ಪುನೀತ್ ಮನೆಗೆ ಅರ್ಜುನ್ ಸರ್ಜಾ ಹಾಗೂ ಪತ್ನಿ ಭೇಟಿ: 'ಅಪ್ಪು ಅಗಲಿದ ಮೇಲೆ ಲೈಫೇ ಒಂಥರಾ ಡಿಪ್ರೆಸ್ ಆಗಿತ್ತು'
ಪುನೀತ್ ರಾಜ್‌ಕುಮಾರ್ ಅಗಲಿಕೆ ಇಂದಿಗೂ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್. ಅಪ್ಪು ನಿಧನದ ನೋವು ಅಷ್ಟು ಸುಲಭಕ್ಕೆ ದೂರ ಆಗುವಂತಹದಲ್ಲ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಬಲ್ಲವರಿಗಂತೂ ಈ ನೋವು ಸದಾ ಕಾಡುತ್ತಲೇ ಇರುತ್ತೆ. ಈ ಕಾರಣಕ್ಕೆ ಪರಭಾಷೆಗಳಿಂದ ತಾರೆಯರು ಪುನೀತ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಪ್ಪು ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ.
ದಕ್ಷಿಣ ಭಾರತದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂದು (ಫೆಬ್ರವರಿ 16) ಅಪ್ಪು ಮನೆಗೆ ಭೇಟಿ ನೀಡಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಅವರ ಪತ್ನಿ ನಿವೇದಿತಾ( ಆಶಾ ರಾಣಿ) ಕೂಡ ಭೇಟಿ ನೀಡಿದ್ದರು. ಪುನೀತ್ ರಾಜ್‌ಕುಮಾರ್ ಹಾಗೂ ಅರ್ಜುನ್ ಸರ್ಜಾ ಪತ್ನಿ ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರು. ಒಟ್ಟಿಗೆ ಆಡಿಕೊಂಡು ಬೆಳೆದಿದ್ದರು. ಪುನೀತ್ ನಿಧನ ಹೊಂದಿದ ವೇಳೆ ಆಶಾರಾಣಿ (ನಿವೇದಿತಾ) ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಇಂದು (ಫೆ.16) ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅರ್ಜುನ್ ಸರ್ಜಾ ಮಾತನಾಡಿದರು.

ಅಪ್ಪು ಹಾಗೂ ನನ್ನ ಪತ್ನಿ ತುಂಬಾ ಕ್ಲೋಸ್
"ಮೂರು ತಿಂಗಳಾಯಿತು. ಪುನೀತ್ ನಿಧನರಾದಾಗ ನಾನು ಬಂದಿದ್ದೆ. ಅಂದು ನನ್ನ ಹೆಂಡ್ತಿ ಬಂದಿರಲಿಲ್ಲ. ಅಪ್ಪುಗೆ ನನ್ನ ಪತ್ನಿ ತುಂಬಾನೇ ಕ್ಲೋಸ್. ಇಬ್ಬರೂ ಚಿಕ್ಕ ವಯಸ್ಸಿನಲ್ಲಿ ಒಟ್ಟಿಗೆ ಬೆಳೆದು ಬಂದವರು. ಆ ಕಾರಣದಿಂದ ಮತ್ತೆ ಅವರನ್ನು ನೋಡಿಕೊಂಡು ಹೋಗೋಣ ಅಂತ ಬಂದಿದ್ದೇವೆ. ಅವರ ಕುಟುಂಬ ಹೇಗಿದೆ ಅಂತ ವಿಚಾರಿಸಿಕೊಂಡು ಹೋಗೋಣ ಅಂತ ಬಂದ ಭೇಟಿ ಅಷ್ಟೇ ಇದು" ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

ಅಪ್ಪನಷ್ಟೆ ಎತ್ತರಕ್ಕೆ ಬೆಳೆದು ಹೋಗಿಬಿಟ್ಟ
ಇದೇ ವೇಳೆ ಅರ್ಜುನ್ ಸರ್ಜಾ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. "ಅಪ್ಪು ಬಗ್ಗೆ ಏನು ಹೇಳಿದರೂ, ಎಷ್ಟು ಹೇಳಿದರೂ ಅದು ಕಮ್ಮಿನೇ. ಅಂತಹ ಒಬ್ಬ ಮಹಾನ್ ಕಲಾವಿದರ ಮಗ ಅಷ್ಟೇ ಎತ್ತರಕ್ಕೆ ಬೆಳೆದು, ಇಷ್ಟು ಪುಟ್ಟ ವಯಸ್ಸಿನಲ್ಲಿ, ಇಷ್ಟು ಹೆಸರು ಮಾಡಿ ಹೋಗಿರುವಂತಹ ಹುಡುಗನನ್ನು ಎಷ್ಟು ನೆನೆಸಿಕೊಂಡರೂ ಕಮ್ಮಿನೇ." ಎಂದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದಾರೆ.

ಅಪ್ಪು ಹೋದ್ಮೇಲೆ ಲೈಫೇ ಡಿಪ್ರೆಸ್ ಆಗಿತ್ತು
ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವಾಗಿತ್ತು. ಕುಟುಂಬ ಅಪ್ಪು ನೆನೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. "ಅಪ್ಪುಗೆ ಈತರ ಆದಮೇಲೆ ಲೈಫೇ ಒಂಥರಾ ಡಿಪ್ರೆಸ್ ಆಗಿ ಹೋಯ್ತು. ನಮಗೆ ಹಾಗೆ ಆಗಿರುವಾಗ, ಫ್ಯಾಮಿಲಿಗೆ ಹೇಗಿರುತ್ತೆ ಅನ್ನುವುದನ್ನು ನಾವು ಊಹಿಸಿಕೊಳ್ಳಬಲ್ಲೆವು. ಅದೇ ಅವರ ಕುಟುಂಬಕ್ಕೆ ಏನು ಹೇಳಬೇಕು ಅಂತಾನೇ ಗೊತ್ತಾಗಿಲ್ಲ. ಕಷ್ಟದಲ್ಲಿ ನಾವಿದ್ದೀವಿ ಅಂತ ಒಂದು ಮಾತು ಹೇಳಿ ಬಂದೆ. ಇನ್ನೇನು ಹೇಳಲು ಸಾಧ್ಯನೇ ಆಗಿಲ್ಲ." ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

'ಜೇಮ್ಸ್' ರಿಲೀಸ್‌ಗೆ ಕಾಯ್ತಿದ್ದಾರೆ ಫ್ಯಾನ್ಸ್
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ರಿಲೀಸ್ ಆಗಲೇಬೇಕು ಚಿತ್ರತಂಡ ಪಟ್ಟು ಹಿಡಿದು ಕೂತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್‌ನಲ್ಲೂ 'ಜೇಮ್ಸ್' ಮಾರ್ಚ್ 17ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಪವರ್‌ಸ್ಟಾರ್ ಅಭಿಮಾನಿಗಳು ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











