"ತನ್ನದೇ ಬಯೋಗ್ರಫಿಯನ್ನು ತೆಗೆದುಕೊಂಡು ಸಾಯಬೇಕು" ಅಂತಿದ್ದ ಗುರುಪ್ರಸಾದ್: ಜಗ್ಗೇಶ್ ಶಾಕಿಂಗ್ ಹೇಳಿಕೆ
ಕನ್ನಡ ಚಿತ್ರರಂಗ ಕಂಡ ಅದ್ಭುತ ಬರಹಗಾರರಲ್ಲಿ ಗುರುಪ್ರಸಾದ್ ಕೂಡ ಒಬ್ಬರು. ಇವರ ಬರವಣಿಗೆಗೆ ಪ್ರತ್ಯೇಕ ಅಭಿಮಾನಿಗಳು ಕೂಡ ಇದ್ದಾರೆ. ಅದರಲ್ಲೂ ನವರಸ ನಾಯಕ ಜಗ್ಗೇಶ್ ವೃತ್ತಿ ಬದುಕಿನಲ್ಲಿ ಬಂದ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಅಂತಹ ಎರಡು ಅದ್ಭುತ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಎರಡು ಸಿನಿಮಾಗಳ ಸಂಭಾಷಣೆ ಇಂದಿಗೂ ಫೇಮಸ್.
ಗುರುಪ್ರಸಾದ್ ಕೇವಲ ಬರವಣೆಗೆ ಅಷ್ಟೇ ಅಲ್ಲ. ಅದ್ಭುತ ಮಾತುಗಾರ ಕೂಡ ಹೌದು. ಈ ಎರಡೂ ಪ್ರತಿಭೆಯನ್ನು ಇಟ್ಟುಕೊಂಡಿದ್ದ ಗುರುಪ್ರಸಾದ್ ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕನಾಗುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ, ಅದು ಆಗಲಿಲ್ಲ. ಗುರುಪ್ರಸಾದ್ ಕುಡಿತದ ಚಟಕ್ಕೆ ಬಿದ್ದಿದ್ದರು. ಸದಾ ಅದೇ ಗುಂಗಿನಲ್ಲಿ ಇರುತ್ತಿದ್ದರು. ಕುಡಿತದ ಚಟವೇ ಗುರುಪ್ರಸಾದ್ ಅವರನ್ನು ಬಲಿ ಪಡೆಯುತಾ? ಅನ್ನೋ ಅನುಮಾನ ಮೂಡಿದೆ.

ನವರಸನಾಯಕ ಜಗ್ಗೇಶ್ ಹಾಗೂ ಗುರುಪ್ರಸಾದ್ ಇಬ್ಬರ ಕಾಂಬಿನೇಷನ್ ಸಿನಿಮಾ ಅಂದರೆ, ಪ್ರೇಕ್ಷಕರಿಗೆ ಎಲ್ಲಿಲ್ಲದ ನಿರೀಕ್ಷೆ. ಆದರೆ, ಈ ಜೋಡಿಯ ಕೊನೆಯ ಸಿನಿಮಾ 'ರಂಗನಾಯಕ' ಕಟು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಗುರುಪ್ರಸಾದ್ ಅವರನ್ನು ತೀರಾ ಹತ್ತಿರದಿಂದ ನೋಡಿದ್ದ ಜಗ್ಗೇಶ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಗುರುಪ್ರಸಾದ್‌ಗೆ ತನ್ನ ಆತ್ಮಚರಿತ್ರೆಯನ್ನೇ ಸಿನಿಮಾ ಮಾಡಿ ಸಾಯಬೇಕು ಅಂತ ಹೇಳುತ್ತಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ.
ಜಗ್ಗೇಶ್ ಹಾಗೂ ಗುರುಪ್ರಸಾದ್ ಇಬ್ಬರ ಜೊತೆಯಾಗಿ ಕೆಲಸ ಮಾಡಿದ್ದ ಕೊನೆಯ ಸಿನಿಮಾ 'ರಂಗನಾಯಕ'. ಈ ಸಿನಿಮಾದ ವೇಳೆ ಏನಾಯ್ತು ಅನ್ನೋದನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ. "ಕೊನೆಯ ಸಿನಿಮಾವನ್ನು ನನ್ನ ಕರಿಯರ್‌ನಲ್ಲಿ ಯಾರೂ ನನ್ನನ್ನು ಬೈದುಕೊಂಡಿಲ್ಲ. ಅಷ್ಟು ಬೈಯ್ಯುವಂತೆ ಹಣೆಬರಹ ಸೃಷ್ಟಿ ಮಾಡಿದ್ದರು. ನಾನು ಬಹಳ ನೊಂದುಕೊಂಡೆ. ಏನು ಈ ತರ ಆಗಿ ಹೋಯ್ತಲ್ಲ ಅಂತ. ಈ ಗ್ರೇಟ್ ಡೈರಕ್ಟರ್‌ನಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದೆ. ಯಾಕೆ ಹೀಗೆ ಮಾಡಿಬಿಟ್ರು ಅಂತ ಅನಿಸಿತ್ತು." ಎಂದು ಜಗ್ಗೇಶ್ ಟಿವಿ 9 ಜೊತೆ ಬೇಸರ ಹಂಚಿಕೊಂಡಿದ್ದಾರೆ.

ಇದೇ ವೇಳೆ ಗುರುಪ್ರಸಾದ್ ಆಗಾಗ ಸಾಯುವ ಬಗ್ಗೆನೂ ಮಾತಾಡುತ್ತಿದ್ದರು. ಮಾತೆತ್ತಿದ್ದರೆ, ಬಯೋಗ್ರಫಿ ತೆಗೆದು ಸಾಯುತ್ತೇನೆ ಎನ್ನುತ್ತಿದ್ದರಂತೆ. "ಗುರುಪ್ರಸಾದ್‌ಗೆ ಅವರ ಬಯೋಗ್ರಫಿಯನ್ನು ತೆಗೆದುಕೊಂಡು ಸಾಯಬೇಕು ಅನ್ನೋ ನಿರ್ಧಾರದಲ್ಲಿ ಇದ್ದರು. ಊಟ ಆಗಿ ಮಂಕಾಗಿ ಕೂಡ ಏನಾದರೂ ಕೇಳಿದ ಅಂದರೆ, ನಾನು ನೆನಪು ಬಿಟ್ಟು ಹೋಗ್ತೀನಿ ಅಂತ ಹೇಳೋರು. ಏನ್ರೀ ಹಾಗೆಲ್ಲ ಮಾಡುತ್ತೀರಿ. ಹಾಗೆಲ್ಲ ಮಾತಾಡಬಾರದು ಅಂತ ಹೇಳುತ್ತಿದ್ದೆ. ಅದೇ ಈ ನೆನಪು ಬಿಟ್ಟು ಹೋದರು." ಎನ್ನುತ್ತಾರೆ ಜಗ್ಗೇಶ್.
ಒಂದೇ ಬಾರಿ ಅಲ್ಲ. ಜಗ್ಗೇಶ್ ಅವರ ಬಳಿ ಹಲವು ಬಾರಿ ಸಾವಿನ ಬಗ್ಗೆ ಮಾತಾಡುತ್ತಿದ್ದರು ಎಂದು ಹೇಳಿಕೊಂಡಿದ್ದೂ ಇದೆ. "ಅವರು ಒಂದು ಸಾವಿರ ಬಾರಿ ಸಾಯುತ್ತೇನೆ ಅಂತ ಹೇಳಿದ್ದಾರೆ. ಇದನ್ನು ಹೇಳಿದರೆ ಮೂಡನಂಬಿಕೆ ಅಂದುಕೊಳ್ಳಬಹುದು. ನಮ್ಮ ಬಾಯಲ್ಲಿ ಬರುವ ಪದಕ್ಕೆ 338 ಕೋಟಿ ದೇವರು ಅಸ್ತು ಅನ್ನುತ್ತಾರೆ. ಅದಕ್ಕೆ ನಾವು ಯಾವತ್ತೂ ಕೆಟ್ಟದನ್ನು ಮಾತಾಡಬಾರದು. ಹಾಗೇ ಅನ್ಯರ ಬಗ್ಗೆನೂ ಕೆಟ್ಟದನ್ನು ಮಾತಾಡಬಾರದು. ಅದು ಉಲ್ಟಾ ಆಗುತ್ತೆ. ನಾನು ಆತನಿಗೆ ಕೂರಿಸಿ ಬುದ್ದಿ ಹೇಳಿದ್ದೆ" ಎಂದು ಜಗ್ಗೇಶ್ ಹೇಳುತ್ತಾರೆ.
ಗುರುಪ್ರಸಾದ್ ಆರಂಭದ ದಿನಗಳನ್ನು ಜಗ್ಗೇಶ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. "ಓರಿಜಿನಲ್ ಗುರುಪ್ರಸಾದ್ ಯಾರು ಅಂದರೆ, ಆತ ಬಂದಾ ಅಂದರೆ, ಕೈಯಲ್ಲಿ ನಾಲ್ಕು ಪುಸ್ತಕ ಹಿಡಿದುಕೊಂಡು ಬರುತ್ತಿದ್ದ. ಅಂತಹ ಹುಡುಗ ತಾನು ಮುಂದೆಕ್ಕೆ ಬರಬೇಕಾದರೆ, ಬ್ಯಾಗ್‌ನಲ್ಲಿ ಆರು ಬಾಟಲ್ ಹಿಡಿದುಕೊಂಡು ಬರುವುದಕ್ಕೆ ಶುರು ಮಾಡಿದ. ಯಾವಾಗಲೂ ನನ್ನ ಜೊತೆ ಕೂತು ಊಟ ಮಾಡುತ್ತಿದ್ದ. ನನ್ನ ತಮಾಷೆಗಳನ್ನು ಇಷ್ಟ ಪಡುತ್ತಿದ್ದ. ಆಗ ನಾನು ಅವನಿಗೆ ಹೇಳಿದ್ದೆ. ಲೈಫ್ ನಾನು ನೀನು ತಿಳಿದುಕೊಂಡಂತೆ ಅಲ್ಲ ಗುರು ಜವಾಬ್ದಾರಿಯುತವಾಗಿ ಇರಬೇಕು. ಯಾಕೆ ನೀವು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದೀರಿ ಅಂತ ಕೇಳಿದ್ದೆ." ಎಂದಿದ್ದಾರೆ.


Click it and Unblock the Notifications











