ದರ್ಶನ್ ಸಿನಿಮಾದಲ್ಲಿ ವಿಲನ್ ಆಗ್ತಾರಾ ಅಭಿಷೇಕ್ ಅಂಬರೀಶ್? ಏನಿದು ಹೊಸ ಮ್ಯಾಟರ್?
ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಶ್ ಇಬ್ಬರೂ ತುಂಬಾನೇ ಆತ್ಮೀಯರು. ಈ ವಿಷಯ ಇಡೀ ಇಂಡಸ್ಟ್ರಿಗೆ, ಅವರ ಅಭಿಮಾನಿ ಬಳಗಕ್ಕೆ ಗೊತ್ತೇ ಇದೆ. ಅದರಲ್ಲೂ ದರ್ಶನ್ ಹಾಗೂ ಅಂಬರೀಶ್ ಕುಟುಂಬದ ನಡುವಿನ ಸಂಬಂಧ ಕೂಡ ಗೊತ್ತೇ ಇದೆ. ಹೀಗಾಗಿ ದರ್ಶನ್ ಸಿನಿಮಾಗೆ ಅಭಿಷೇಕ್, ಅಭಿ ಸಿನಿಮಾಗೆ ದರ್ಶನ್ ಸದಾ ಬೆಂಬಲವಾಗಿ ನಿಂತಿರುತ್ತಾರೆ.
ಇಂದು(ನವೆಂಬರ್ 10) ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ರಿಲೀಸ್ ಆಗಿದೆ. ಅದೇ ಇನ್ನೊಂದು ಕಡೆ ಅಭಿಷೇಕ್ ಅಂಬರೀಶ್ ನಟಿಸಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿ ಯಂಗ್ ರೆಬೆಲ್ ಸ್ಟಾರ್ ಈಗಿನಿಂದಲೇ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ.

ಸದ್ಯ ಅಭಿಷೇಕ್ ಅಂಬರೀಶ್ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅಲ್ಲಿ ದರ್ಶನ್ ಸಿನಿಮಾ ವಿಲನ್ ಆಗಿ ನಟಿಸುತ್ತೀರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಅಭಿ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಪ್ರಶ್ನೆ ಕೇಳಿದ್ದು ಏನಕ್ಕೆ? ಅದಕ್ಕೆ ಅಭಿ ಉತ್ತರ ಏನಿತ್ತು? ತಿಳಿಯೋಕೆ ಮುಂದೆ ಓದಿ...
ದರ್ಶನ್ ಸಿನಿಮಾಗೆ ವಿಲನ್ ಆಗ್ತಾರಾ?
ದರ್ಶನ್ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಹಲವರ ಆಸೆ. ಅದೇ ಮತ್ತೆ ಕೆಲವು ನಟರಿಗೆ ಅವರ ಸಿನಿಮಾದಲ್ಲಿ ದರ್ಶನ್ ಚಿಕ್ಕ ಪಾತ್ರದಲ್ಲಿ ನಟಿಸಬೇಕು ಅನ್ನೋ ಹಂಬಲ. ಇವೆರಡೂ ಕನ್ನಡ ಚಿತ್ರರಂಗದಲ್ಲಿ ಇದೆ. ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾದಲ್ಲೇ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈಗ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ವಿಲನ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಬಯಕೆ ಅಭಿಮಾನಿಗಳದ್ದು. ಇದೇ ಪ್ರಶ್ನೆಯನ್ನೇ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಕೇಳಲಾಗಿತ್ತು. ಅದಕ್ಕೆ ಅಭಿಷೇಕ್ ಅಂಬರೀಶ್ ಕೊಟ್ಟ ಉತ್ತರ ಕೂಡ ಕ್ಲಾಸಿಕ್ ಆಗಿದೆ.

"ದರ್ಶನ್ ಜೊತೆ ನಟಿಸೋಕೆ ಇಷ್ಟ"
ಅಭಿಷೇಕ್ ಅಂಬರೀಶ್ ಯಾವಾಗಲೂ ದರ್ಶನ್‌ರನ್ನು ನಮ್ಮಣ್ಣ ಅಂತಲೇ ಹೇಳುತ್ತಾರೆ. ವೃತ್ತಿ ಇರಲಿ.. ವೈಯಕ್ತಿಕ ವಿಷಯಗಳಿರಲಿ. ಅವರೊಂದಿಗೆ ಚರ್ಚೆ ಮಾಡುವಷ್ಟು ಸಲಿಗೆ. ಇನ್ನು ಒಂದೇ ಸಿನಿಮಾದಲ್ಲಿ ನಟಿಸೋ ವಿಚಾರ ಬಂದಾಗ ಅಭಿಷೇಕ್ ಹೇಳಿದ್ದಿಷ್ಟು. "ದರ್ಶನ್ ಸಿನಿಮಾ ವಿಲನ್ ಆಗಿ ನಟಿಸುವುದಕ್ಕೆ ಅವಕಾಶ ಬಂದರೆ ಖಂಡಿತಾ ಮಾಡುತ್ತೇನೆ. ಅವರೊಂದಿಗೆ ನಟಿಸುವುದಕ್ಕೆ ನನಗೆ ಇಷ್ಟ. ಅದು ಯಾವುದೇ ರೋಲ್ ಇರಲಿ. ನಾನು ನಟನೆ ಮಾಡುತ್ತೇನೆ." ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
"ಅವರೊಂದಿಗೆ ಮಾತಾಡಿದ್ದೇನೆ"
ಈಗಾಗಲೇ ಅಭಿಷೇಕ್ ಅಂಬರೀಶ್ ಚಾಲೆಂಜಿಂಗ್ ಸ್ಟಾರ್ ಬಳಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆನೂ ಮಾತಾಡಿದ್ದಾಗಿ ಹೇಳಿಕೊಂಡಿದ್ದಾರೆ. "ಕೇಳಿದ್ದೀನಿ ಯಾವಾಗ ಮಾಡೋಣ ಅಂತ. ಕಥೆ ಚೆನ್ನಾಗಿದ್ದರೆ ಖಂಡಿತಾ ಮಾಡೋಣ ಅಂತ ಹೇಳಿದ್ದಾರೆ. ಅದು ಒಳ್ಳೆ ಪಾತ್ರನೋ ಇನ್ನೊಂದು. ಆ ಸಿನಿಮಾಗೆ ನನ್ನಿಂದ ಒಳ್ಳೆಯದಾಗುತ್ತೆ ಅಂದರೆ ಖಂಡಿತಾ ಮಾಡುತ್ತೇನೆ." ಎಂದು ಅಭಿ ಹೇಳಿದ್ದಾರೆ.
"ಕಥೆಗೆ ಡಿಮ್ಯಾಂಡ್ ಇದ್ದರೆ ಓಕೆ"
"ಇಂತಹ ಸಮಾಗಮ ಆಗಬೇಕು. ಹಾಗಂತ ಮಾರ್ಕೆಟಿಂಗ್ ಹಾಗೂ ಹಣದ ದೃಷ್ಟಿಯಿಂದ ಅಂತಲ್ಲ. ಕಥೆಗೆ ಡಿಮ್ಯಾಂಡ್ ಇದ್ದರೆ ಖಂಡಿತಾ ಒಂದೇ ಸಿನಿಮಾದಲ್ಲಿ ನಟಿಸಬಹುದು. ಅವರು ಇಲ್ಲ ಅನ್ನೋದಿಲ್ಲ. ನಾನು ಇಲ್ಲ ಅನ್ನೋದಿಲ್ಲ. " ಎಂದು ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಬಗ್ಗೆ ಓಪನ್ ಆಗಿ ಸಂದರ್ಶನದಲ್ಲಿ ಮಾತಾಡಿದ್ದಾರೆ.


Click it and Unblock the Notifications











