ಕೂರ್ಗ್‌ನಲ್ಲಿ ಬಂಗಲೆ ಕಟ್ಟಬೇಡಿ ಅಂತ ಭುವನ್-ಹರ್ಷಿಕಾಗೆ ಗಣೇಶ್ ಹೇಳಿದ್ದು ಏಕೆ? ಏನಿದು ಕಥೆ?
ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಪೋಷಕರಾಗಿದ್ದಾರೆ. ನವರಾತ್ರಿಯ ಮೊದಲ ದಿನವೇ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಜೋಡಿ ಸಂಭ್ರಮದಲ್ಲಿ ಮುಳುಗಿದೆ. ಇದೇ ಖುಷಿಯಲ್ಲಿರುವ ಜೋಡಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.
ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಇಬ್ಬರಿಗೂ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬದೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದಾರೆ. ಆಗಾಗ ಗಣೇಶ್ ಮನೆಯಲ್ಲಿ ನಡೆಯುವ ಸಮಾರಂಭಗಳಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಎರಡೂ ಕುಟುಂಬದ ನಡುವೆ ಆತ್ಮೀಯತೆ ಬೆಳೆದಿದೆ.

ತಮ್ಮ ಬದುಕಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಎಷ್ಟು ಮುಖ್ಯ ಅನ್ನೋದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಇಷ್ಟೇ ಅಲ್ಲದೆ ತಮಗೆ ನೀಡಿದ ಅತ್ಯಮೂಲ್ಯ ಸಲಹೆಗಳನ್ನು ಫಿಲ್ಮಿ ಫಸ್ಟ್ ಜೊತೆ ಶೇರ್ ಮಾಡಿಕೊಂಡಿದ್ದರು. ಈ ವೇಳೆ ಕೂರ್ಗ್‌ನಲ್ಲಿ ಮನೆ ಕಟ್ಟಬೇಡಿ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಬೇಡಿ ಅಂತಾನೂ ಸಲಹೆ ನೀಡಿದ್ದರಂತೆ. ಅದರದ್ದೊಂದು ಝಲಕ್ ಇಲ್ಲಿದೆ.
ಹರ್ಷಿಕಾ ಹಾಗೂ ಭುವನ್ ಜೋಡಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಲ್ಲೊಂದು ಕೊಡಗಿನಲ್ಲಿ ಕೋಟಿ ವೆಚ್ಚದಲ್ಲಿ ಮನೆಯನ್ನು ಕಟ್ಟಬೇಡಿ ಎಂದು ಸಲಹೆ ನೀಡಿದ್ದರಂತೆ. ಅದಕ್ಕೊಂದು ಬಲವಾದ ಕಾರಣವಿದೆ. ಅವರು ಕೊಟ್ಟ ಸಲಹೆ ಅದೆಷ್ಟು ಸರಿಯಾಗಿದೆ ಎಂಬುವುದು ಈ ಜೋಡಿಗೆ ಈಗ ಅರಿವಿಗೆ ಬರುತ್ತಿದೆ. ತಮಗೆ ಹೆಣ್ಣು ಮಗು ಹುಟ್ಟಿದ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

"ನಾವು ನಮ್ಮ ಜೀವನದಲ್ಲಿ ಮಾಡುತ್ತಿರುವ ಕೆಲವು ತಪ್ಪುಗಳನ್ನು ತಿದ್ದಿ ಹೇಳುತ್ತಾರೆ. ಇದು ಬೇಡ. ಅದು ಮಾಡಬೇಡಿ ಅಂತ ಅಂತ ಸಲಹೆ ಕೊಡುತ್ತಾರೆ. ನಾವು ಒಂದು ಸಾರಿ ಕೂರ್ಗ್‌ನಲ್ಲಿ ಇಷ್ಟು ಕೋಟಿಯ ಮನೆ ಕಟ್ಟಿಸಿ ಬಿಡುತ್ತೇವೆ ಅಂತ ಡಿಸೈಡ್ ಮಾಡಿದ್ವಿ. ಅವರು ಬೇಡ ಅಂತ ಹೇಳಿದ್ದರು." ಎಂದು ಭುವನ್ ಪೊನ್ನಣ್ಣ ಮಗಳು ಹುಟ್ಟಿದ ಈ ಸಂದರ್ಭದಲ್ಲಿ ರಿವೀಲ್ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಹೀಗೆ ಹೇಳುವುದಕ್ಕೊಂದು ಕಾರಣವಿದೆ. ಅದೇನು ಅನ್ನೋದನ್ನು ಈ ಜೋಡಿ ಫಿಲ್ಮಿ ಫಸ್ಟ್‌ಗೆ ಹೇಳಿದೆ. "ಅಷ್ಟು ದೊಡ್ಡ ಮನೆಯಲ್ಲಿ ಅಲ್ಲಿ ಯಾಕೆ ಕಟ್ಟಿಸುತ್ತೀರ. ಯಾವಾಗಲೋ ಒಮ್ಮೆ ಹೋಗಿ ಬರುವುದಕ್ಕೆ ಯಾಕೆ ಅಷ್ಟು ದೊಡ್ಡ ಮನೆ. ಸುಮ್ಮನೆ ಪಾಳು ಬೀಳುತ್ತೆ ಎಂದು ಹೇಳಿದ್ದರು. ಆ ಮೇಲೆ ಯೋಚನೆ ಮಾಡಿದಾಗ ಕರೆಕ್ಟ್ ನಾವು ಸಂಪಾದನೆ ಮಾಡಿದ್ದನ್ನೆಲ್ಲ ಅಲ್ಲಿಗೆ ಹಾಕಿದ್ದರೆ ವೇಸ್ಟ್ ಆಗಿ ಬಿಡುತ್ತಿತ್ತು ಅಂತ ಈಗ ಅನಿಸುತ್ತೆ." ಎನ್ನುತ್ತಾರೆ ಭುವನ್.
ಗಣೇಶ್ ಕೊಟ್ಟ ಸಲಹೆ ಮೇರೆಗೆ ಕೊಡಗಿನಲ್ಲಿ ಚಿಕ್ಕದೊಂದು ಫಾರ್ಮ್ ಹೌಸ್ ಅಂತ ಕಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನ ಆರತಕ್ಷತೆ ಕೂಡ ಮಾಡಬೇಡಿ ಎಂತ ಹೇಳಿದ್ದರಂತೆ. "ಚಿಕ್ಕದಾದ ಪುಟ್ಟದಾದ ಫಾರ್ಮ್ ಹೌಸ್ ಅಂತ ಕಟ್ಟಿಕೊಂಡಿದ್ದೇವೆ. ನಾವು ಮೊದಲು 8 ಬೆಡ್ ರೂಮ್ ಮನೆ ಅಂತೆಲ್ಲ ಪ್ಲ್ಯಾನ್ ಮಾಡಿದ್ವಿ. ಅದನ್ನು ಬೇಡ ಅಂತ ಹೇಳಿದ್ದರು. ಹಾಗೇ ನಾವು ಮದುವೆ ಆದ ಬಳಿಕ ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿ ಎಲ್ಲರನ್ನೂ ಕರೆಸೋಣ ಅಂತಿದ್ವಿ. ಬೇಡ ಮಾಡಬೇಡಿ. ಯಾಕೆ ಹಣವನ್ನು ವೇಸ್ಟ್ ಮಾಡುತ್ತೀರ. ಬೇಡ ಎಲ್ಲಾ ಬಂದಾಯ್ತು. ಅದೇ ಹಣವನ್ನು ಪಾಪುಗೋಸ್ಕರ ಇಟ್ಟುಕೊಳ್ಳಿ ಎಂದಿದ್ದರು." ಎಂಬ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











