ಆಘಾತಕಾರಿ ಸಂಗತಿ ಹಂಚಿಕೊಂಡ ನಟಿ, ಸಂಸದೆ ಸುಮಲತಾ ಅಂಬರೀಶ್
ನಟಿ, ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಆಘಾತಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಮಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂಬ ಮಾಹಿತಿಯನ್ನು ಅವರು ತಿಳಿಸಿದ್ದಾರೆ.
Recommended Video
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಬರೆದಿರುವ ಸುಮಲತಾ, ತಮ್ಮಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಎರಡು ದಿನಗಳಿಂದ ಲಕ್ಷಣಗಳು ಕಂಡುಬಂದಿದ್ದವು. ಕೊರೊನಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಪರೀಕ್ಷೆಗೆ ಒಳಗಾಗಿದ್ದೆ. ಇಂದು ವರದಿ ಬಂದಿದ್ದು, ಅದರಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಸುಮಲತಾ ತಿಳಿಸಿದ್ದಾರೆ.
ಈ ನಡುವೆ ತಮ್ಮ ಹೊಣೆಗಾರಿಕೆಯನ್ನು ಮೆರೆದಿರುವ ಸುಮಲತಾ, ಈ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದಿದ್ದ ಜನರ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಹಾಗೆಯೇ ತಮ್ಮನ್ನು ಭೇಟಿ ಮಾಡಿದ್ದ ಯಾರಲ್ಲಾದರೂ ಲಕ್ಷಣ ಕಂಡುಬಂದರೆ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ. ಮುಂದೆ ಓದಿ...

ಕೊರೊನಾ ಪೀಡಿತ ಪ್ರದೇಶಗಳಿಗೆ ಭೇಟಿ
ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದೆ ಎಂದು ಸುಮಲತಾ ತಿಳಿಸಿದ್ದಾರೆ.

ಮನೆಯಲ್ಲಿಯೇ ಕ್ವಾರೆಂಟೈನ್
ಕೋವಿಡ್ 19 ಪರೀಕ್ಷೆಯ ಫಲಿತಾಂಶ ಇವತ್ತು ಪಾಸಿಟಿವ್ ಎಂದು ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೇನೆ ಎಂದು ಅವರು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಪರೀಕ್ಷೆ ಮಾಡಿಸಿಕೊಳ್ಳಿ
ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ಸುಮಲತಾ ಮನವಿ ಮಾಡಿದ್ದಾರೆ.

ಬೇಗ ಚೇತರಿಸಿಕೊಳ್ಳಿ
ಸುಮಲತಾ ಅವರ ಪೋಸ್ಟ್‌ಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ಬೇಗನೆ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಗುಣಮುಖರಾಗಿ ಮತ್ತೆ ಸಾಮಾಜಿಕ ಸೇವೆಗೆ ಮರಳುವಂತಾಗಲಿ ಎಂದು ಅಭಿಮಾನಿಗಳು ಹೇಳಿದ್ದಾರೆ.


Click it and Unblock the Notifications











