ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿ ವಜಾ: ದಾಸನ ಮುಂದಿನ ನಡೆ ಏನು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು. ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಹಿರಿಯ ವಕೀಲರಾದ ಸಿ ವಿ ನಾಗೇಶ್ ಅಖಾಡಕ್ಕೆ ಇಳಿದಿದ್ದರು. 57 ಸಿಸಿಎಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿದ್ದರು. ಜಾಮೀನು ನೀಡದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದವನ್ನು ಮಂಡಿಸಿದ್ದರು.
ಎರಡು ಹಂತದಲ್ಲಿ ನಡೆದ ವಾದ- ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಎರಡನೇ ಆರೋಪಿ ಆಗಿರುವ ದರ್ಶನ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ಹಾಗೇ ಎ 1 ಪವಿತ್ರಾ ಗೌಡ, ನಾಗರಾಜ್ ಹಾಗೂ ಲಕ್ಷ್ಮಣ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ದರ್ಶನ್‌ಗೆ ಜಾಮೀನು ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಜಾಮೀನು ಅರ್ಜಿ ವಜಾ ಆಗಿದೆ.

ದರ್ಶನ್ ಜಾಮೀನು ಅರ್ಜಿ ವರ್ಜಾ ಅದ್ಮೇಲೆ ಮುಂದಿನ ನಡೆಯೇನು? ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲರು ಮುಂದೆ ಯಾವ ಹೆಜ್ಜೆ ಇಡುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ದರ್ಶನ್ ಬಳ್ಳಾರಿಯಲ್ಲಿಯೇ ಉಳಿದು ಕೊಳ್ಳುತ್ತಾರಾ? ಇಲ್ಲಾ ಬೆನ್ನು ನೋವಿನ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಾ? ದರ್ಶನ್ ಆಪ್ತ ವಲಯಗಳಲ್ಲಿ ಚರ್ಚೆಯಾಗುತ್ತಿರೋದೇನು?
ಹಿರಿಯ ವಕೀಲರಾದ ಸಿ. ವಿ. ನಾಗೇಶ್ ವಾದ ಮಂಡಿಸಿದ್ದು ನೋಡಿದ ಮೇಲೆ ದರ್ಶನ್‌ಗೆ ಜಾಮೀನು ಅರ್ಜಿ ಸಿಕ್ಕೇಬಿಡುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದರು. ಇಬ್ಬರ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ದರ್ಶನ್‌ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ದರ್ಶನ್ ಕೇಸ್ ತುಂಬಾನೇ ಗಂಭೀರವಾಗಿತ್ತು ಅನ್ನೋದು ಇಬ್ಬರು ಹಿರಿಯ ವಕೀಲರು ಮಂಡಿಸಿದ ವಾದವೇ ಸಾಕ್ಷಿಯಾಗಿತ್ತು. ದರ್ಶನ್ ಪರ ಜಾಮೀನು ರಿಜೆಕ್ಟ್ ಆಗುವುದಕ್ಕೆ ನೇರ ಹಾಗೂ ಟೆಕ್ನಿಕಲ್ ಎವಿಡೆನ್ಸ್ ಸಾಕಷ್ಟು ಇದ್ದಿದ್ದೇ ಕಾರಣ ಎನ್ನಲಾಗಿದೆ. ಹಿರಿಯ ವಕೀಲರಾದ ಸಿ ವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದ್ದರೂ, ದರ್ಶನ್ ವಿರುದ್ಧವಾಗಿ ಸಂಗ್ರಹಿಸಲಾಗಿದ್ದ ಸಾಕ್ಷಿಗಳೇ ಮಾರಕವಾಗಿವೆ ಎಂದು ಹೇಳಲಾಗುತ್ತಿದೆ. ದರ್ಶನ್ ಬಟ್ಟೆ ಮೇಲಿದ್ದ ರಕ್ತದ ಕಲೆಗಳು, ವಾಟ್ಸಾಪ್ ಚಾಟ್‌ಗಳು ಸೇರಿದಂತೆ ಹಲವು ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಬಂದಿತ್ತು. ಈ ಕಾರಣಕ್ಕೆ ಜಾಮೀನು ರಿಜೆಕ್ಟ್ ಆಗಿದೆ ಎನ್ನಲಾಗಿದೆ.
ಇನ್ನು ದರ್ಶನ್ ಮುಂದಿನ ನಡೆಯೇನು ಅಂತ ನೋಡುವುದಾದರೆ, ಈ ಆದೇಶ ಇಟ್ಟುಕೊಂಡು ಹೈಕೋರ್ಟ್‌ಗೆ ಚಾಲೆಂಜ್ ಮಾಡಬೇಕಾಗುತ್ತೆ. ಈ ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ. ಆದರೆ, ನ್ಯಾಯಾಲಯ ತನ್ನ ಇನ್‌ವಾಲ್ಮೆಂಟ್ ಇದೆ ಎಂದು ಜಾಮೀನು ನಿರಾಕರಣೆ ಮಾಡಿದೆ. ನಮಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ. ತಾನು ಕೇವಲ ಆರೋಪಿಯಾಗಿದ್ದು, ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಮೊರೆ ಹೋಗಬಹುದು. ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬಹುದು.
ಜಾಮೀನು ಅರ್ಜಿ ತಿರಸ್ಕಾರಗೊಂಡ ಆದೇಶ ಪ್ರತಿ ದರ್ಶನ್ ಪರ ವಕೀಲರ ಕೈ ಸೇರುತ್ತಿದ್ದಂತೆ ಅದನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಹಾಗೇ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಅವಕಾಶ ನೀಡುವಂತೆಯೂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications










