ನಟ ಧ್ರುವ ಸರ್ಜಾ ಮತ್ತು ಪತ್ನಿಗೆ ಕೊರೊನಾ ವೈರಸ್ ಸೋಂಕು
ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಆಕ್ಷನ್ ಪ್ರಿನ್ಸ್ ಎಂದೇ ಹೆಸರಾದ ನಟ ಧ್ರುವ ಸರ್ಜಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.
Recommended Video
ಈ ಸಂಗತಿಯನ್ನು ಸ್ವತಃ ನಟ ಧ್ರುವ ಸರ್ಜಾ ಬಹಿರಂಗಪಡಿಸಿದ್ದಾರೆ. ತಮ್ಮೊಂದಿಗೆ ಪತ್ನಿ ಪ್ರೇರಣಾ ಅವರಿಗೂ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಧ್ರುವ ಮಾಹಿತಿ ನೀಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪತ್ನಿ ಪ್ರೇರಣಾ ಮತ್ತು ತಮಗೆ ಇಬ್ಬರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂಬುದನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಮುಂದೆ ಓದಿ...

ಸೌಮ್ಯ ಪ್ರಮಾಣದಲ್ಲಿ ಲಕ್ಷಣಗಳು
'ನಾನು ಮತ್ತು ನನ್ನ ಪತ್ನಿ ಇಬ್ಬರಲ್ಲಿಯೂ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇಬ್ಬರಲ್ಲಿಯೂ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ನಾವು ಆಸ್ಪತ್ರೆಗೆ ದಾಖಲಾಗಿದ್ದೇವೆ' ಎಂದು ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ.

ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ
ನಾವು ಹುಷಾರಾಗಿ ಮರಳಲಿದ್ದೇವೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿ ಯಾರು ಬಂದಿದ್ದೀರೋ ನೀವೆಲ್ಲರೂ ಕೊರೊನಾ ವೈರಸ್ ತಪಾಸಣೆಗೆ ಒಳಗಾಗಿ ಮತ್ತು ಸುರಕ್ಷಿತರಾಗಿರಿ' ಎಂದು ಧ್ರುವ ಮನವಿ ಮಾಡಿದ್ದಾರೆ.

ಯಾರಿಂದ ಸೋಂಕು ಹರಡಿದೆ?
ಧ್ರುವ ಸರ್ಜಾ ಅವರಿಗೆ ಯಾರ ಮೂಲಕ ಕೊರೊನಾ ವೈರಸ್ ಸೋಂಕು ತಗುಲಿದೆ ಎನ್ನುವುದು ಗೊತ್ತಾಗಿಲ್ಲ. ಅವರ ಮನೆ ಇರುವ ಸಮೀಪದಲ್ಲಿ ಅನೇಕ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಬಂದಿರುವುದರಿಂದ ಅಲ್ಲಿನ ಸಂಪರ್ಕದಿಂದ ಸೋಂಕು ಹರಡಿರಬಹುದು ಎನ್ನಲಾಗುತ್ತಿದೆ.

ಪೂಜಾ ಕಾರ್ಯದಲ್ಲಿ ಭಾಗಿ
ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಒಂದು ತಿಂಗಳು ಕಳೆದ ಸಂದರ್ಭದಲ್ಲಿ ಇತ್ತೀಚೆಗೆ ಅವರ ಕುಟುಂಬದವರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಮನೆಯಲ್ಲಿಯೂ ಚಂಡಿಕಾ ಹೋಮ ನಡೆಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬದವರು, ಸ್ನೇಹಿತರು ಅವರ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಅವರೆಲ್ಲರೂ ಕ್ವಾರೆಂಟೈನ್ ಆಗಬೇಕಾಗಿದೆ.

ಅಭಿಮಾನಿಗಳಿಂದ ಪ್ರಾರ್ಥನೆ
ಧ್ರುವ ಸರ್ಜಾ ತಮಗೆ ಕೊರೊನಾ ವೈರಸ್ ಸೋಂಕು ಇದೆ ಎಂಬುದನ್ನು ಬಹಿರಂಗಪಡಿಸಿದ ಬಳಿಕ ಕಂಗಾಲಾಗಿರುವ ಅವರ ಅಭಿಮಾನಿಗಳು ಬೇಗ ಹುಷಾರಾಗಿ ಎಂದು ಶುಭ ಹಾರೈಸುತ್ತಿದ್ದಾರೆ. ಅವರ ಟ್ವೀಟ್‌ಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.


Click it and Unblock the Notifications











