ರೇಣುಕಾಸ್ವಾಮಿ ಪ್ರಕರಣದ 14ನೇ ಆರೋಪಿ, ದರ್ಶನ್ ಆಪ್ತ ಪ್ರದೋಶ್ ತಂದೆ ನಿಧನ; ಅಂತಿಮ ಸಂಸ್ಕಾರಕ್ಕೆ ಕೋರ್ಟ್ ಅನುಮತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಅವರ ಆಪ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊದಲ ಬಾರಿ ಜಾಮೀನು ಸಿಕ್ಕು ಹೊರ ಬಂದಿದ್ದ ಆರೋಪಿಗಳು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜೈಲು ಸೇರಿದ್ದಾರೆ. ಜೈಲಿ ಇರುವುದಕ್ಕಾಗದೇ ಪರದಾಡುತ್ತಿರುವ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಮತ್ತೊಂದು ಆಘಾತ ಆಗಿದೆ. ದರ್ಶನ್ ಆಪ್ತ ಹಾಗೂ 14ನೇ ಆರೋಪಿ ಪ್ರದೋಶ್ ತಂದೆ ನಿಧನರಾಗಿದ್ದಾರೆ.
ತಂದೆ ನಿಧನದ ಹಿನ್ನೆಲೆಯಲ್ಲಿ ಪ್ರದೋಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಂದೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗುವುದಕ್ಕೆ ಅನುಮತಿಯನ್ನು ಕೋರಿದ್ದರು. ಈ ವಿಚಾರಣೆಯನ್ನು ಕೈಗೆತ್ತಿಗೊಂಡ ನ್ಯಾಯಾಧೀಶರು ಷರತ್ತುಗಳನ್ನು ವಿಧಿಸಿ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅನುಮತಿಯನ್ನು ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಪ್ತನಾಗಿ ಗುರುತಿಸಿಕೊಂಡಿದ್ದ ಪ್ರದೋಶ್ ಹೆಸರು ಕೂಡ ಹೇಳಿಬಂದಿದೆ. ಪೊಲೀಸರ ತನಿಖೆ ವೇಳೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಶ್ ಕೂಡ ಭಾಗಿಯಾಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರದೋಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಹೀಗಾಗಿ ಪ್ರದೋಶ್ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗಿತ್ತು.
ಕರ್ನಾಟಕ ಹೈಕೋರ್ಟ್ ದರ್ಶನ್ ಜೊತೆಗೆ ಅವರ ಗ್ಯಾಂಗ್‌ಗೂ ಜಾಮೀನು ನೀಡಿತ್ತು. ಆ ವೇಳೆ ಪ್ರದೋಶ್ ಕೂಡ ಜೈಲಿನಿಂದ ಹೊರಬಂದಿದ್ದರು. ಆದರೆ, ದರ್ಶನ್ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿನ ನ್ಯಾಯಾಧೀಶರು ಪೊಲೀಸರು ಜಾಮೀನು ಅರ್ಜಿ ರದ್ದು ಕೋರಿ ಸಲ್ಲಿಸಿದ್ದ, ದರ್ಶನ್ ಸೇರಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರದೋಶ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯ್ತು.
ಜೈಲಿನಲ್ಲಿ ಇರುವಾಗಲೇ ಪ್ರದೋಶ್ ತಂದೆ ನಿಧನರಾಗಿದ್ದು, ಕೋರ್ಟ್ ಈಗ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅನುಮತಿಯನ್ನು ನೀಡಿದೆ. ಅಲ್ಲದೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸೂಚನೆಯನ್ನು ನೀಡಿದೆ. ಪ್ರದೋಶ್‌ನನ್ನು ಬಿಗಿ ಬಂದೋಬಸ್ತ್‌ನಲ್ಲಿ ಕರೆದುಕೊಂಡು ಹೋಗಬೇಕೆಂದು ಪೊಲೀಸರಿಗೆ ಆದೇಶ ನೀಡಲಾಗಿದೆ. ಈಗಾಗಲೇ ವರದಿಯಾಗಿರುವಂತೆ ಪ್ರದೋಶ್ ತಂದೆಯ ಅಂತ್ಯಕ್ರಿಯೆಯನ್ನು ನಾಳೆ (ಅಕ್ಟೋಬರ್ 24) ನಡೆಸುವುದಕ್ಕೆ ಕುಟುಂಬದವರು ನಿರ್ಧರಿಸಿದ್ದಾರೆ.
ಕೋರ್ಟ್ ಸೂಚನೆ ಮೇರೆಗೆ ಪ್ರದೋಶ್‌ನನ್ನು ಇಂದು (ಅಕ್ಟೋಬರ್ 23) ರಾತ್ರಿ ಅಥವಾ ನಾಳೆ ಬೆಳಗ್ಗೆ ಜೈಲಿನಿಂದ ಕರೆದುಕೊಂಡು ಹೋಗುವ ಸಾಧ್ಯತೆಯಿದೆ. ಜೈಲಿನಿಂದ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಪ್ರದೋಶ್‌ನನ್ನು ಕರೆದುಕೊಂಡು ಹೋಗುವುದಕ್ಕೆ ಪೊಲೀಸರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಬಳಗದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಅಲ್ಲದೆ ದರ್ಶನ್ ನಟಿಸಿದ ಕೆಲವು ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿಯೂ ನಟಿಸಿದ್ದರು. ಇನ್ನು ರೇಣುಕಾಸ್ವಾಮಿ ಹತ್ಯೆ ನಡೆಯುವ ವೇಳೆ ದರ್ಶನ್ ಗ್ಯಾಂಗ್ ಜೊತೆ ಪ್ರದೋಶ್ ಪಟ್ಟಣಗೆರೆ ಶೆಡ್‌ನಲ್ಲಿ ಇದ್ದ ಆರೋಪ ಇವರ ಮೇಲಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಿದೆ. ಇನ್ನು ಪ್ರದೋಶ್ ಮೊದಲ ಬಾರಿ ಜೈಲು ಸೇರಿದ್ದ ವೇಳೆ ಅವರ ಅಜ್ಜಿ ನಿಧನರಾಗಿದ್ದರು. ಈಗ ಎರಡನೇ ಬಾರಿ ಜೈಲು ಸೇರಿದ್ದ ವೇಳೆ ತಂದೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರದೋಶ್ ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನು ಎದುರಿಸಬೇಕಾಗಿದೆ.


Click it and Unblock the Notifications











