೈಸೂರು ರಸ್ತೆಯ ಸಮೀಪ ನಾಯಂಡಹಳ್ಳಿಗೆ ನೀರು ನುಗ್ಗಿತ್ತು. ಈ ವೇಳೆ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸ್ವಿಮ್ಮಿಂಗ್ ಪೂಲ್‌ನಂತಾಗಿತ್ತು. ನಿನ್ನೆ(ಮೇ 17) ನಡೆದ ಈ ಅವಾಂತರದಲ್ಲಿ ನಟ ರಕ್ಷಿತ್ ಶೆಟ್ಟಿ ಕಾರು ಸಿಕ್ಕಿಕೊಂಡಿತ್ತು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಾಯಂಡಹಳ್ಳಿ ಬಳಿ ರಕ್ಷಿತ್ ಶೆಟ್ಟಿ ಕಾರಿಗೆ ನುಗ್ಗಿದ ನೀರು
ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ನಾಯಂಡಹಳ್ಳಿ ಸಮೀಪ ಮೈಸೂರು ರಸ್ತೆಯಲ್ಲಿ ಮಳೆ ನಿಂತು ಸ್ವಿಮ್ಮಿಂಗ್ ಪೂಲ್‌ನಂತಾಗಿತ್ತು. ಈ ವೇಳೆ ಯುವಕರೊಬ್ಬರು ವಿಡಿಯೋ ಮಾಡಿದ್ದರು. ಮಳೆಯಿಂದಾದ ಅವಾಂತರದಿಂದ ಸಿಟ್ಟಿಗೆದ್ದಿದ್ದ ಯುವಕ ಸಿಎಂ ಬಸವರಾಜ ಬೊಮ್ಮಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ರಸ್ತೆಯಲ್ಲೇ ಸ್ವಿಮ್ ಮಾಡಿ ತೋರಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿ ಕಾರು ಮಳೆಯಲ್ಲಿ ಸಿಕ್ಕಿಕೊಂಡಿದೆ ಎಂದು ತೋರಿಸಿದ್ದರು.

ನಾಯಂಡಹಳ್ಳಿ ಸಮೀಪ ಮೈಸೂರು ರಸ್ತೆಯ ಮಧ್ಯೆಯಲ್ಲಿ ಕಪ್ಪು ಕಾರೊಂದು ಮುಂದೆ ಹೋಗಲಾರದೆ ನಿಂತಿತ್ತು. ಈ ವೇಳೆ ಆ ಯುವಕ ಇದು ರಕ್ಷಿತ್ ಶೆಟ್ಟಿಯ ಕಾರು ಎಂದು ವಿಡಿಯೋದಲ್ಲಿ ತೋರಿಸಿದ್ದಾರೆ. ಆದರೆ, ರಕ್ಷಿತ್ ಆಗಲಿ, ಅವರ ತಂಡವಾಗಲಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದ್ರೀಗ ಅದು ರಕ್ಷಿತ್ ಶೆಟ್ಟಿ ಕಾರಲ್ಲ, 'ಫ್ಯಾಮಿಲ ಪ್ಯಾಕ್' ಸಿನಿಮಾದ ನಾಯಕ ನಟ ಲಿಕಿತ್ ಶೆಟ್ಟಿ ಕಾರು ಅನ್ನೋದು ಕನ್ಫರ್ಮ್ ಆಗಿದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿಸಿದ್ದ ಹೊಸ ಕಾರು
ಕಳೆದ ವರ್ಷ ಆಗಸ್ಟ್‌ನಲ್ಲಿ ರಕ್ಷಿತ್ ಶೆಟ್ಟಿ ಹೊಸ ಕಾರನ್ನು ಖರೀದಿಸಿದ್ದರು ಎನ್ನಲಾಗಿತ್ತು. ಕಪ್ಪು ಬಣ್ಣದ ಔಡಿ ಕಾರಿನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಹೊಸ ಕಾರಿನ ಮುಂದೆ ರಕ್ಷಿತ್ ಶೆಟ್ಟಿ ನಿಂತಿದ್ದ ಫೋಟೊಗಳು ವೈರಲ್ ಆಗಿತ್ತು.
ಸದ್ಯ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ '777 ಚಾರ್ಲಿ' ಬಿಡುಗಡೆಗೆ ಸಜ್ಜಾಗಿದೆ. ನಿನ್ನೆ (ಮೇ 17) '777 ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಐದೂ ಭಾಷೆಯಲ್ಲೂ ಸಿನಿಮಾ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬೇರೆ ಬೇರೆ ಚಿತ್ರರಂಗದ ಸೆಲೆಬ್ರೆಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಮೂರು ನಾಲ್ಕು ದಿನ ಸಂಜೆಯ ಮೇಲೆ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ಸಂಜೆ ವೇಳೆ ಸಂಚಾರ ಅಸ್ತವ್ಯಸ್ತ ಆಗುವ ಸಾಧ್ಯತೆಯಿದೆ.


Click it and Unblock the Notifications











