ಕ್ಯಾನ್ಸರ್ ಗೆದ್ದು ಬಂದ ಶಿವಣ್ಣನ ಜರ್ನಿಯ ಗ್ಲಿಂಪ್ಸ್ ನೋಡಿದ್ರಾ? ಚೀನಾದ ಮಹಾಗೋಡೆ ಬಗ್ಗೆ ಮಾತ್ಯಾಕೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಚಿರಯುವಕ. ವಯಸ್ಸಾಗುತ್ತಿದ್ದರೂ ಶಿವಣ್ಣ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಈ ಬಗ್ಗೆ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಶಿವಣ್ಣನದ್ದು ಶಿಸ್ತಿನ ಜೀವನ. ಪ್ರತಿ ದಿನ ಬೆಳಗ್ಗೆ ಎದ್ದು ಮಿಸ್ ಇಲ್ಲದೆ ವಾಕಿಂಗ್ ಮಾಡೋದು, ಡಯೆಟ್ ಹೀಗೆ ಶಿವಣ್ಣನನ್ನು ಈ ವಿಚಾರದಲ್ಲಿ ಹಿಂದಿಕ್ಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಇಷ್ಟೊಂದು ಫಿಟ್ ಆಗಿದ್ದ ಶಿವಣ್ಣನಿಗೆ ಕ್ಯಾನ್ಸರ್ ಅಂದಾಗ ಅವರ ಅಭಿಮಾನಿಗಳು ಅಷ್ಟೇ ಅಲ್ಲ. ಕನ್ನಡಿಗರೇ ಒಮ್ಮೆ ಶಾಕ್ ಹಾಗಿದ್ದರು. ಶಿವಣ್ಣನಿಗೆ ಅಂತಹದ್ದೇನಾಯ್ತು? ಮುಂದೇನು? ಅನ್ನೋ ಆತಂಕಗಳೆಲ್ಲವೂ ಹುಟ್ಟಿಕೊಂಡಿದ್ದವು. ಅಭಿಮಾನಿಗಳು ಪ್ರತಿ ದಿನ ಮಾಡದ ಪೂಜೆಗಳಿಲ್ಲ. ಹೊತ್ತ ಹರಕೆಗಳು ಇಲ್ಲ. ಈ ಎಲ್ಲಾ ಆತಂಕಗಳ ನಡುವೆ ಶಿವಣ್ಣ ಮಾನಸಿಕವಾಗಿ ಹೇಗಿದ್ದಾರೆ ಅನ್ನೋ ಆತಂಕ ಬೇರೆ.

ಕ್ಯಾನ್ಸರ್ ಬಂದಿದೆ ಅನ್ನೋದೇ ಅದೆಷ್ಟೋ ಮಂದಿಯನ್ನು ಕುಗ್ಗಿಸಿಬಿಡುತ್ತೆ. ಇನ್ನು ಶಿವಣ್ಣನ ಪರಿಸ್ಥಿತಿ ಏನಿರಬಹುದು? ಅವರ ಮನೆಯವರ ಮನಸ್ಥಿತಿ ಹೇಗಿತ್ತು? ಕ್ಯಾನ್ಸರ್ ಗೆಲ್ಲುವುದಕ್ಕೆ ಶಿವಣ್ಣ ತಯಾರಿ ಹೇಗಿತ್ತು? ಶಸ್ತ್ರ ಚಿಕಿತ್ಸೆಗೆ ಶಿವಣ್ಣ ವಿಯಾಮಿಗೆ ಹೋದಾಗ ಏನಾಯ್ತು? ಆಸ್ಪತ್ರೆ ವೈದ್ಯರು ಏನಂದ್ರು? ಅವರ ಟ್ರೀಟ್ಮೆಂಟ್ ಹೇಗೆ ನಡೀತು? ಇವೆಲ್ಲವನ್ನೂ ಜನರ ಮುಂದೆ ಇಡುವುದಕ್ಕೊಂದು ಡಾಕ್ಯೂಮೆಂಟರಿ ರೆಡಿಯಾಗಿದೆ. ಅದುವೇ 'ಸರ್ವೈವರ್'. ಗಣರಾಜ್ಯೋತ್ಸವದ ಅಂಗವಾಗಿ ಶಿವಣ್ಣ 'ಸರ್ವೈವರ್' ಗ್ಲಿಂಪ್ಸ್ ಈಗ ಹೊರ ಬಿದ್ದಿದೆ.
ಶಿವಣ್ಣನಿಗೆ ಕ್ಯಾನ್ಸರ್ ಇರೋದು ಗೊತ್ತಾದ ಕ್ಷಣದಿಂದ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಹಿಂತಿರುಗಿದ ಕ್ಷಣದವರೆಗೂ ಏನಲ್ಲ ಆಯ್ತು? ಶಿವಣ್ಣನ ಚಿಕಿತ್ಸೆಯಿಂದ ಹಿಡಿದು ಮನಸ್ಥಿತಿಯವರೆಗೂ ಈ ಡಾಕ್ಯೂಮೆಂಟರಿಯಲ್ಲಿ ದಾಖಲು ಮಾಡಲಾಗಿದೆ. ವೈದ್ಯರ ಹೇಳಿಕೆಗಳು, ಪತ್ನಿ ಗೀತಾ ಶಿವರಾಜ್‌ಕುಮಾರ್, ಮಕ್ಕಳು ಹಾಗೂ ಆಪ್ತರು ಈ ಡಾಕ್ಯೂಮೆಂಟರಿಯಲ್ಲಿ ಶಿವಣ್ಣ ಕ್ಯಾನ್ಸರ್ ಗೆದ್ದ ದಿನಗಳನ್ನು ಮೆಲುಕು ಹಾಕಲಿದ್ದಾರೆ.
ಸದ್ಯ ಗಣರಾಜ್ಯೋತ್ಸವಕ್ಕೆ ಹೊರ ಬಿದ್ದಿರುವ 'ಸರ್ವೈವರ್' ಗ್ಲಿಂಪ್ಸ್‌ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಶಿವರಾಜ್‌ಕುಮಾರ್ ಮಾತಾಡಿದ್ದಾರೆ. ಈ ವಿಡಿಯೋವನ್ನು ಶಿವಣ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ಹೋಗುವಾಗ ನಿಮ್ಮ ಹಾರೈಕೆಗಳನ್ನು ಹೊತ್ತು, ಅಲ್ಲಿದಾಗ ನಿಮ್ಮ ಪ್ರಾರ್ಥನೆಗಳನ್ನು ನೆನೆದು, ಮರಳಿ ಬಂದಾಗ ನಿಮ್ಮ ನಗುವಿನಲ್ಲಿ ಮೆರೆದು - ನಿಮ್ಮೆಲ್ಲರೊಂದಿಗೆ ನಾನು ಕೂಡ ಗೆದ್ದು ಬಂದು ಹೇಳಲು ಮುಂದಾಗಿರುವ ಕಥೆ.. ಸರ್ವೈವರ್" ಎಂದು ಶಿವಣ್ಣ ಭಾವುಕರಾಗಿ ಬರೆದು ಚಿಕ್ಕದೊಂದು ತುಣುಕನ್ನು ಹಂಚಿಕೊಂಡಿದ್ದಾರೆ.
ಇನ್ನು 'ಸರ್ವೈವರ್' ಗ್ಲಿಂಪ್ಸ್‌ನಲ್ಲಿ ಶಿವಣ್ಣನಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರು ಮಾನಸಿಕವಾಗಿ ಎಷ್ಟು ಸ್ಟ್ರಾಂಗ್ ಇದ್ದರು ಅನ್ನೋದನ್ನು ವಿವರಿಸಿದ್ದಾರೆ. "ಶಿವಣ್ಣ ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್. ತುಂಬಾ ಪಾಸಿಟಿವ್ ವ್ಯಕ್ತಿ. ಹಾಗೇ ಅವರು ಭಾವನಾತ್ಮಕ ವ್ಯಕ್ತಿ. ಅವರು ಕುಟುಂಬದೊಂದಿಗೆ ತುಂಬಾನೇ ಬೆರೆತು ಹೋಗಿದ್ದಾರೆ. ಅಭಿಮಾನಿಗಳನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ." ಶಿವಣ್ಣನಿಗೆ ಚಿಕಿತ್ಸೆ ನೀಡಿದ ವೈದ್ಯರ ಹಿನ್ನೆಲೆ ಧ್ವನಿ ಕೇಳಿಸುತ್ತೆ.
ಇನ್ನು ಶಿವಣ್ಣ ಕೂಡ ಮಾತಾಡಿದ್ದು, ಅಭಿಮಾನಿಗಳು ತನ್ನ ಪರವಾಗಿ ಗೋಡೆಯಂತೆ ನಿಂತಿದ್ದರು ಎಂದು ಹೇಳಿಕೊಂಡಿದ್ದಾರೆ. "ಜನರು ನನಗೆ ಒಂಥರಾ ಚೀನಾದ ಮಹಾಗೋಡೆಯಿದ್ದಂತೆ. ಗೋಡೆ ಹಾಕಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಅಭಿಮಾನಿ ದೇವರುಗಳು ಸೇರಿ ಎಲ್ಲರೂ ನನ್ನ ಜೊತೆ ನಿಂತಿದ್ದಾರೆ." ಎಂದು ಈ ಸರ್ವೈವರ್ ಗ್ಲಿಂಪ್ಸ್‌ನಲ್ಲಿ ಶಿವರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. ಇನ್ನು ಈ ಡಾಕ್ಯೂಮೆಂಟರಿಯನ್ನು ಪ್ರದೀಪ್ ಶಾಸ್ತ್ರಿ ನಿರ್ದೇಶನ ಮಾಡಿದ್ದರೆ, ಅಶ್ವಿನ್ ಪಿ ಕುಮಾರ್ ಸಂಗೀತ ನಿರ್ದೇಶನ, ಭಜರಂಗ್ ಕೋನಥಮ್ ಕ್ಯಾಮರಾ ವರ್ಕ್ ಇದೆ. ಇನ್ನು 'ಸರ್ವೈವರ್' ಯಾವಾಗ ರಿಲೀಸ್ ಆಗಬಹುದು ಅನ್ನೋ ಇನ್ನೂ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











