'ಹಲ್ಕಾ ಡಾನ್' ಸಿನಿಮಾಗೆ ಎಂಟ್ರಿ ಕೊಟ್ಟ ಬಹುಭಾಷಾ ನಟ ಜಾನ್ ವಿಜಯ್; ಯಾರಿವರು?
ಕನ್ನಡ ಚಿತ್ರರಂಗ ಈಗ ಮೊದಲಿನಂತೆ ಉಳಿದಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರೋ ಫಿಲ್ಮ್ ಮೇಕರ್‌ಗಳು ತಮ್ಮ ರೂಟ್ ಅನ್ನು ಬಿಟ್ಟು ಹೋಗುತ್ತಿದ್ದಾರಾ ಅಂತ ಅನಿಸಿದ್ದೂ ಇದೆ. ಇನ್ನೊಂದು ಕಡೆ ಕನ್ನಡಿಗರಿಗಾಗಿಯೇ ಸಿನಿಮಾ ಮಾಡುತ್ತಿರುವ ಫಿಲ್ಮ್ ಮೇಕರ್‌ಗಳು ಕೂಡ ಇದ್ದಾರೆ. ಅವರೆಲ್ಲ ಈಗ ಕಂಟೆಂಟ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಆಶಾ ಭಾವನೆಯನ್ನು ಮೂಡಿಸುತ್ತಿದೆ.
ಕನ್ನಡಿಗರಿಗಾಗೇ ಸಿನಿಮಾ ಮಾಡುವ ನಿರ್ಮಾಪಕರು ಕರ್ನಾಟಕದಲ್ಲಿ ಪೈಪೋಟಿ ಎದುರಿಸುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾಗಳನ್ನು ಪರಭಾಷೆಗಳೊಂದಿಗೆ ಪೈಪೋಟಿ ಮಾಡುವುದಕ್ಕೆ ಸ್ಟಾರ್ ಕಾಸ್ಟ್ ಅನ್ನು ಸ್ಟ್ರಾಂಗ್ ಮಾಡುತ್ತಿದ್ದಾರೆ. ತಮ್ಮ ಸಿನಿಮಾಗೆ ಪರಭಾಷೆಯಿಂದ ನಟರನ್ನು ಕರೆದುಕೊಂಡು ಬರುತ್ತಿದ್ದಾರೆ. ಸದ್ಯ ಕನ್ನಡದ ಸಿನಿಮಾಗಳಲ್ಲಿ ಪರಭಾಷೆಗಳಲ್ಲಿ ಮಿಂಚಿರೋ ನಟರು ಒಬ್ಬೊಬ್ಬರಾಗೇ ಎಂಟ್ರಿ ಕೊಡುತ್ತಿದ್ದಾರೆ.

ಕನ್ನಡದ ಜನಪ್ರಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್ 'ಹಲ್ಕಾ ಡಾನ್' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಆ ಸಿನಿಮಾದ ಶೂಟಿಂಗ್ ಕೂಡ ವೇಗವಾಗಿ ನಡೆಯುತ್ತಿದೆ. ಸದ್ಯ ಈ ತಂಡಕ್ಕೆ ಪರಭಾಷೆಯಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿರುವ ಜನಪ್ರಿಯ ನಟ ಜಾನ್ ವಿಜಯ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾಗೆ ಮತ್ತಷ್ಟು ಬಲ ಬಂದಂತೆ ಆಗಿದೆ.
ನಿರ್ಮಾಪಕ ಕೆ.ಪಿ. ಶ್ರೀಕಾಂತ್ ತಮ್ಮ ವೀನಸ್ ಎಂಟರ್‌ಟೈನರ್ ಬ್ಯಾನರ್‌ನಲ್ಲಿ 'ಟಗರು', 'ಸಲಗ' ಹಾಗೂ 'ಯುಐ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 'ಹಲ್ಕಾ ಡಾನ್' ಎಂಬ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾವಿದು. ಪ್ರಮೋದ್ ನಾಯಕನಾಗಿ ನಟಿಸುತ್ತಿದ್ದರೆ, ಅತ್ತ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹಲ್ಕಾ ಡಾನ್ ಅಂಗಳಕ್ಕೆ ಬಹುಭಾಷಾ ನಟ ಜಾನ್ ವಿಜಯ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ನಟ ಜಾನ್ ವಿಜಯ್ ಮೂಲತ: ತಮಿಳುನಾಡಿನವರು. ಈಗಾಗಲೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಹಲವು ಸಿನಿಮಾಗಳಲ್ಲಿ ಜಾನ್ ವಿಜಯ್ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಹಾಗಂತ 'ಹಲ್ಕಾ ಡಾನ್' ಇವರಿಗೆ ಕನ್ನಡದ ಮೊದಲ ಸಿನಿಮಾವೇನು ಅಲ್ಲ. ಈ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಹಲವು ವರ್ಷಗಳು ಗ್ಯಾಪ್ ಕೊಟ್ಟು ಮತ್ತೆ ಬಂದಿದ್ದಾರಷ್ಟೇ.

ಅಂದಹಾಗೇ ಜಾನ್ ವಿಜಯ್ ಈ ಹಿಂದೆ 'ಪೃಥ್ವಿ' ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಯಶ್ ನಟನೆಯ 'ಗಜಕೇಸರಿ' ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಜಾನ್ ವಿಜಯ್‌ಗೆ 'ಹಲ್ಕಾ ಡಾನ್' ಚಿತ್ರತಂಡ ಸ್ಪೆಷಲ್ ಪೋಸ್ಟರ್ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದೆ. ಕೂಲಿಂಗ್ ಗ್ಲಾಸ್ ಹಾಕಿ, ಸಿಗರೇಟ್ ಸಿದುತ್ತಾ ಜಾನ್ ವಿಜಯ್ ರಗಡ್ ಲುಕ್ ಕೊಟ್ಟಿದ್ದಾರೆ.
'ಹಲ್ಕಾ ಡಾನ್' ಸಿನಿಮಾಗೆ ಚಲ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾಗೆ 'ಸಾಯಿ ಕುಮಾರ್ ಫ್ಯಾನ್' ಎಂಬ ಅಡಿ ಬರಹವಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿ. ಹರಿಕೃಷ್ಣ ಸಂಗೀತವಿದ್ದು, ಸತ್ಯಾ ಹೆಗಡೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.


Click it and Unblock the Notifications
