ಬಹುಭಾಷಾ ನಟ ಪ್ರಕಾಶ್ ರೈ ತಾಯಿ ನಿಧನ; ಗಣ್ಯರಿಂದ ಸಂತಾಪ
ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಅವರ ತಾಯಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. 85 ವರ್ಷ ವಯಸ್ಸಾಗಿದ್ದ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಬೆಂಗಳೂರಿನ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಕಾಶ್ ರಾಜ್ ಹಾಗೂ ಅವರ ಕುಟುಂಬಕ್ಕೆ ಚಿತ್ರರಂಗ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರಿಂದ ಸಂತಾಪಗಳ ಸುರಿಮಳೆ ಕೇಳಿ ಬರುತ್ತಿದೆ.
ಪ್ರಕಾಶ್ ರಾಜ್ ಅವರ ಸಾಧನೆಯ ಹಿಂದೆ ತಾಯಿ ಸ್ವರ್ಣಲತಾ ಅವರ ಪಾತ್ರ ಬಹಳ ದೊಡ್ಡದಿತ್ತು. ತಾಯಿಯನ್ನು ತುಂಬಾನೇ ಹಚ್ಚಿಕೊಂಡಿದ್ದ ಪ್ರಕಾಶ್ ರಾಜ್‌ಗೆ ಮಾತೃ ವಿಯೋಗ ಶೋಕದಲ್ಲಿ ಮುಳುಗಿಸಿದೆ. ಪ್ರಕಾಶ್ ರೈ ಅವರನ್ನು ಹತ್ತಿರದಿಂದ ಬಲ್ಲವರು ಹಾಗೂ ಅವರೊಂದಿಗೆ ಒಡನಾಟ ಇಟ್ಟುಕೊಂಡವರು ಧೈರ್ಯವನ್ನು ತುಂಬಿದ್ದಾರೆ.

ಪ್ರಕಾಶ್ ರಾಜ್ ಅವರ ಬದುಕು ಆರಂಭದ ದಿನಗಳಲ್ಲಿ ಸುಖಮಯವಾಗಿರಲಿಲ್ಲ. ಅವರ ತಾಯಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದರು. ಈ ವಿಷಯವನ್ನು ಬಹುಭಾಷಾ ನಟ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ತಾಯಿ ತೋರಿದ ಪ್ರೀತಿ, ಮಾರ್ಗದರ್ಶನ ಹಾಗೂ ಸ್ಪೂರ್ತಿಯೇ ತಮ್ಮ ಸಾಧನೆಗೆ ಪ್ರಮುಖ ಕಾರಣ ಎಂದು ಹೇಳಿಕೊಂಡಿದ್ದರು. ಇದು ಅವರು ತಾಯಿ ಸ್ವರ್ಣಲತಾ ಅವರ ಮೇಲೆ ಇಟ್ಟಿರುವ ಗೌರವವನ್ನು ಸೂಚಿಸಿತ್ತು.
ನಟ ಪ್ರಕಾಶ್ ರೈ ಅವರಂತೆಯೇ ತಾಯಿ ಸ್ವರ್ಣಲತಾ ಅವರ ಬದುಕು ಕೂಡ ಕಷ್ಟದಿಂದಲೇ ಕೂಡಿತ್ತು. ಮೂಲತ: ಗದಗದವರಾಗಿರುವ ಸ್ವರ್ಣಲತಾ ಅವರು ಅಜ್ಜಿ ನಿಧನದ ಬಳಿಕ ಬೆಳಗಾವಿಯ ಅನಾಥಾಶ್ರಮದಲ್ಲಿ ಬೆಳೆದರು. ಬಳಿಕ ಅವರು ನರ್ಸಿಂಗ್ ತರಬೇತಿಯನ್ನು ಪಡೆದು ಬೆಂಗಳೂರಿಗೆ ಬಂದು ನೆಲೆಸಿದರು. ಇಲ್ಲಿಯೇ ಅವರು ಬದುಕನ್ನು ಕಟ್ಟಿಕೊಂಡರು.
ಈ ಹಿಂದಿನ ಸಂದರ್ಶನದಲ್ಲಿ ಪ್ರಕಾಶ್ ರಾಜ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಂತೆ, ತಾಯಿ ಸ್ವರ್ಣಲತಾ ನರ್ಸಿಂಗ್ ಮುಗಿಸಿದ ಬಳಿಕ ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಬಂದಿದ್ದರು. ಹಾಗೇ ಅವರ ತಂದೆ ಮಂಗಳೂರಿನವರಾಗಿದ್ದು, ಅವರೂ ಕೂಡ ಬೆಂಗಳೂರಿಗೆ ಬಂದಿದ್ದರು. ಇಬ್ಬರಿಗೂ ಪರಿಚಯವಾಗಿ ಮದುವೆ ಆದರು. ಆದರೆ, ತಂದೆ ಮದ್ಯವ್ಯಸನಿಯಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆವೇಳೆ ಅವರ ತಾಯಿಯೇ ಒಬ್ಬಂಟಿಯಾಗಿ ಕುಟುಂಬವನ್ನು ನಿಭಾಯಿಸಿದ್ದರು.
ತಂದೆ ದುಡಿಯುತ್ತಿರಲಿಲ್ಲ. ಆದರೂ ತಾಯಿಯೇ ಏಕಾಂಗಿಯಾಗಿ ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಂಡರು. ಅವರೇ ದುಡಿದು ತನ್ನ ತಂಗಿಯ ಮದುವೆ ಮಾಡಿದ್ದರು. ತನ್ನ ಸಾಧನೆಗೆ ಸ್ಪೂರ್ತಿಯಾಗಿದ್ದರು ಎಂದು ಪ್ರಕಾಶ್ ರಾಜ್ ಹೇಳಿಕೊಂಡಿದ್ದರು. ಹೀಗಾಗಿ ತನ್ನ ತಾಯಿ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಅವರನ್ನು ದೇವರಂತೆಯೇ ಕಾಣುತ್ತಿದ್ದರು.
ಹಾಗೇ ತನ್ನ ತಾಯಿಯ ಅನಾರೋಗ್ಯದ ಬಗ್ಗೆನೂ ಪ್ರಕಾಶ್ ರಾಜ್ ಮಾತಾಡಿದ್ದರು. ಅವರ ಅಮ್ಮ ಸ್ವರ್ಣಲತಾ ಚಿಕ್ಕದೊಂದು ಬ್ರೈನ್ ಟ್ಯೂಮರ್ ಸರ್ಜರಿಗೆ ಒಳಗಾಗಿದ್ದರು. ಆ ಶಸ್ತ್ರ ಚಿಕಿತ್ಸೆ ಬಳಿಕ ಅವರ ತಾಯಿ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದರು. ಬಳಿಕ ನಿಧಾನವಾಗಿ ಅವರು ಚೇತರಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರ ಬಗ್ಗೆ ವೇದಿಕೆಯೊಂದರಲ್ಲಿ ಮಾತಾಡಿದ್ದರು. ಆ ಸಮಯದಲ್ಲಿ ಅವರೊಂದಿಗೆ ಇದ್ದ ಕ್ಷಣಗಳು ಭಾವನಾತ್ಮಕವಾಗಿ ಸವಾಲಾಗಿತ್ತು ಎಂದು ಹೇಳಿಕೊಂಡಿದ್ದರು.
ಪ್ರಕಾಶ್ ರಾವ್ ಅವರ ತಾಯಿಯ ನಿಧನಕ್ಕೆ ಟಾಲಿವುಡ್ ನಟ ಪವನ್ ಕಲ್ಯಾಣ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು (ಮಾರ್ಚ್ 30)
ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ.


Click it and Unblock the Notifications















