ಕಾಲ್ತುಳಿತ ದುರಂತ: "ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ?" ಕಿಶೋರ್ ಪ್ರಶ್ನೆ?
ಆರ್‌ಸಿಬಿ 18 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದು ಬೆಂಗಳೂರಿಗೆ ಬಂದಿತ್ತು. ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಹಂಚಿಕೊಂಡು ಸಂಭ್ರಮಿಸಲು ಭಯಸಿತ್ತು. ಅಭಿಮಾನಿಗಳು ಕೂಡ ಟ್ರೋಫಿಯನ್ನು, ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳುವುದಕ್ಕೆ ಬಯಸಿದ್ದರು. ಇನ್ನು ಸಂಭ್ರಮ ಮುಗಿಲು ಮುಟ್ಟಬೇಕು ಎನ್ನುವಷ್ಟರಲ್ಲೇ ದುರಂತ ನಡೆದು ಹೋಗಿತ್ತು.
ಅಭಿಮಾನಿಗಳ ಅತಿಯಾದ ಅಭಿಮಾನವೋ..? ಸಮರ್ಪಕವಾಗಿ ವ್ಯವಸ್ಥೆ ಕಲ್ಪಿಸದೇ ಇದ್ದಿದ್ದೋ? ಸರ್ಕಾರದ ಆತುರವೋ? ಏನೋ ಒಂದು ಕಾರಣಕ್ಕೆ ದುರ್ಘಟನೆ ನಡೆದು ಹೋಗಿದೆ. ಎಲ್ಲ ಮುಗಿದ ಮೇಲೆ ಟೀಕೆ ಟಿಪ್ಪಣಿಗಳು ಮುನ್ನೆಲೆಗೆ ಬರುತ್ತಿವೆ. ಪರಸ್ಪರ ಕೆಸರು ಎರಚಿಕೊಳ್ಳುವುದು ನಡೆಯುತ್ತಿದೆ. ಆರೋಪ-ಪ್ರತ್ಯಾರೋಪ ಆರಂಭ ಆಗಿದೆ. ಆತ್ಮೀಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.

18 ವರ್ಷಗಳಿಂದ ಕಾಯುತ್ತಿದ್ದ ಒಂದು ಸುಂದರ ಕ್ಷಣಗಳನ್ನು ಅನುಭವಿಸುವುಕ್ಕೂ ಆಗದೆ ಗೋಳಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಈ ದುರ್ಘಟನೆ ಬಗ್ಗೆ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ದುರಂತ ಸಂಭವಿಸುವುದಕ್ಕೆ "ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ ??" ಎಂದು ನಟ ಕಿಶೋರ್ ಪ್ರಶ್ನೆ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಹೈಲೈಟ್
ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು
ಸರಕಾರದ, ಆಯೋಜಕರ, ಪೋಲೀಸರ, ಕ್ರಿಕೆಟ್ ಮಂಡಳಿಯ ವೈಫಲ್ಯ
ಕ್ರಿಕೆಟ್, ಸಿನಿಮಾ, ರಾಜಕೀಯ ನಾಯಕರ ಮೇಲಿನ ಪ್ರೀತಿಗೆ ಕುರುಡರು
ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರು
ಬಹುಭಾಷಾ ನಟ ಕಿಶೋರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಹೀಗಿದೆ.
"ನಾವೆಲ್ಲರೂ ಜವಾಬ್ದಾರರು..
ಈ ಅದ್ಭುತ ವಿಜಯವನ್ನು ಈಗ ಈ ದುರಂತಕ್ಕಾಗಿ ಮಾತ್ರ ನೆನಪಿಸಿಕೊಳ್ಳಲಾಗುತ್ತದೆ ಎಂಬುದು ನಿಜಕ್ಕೂ ದುಃಖಕರ. ಅಗಲಿದವರು ಮತ್ತೆ ಬರಲು ಸಾಧ್ಯವಿಲ್ಲ. ಅವರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡಿವೆ. ಅವರ ನಷ್ಟವನ್ನು ತುಂಬಲು ಅಥವಾ ವಿವರಿಸಲು ಯಾವ ಪದಗಳಿಂದಲೂ ಸಾಧ್ಯವಿಲ್ಲ.
ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು. ಇದು ಸರಕಾರದ, ಆಯೋಜಕರ, ಪೋಲೀಸರ, ಕ್ರಿಕೆಟ್ ಮಂಡಳಿಯ ವೈಫಲ್ಯ. ಮೃತರ ಸಂಖ್ಯೆಯನ್ನೂ ಮುಚ್ಚಿಟ್ಟ ಮಹಾಕುಂಭ ದುರಂತದ ಅಥವಾ ದೆಹಲಿ ರೈಲ್ವೆ ನಿಲ್ದಾಣ ಅಥವಾ ಮೋರ್ಬಿ ಸೇತುವೆ ದುರಂತದ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಇಲ್ಲಿ ಸತ್ಯವನ್ನು ಇತರ ಸ್ಥಳಗಳಂತೆ ಮರೆಮಾಚಲಾಗುತ್ತಿಲ್ಲ ಎಂದು ಸಮಾಧಾನ ಪಡಬಹುದೇನೋ..
ಆದರೆ...
ಕ್ರಿಕೆಟ್ ಅನ್ನು ನಮ್ಮ ಧರ್ಮವೆಂದು ಪರಿಗಣಿಸುವ ನಾವು, ನಮ್ಮ ಸೆಲೆಬ್ರಿಟಿಗಳನ್ನು ದೇವತೆಗಳನ್ನಾಗಿ ಮಾಡಿ, ನಮ್ಮ ಕ್ರಿಕೆಟ್, ಚಲನಚಿತ್ರ ಮತ್ತು ರಾಜಕೀಯ ನಾಯಕರ ಮೇಲಿನ ಪ್ರೀತಿಯಲ್ಲಿ ಕುರುಡರಾದ ನಾವು, ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ ??
ಇಂದು ನಮ್ಮನ್ನು ನಾವು ಒಂದು ಬಹು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕು. ಕ್ರೀಡೆ, ರಾಷ್ಟ್ರೀಯತೆ, ಧರ್ಮದಿಂದ ಹಿಡಿದು ಭಾಷೆ ಮತ್ತು ಜಾತಿಯವರೆಗೆ ಎಲ್ಲದರಲ್ಲೂ ನಾವು ಅತಿ ಭಾವುಕರಾಗುತ್ತಿಲ್ಲವೇ? ಈ ಅತಿ ಭಾವುಕತೆಯ ಪ್ರಯೋಜನ ಪಡೆಯುತ್ತಿರುವವರಾರು? ಬೆಲೆ ತೆರುತ್ತಿರುವವರು ಯಾರು???" ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ನಟ ಕಿಶೋರ್ ಪೋಸ್ಟ್‌ಗೆ ಬಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. "ನಿಮ್ಮ ಸಂದೇಶ ನಿನ್ನೆ ನಡೆದ ಘಟನೆಗೆ ಅಷ್ಟೇ ಸಾಕಾಗಿದ್ರೆ ಹಾಗ್ತಿತು. ಬೆರೆದ್ದೆಲ್ಲ ಈವಾಗ ಬೇಕಿರಲಿಲ್ಲ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. "ಯುವಕರ ಅತೀ ಭಾವುಕತೆಯ ಪ್ರಯೋಜನ ಪಡೆಯುತ್ತಿರೋರು ಧಾರ್ಮಿಕ ಸಂಸ್ಥೆಗಳು, ಕಾರ್ಪೊರೇಟ್ ವ್ಯಕ್ತಿಗಳು ಹಾಗೂ ರಾಜಕಾರಣಿಗಳು.. ದುಡ್ಡಿನ ಮದದಲ್ಲಿ ನೈತಿಕತೆಯನ್ನೇ ಪೂರ್ತಿಯಾಗಿ ಮರೆತಿರುವ ಇಂದಿನ ಯುವಕ, ಯುವತಿಯರು ದೇವರು, ವ್ಯಕ್ತಿ ಪೂಜೆಯ ಹೆಸರಿನಲ್ಲಿ ವೃದ್ಧರನ್ನು, ಮಕ್ಕಳನ್ನು, ಹೆಂಗಸರನ್ನು ತುಳಿದು ಸಾಯಿಸಾದರೂ ಸರಿ ತನ್ನಿಷ್ಟವನ್ನು ಪೂರೈಸಿಕೊಳ್ಳಬೇಕೆಂಬ ಮನಸ್ಥಿತಿಯೇ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣ" ಎಂದಿದ್ದಾರೆ. "ಹುಲಿ ಇದಕ್ಕೆ ನಾವೆಲ್ಲಾ ಜವಾಬ್ದಾರಲ್ಲ. ನಿನ್ನ ಲಜ್ಜೆಗೆಟ್ಟ ಸರ್ಕಾರದ ಜವಾಬ್ದಾರಿ. ಅತೀ ಧಾವಂತದಲ್ಲಿ ಈ ಕಾರ್ಯಕ್ರಮ ಮಾಡಿದ್ದು ಈ ಸರ್ಕಾರದ ಡಿಸಿಂ.. ಇದೇ ಕೆಲಸ ಮೋದಿ ಮಾಡಿದ್ದರೇ ನಿನ್ನ ವರಸೆ ಹೀಗೆ ಇರುತ್ತೀತ್ತೆ ಹುಲಿ..???" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











