ದರ್ಶನ್‌ಗೆ ತೀವ್ರ ಬೆನ್ನು ನೋವು; ರಾತ್ರಿಯೇ ವಿಮ್ಸ್ ಆಸ್ಪತ್ರೆಗೆ ಶಿಫ್ಟ್
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್ ಅರ್ಜಿ ವಿಚಾರಣೆ ಹೈ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇಂದು (ಅಕ್ಟೋಬರ್ 22) ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ಜಾಮೀನು ಅರ್ಜಿಗಾಗಿ ವಾದವನ್ನು ಮಾಡಿದ್ದರು. ಈ ಬಾರಿ ದರ್ಶನ್ ಬೆನ್ನು ನೋವಿನ ವಿಚಾರವನ್ನು ಇಟ್ಟುಕೊಂಡು ಜಾಮೀನನ್ನು ಕೋರಿದ್ದರು.
ನಟ ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ವಾದ ಮಂಡಿಸಿದ್ದರು. ಈ ವೇಳೆ ಜಾಮೀನು ಅರ್ಜಿ ಮಂಜೂರು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಿರಿಯ ವಕೀಲ ಸಿ ವಿ ನಾಗೇಶ್ ಅವರ ವಾದ ಆಲಿಸಿದ ಬಳಿಕ ಜೈಲಾಧಿಕಾರಿಗೆ ದರ್ಶನ್ ಅವರ ಬೆನ್ನು ನೋವಿನ ಬಗ್ಗೆ ವೈದ್ಯರು ನೀಡಿರುವ ವರದಿಯನ್ನು ನೀಡುವಂತೆ ನ್ಯಾಯಾಧೀಶರು ಕೇಳಿದ್ದಾರೆ.

ಹಾಗೇ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ. ದರ್ಶನ್ ಜಾಮೀನು ಅರ್ಜಿ ಮತ್ತೆ ಮುಂದಕ್ಕೆ ಹೋಗಿದ್ದರಿಂದ ಪತ್ನಿ ವಿಜಯಲಕ್ಷ್ಮಿ ಬೇಸರದಿಂದಲೇ ಜೈಲಿನಿಂದ ಹೊರ ಹೋಗಿದ್ದರು. ಈ ಬೆನ್ನಲ್ಲೇ ದರ್ಶನ್ ಅವರ ಬೆನ್ನು ನೋವು ಹೆಚ್ಚಾಗಿದ್ದರಿಂದ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿ ಸುಮಾರು ನಾಲ್ಕು ತಿಂಗಳಾಗುತ್ತಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇದುತ್ತಿದ್ದ ಫೋಟೋ ಲೀಕ್ ಆಗಿತ್ತು. ಬಳಿಕ ಅಲ್ಲಿಂದ ಅವರನ್ನು ಬಳ್ಳಾರಿ ಜೈಲ್ ಶಿಫ್ಟ್ ಮಾಡಲಾಗಿತ್ತು. ಇಲ್ಲಿಗೆ ಬಂದ ಬಳಿಕ ದರ್ಶನ್ ಅವರಲ್ಲಿ ಬೆನ್ನು ನೋವು ಕಾಣಿಸಿಕೊಂಡಿತ್ತು.
ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರು ವಾದ ಮಂಡಿಸುವ ವೇಳೆ ದರ್ಶನ್ ಬೆನ್ನು ನೋವು ತೀವ್ರವಾಗಿದೆ. ಆದಷ್ಟು ಬೇಗ ಅವರಿಗೆ ಶಸ್ತ್ರಚಿಕಿತ್ರೆ ಮಾಡಬೇಕಿದೆ. ಈ ಕಾರಣಕ್ಕೆ ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದೇ ಬೆನ್ನಲ್ಲೇ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ದರ್ಶನ್ ಬೆನ್ನು ನೋವಿಗೆ ಜೈಲಿನಲ್ಲಿಯೇ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದರು. ವೈದ್ಯರು ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ದರ್ಶನ್ ಇದನ್ನು ಒಪ್ಪಿರಲಿಲ್ಲ. ಹೀಗಾಗಿ ಬೆನ್ನು ನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದರಿಂದ ದಿಢೀರನೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


Click it and Unblock the Notifications











