ಟ್ವಿಟ್ಟರ್ ಲೋಕಕ್ಕೆ ಬಂದರು ಕಾಮಿಡಿ ಕಿಂಗ್ ಸಾಧು ಮಹಾರಾಜ್
ಸೆಲೆಬ್ರಿಟಿಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಹತ್ತಿರವಾಗಿರುವ ಪ್ರಯತ್ನ ಮಾಡುತ್ತಾರೆ. ಎಷ್ಟೋ ಹಿರಿಯ ಕಲಾವಿದರು, ತಂತ್ರಜ್ಞರು ಮುಂತಾದ ಸೆಲೆಬ್ರಿಟಿಗಳು ಫೇಸ್‌ಬುಕ್, ಟ್ವಿಟ್ಟರ್ ಅಥವಾ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಕೆಲವರು ವಿಷಯ ಅಥವಾ ಫೋಟೊ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಾರೆ.
ಆದರೆ ತೆರೆಯ ಮೇಲೆ ಸಕ್ರಿಯರಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜತೆಗೆ ಒಡನಾಟ ಹೊಂದಿರದ ಕೆಲವು ಕಲಾವಿದರಿದ್ದಾರೆ. ಅವರಲ್ಲಿ ಹಾಸ್ಯ ನಟ, ಸಂಗೀತ ನಿರ್ದೇಶಕ, ನಿರ್ದೇಶಕ ಸಾಧು ಕೋಕಿಲ ಕೂಡ ಒಬ್ಬರು. ಎಲ್ಲರೂ ಸಾಮಾಜಿಕ ಮಾಧ್ಯಮಗಳ ಜನರಿಗೆ ಹತ್ತಿರವಾಗುತ್ತಿರುವಾಗ ದೂರವೇ ಉಳಿದಿದ್ದ ಸಾಧು ಮಹಾರಾಜ್ ಜನರಿಗೆ ಕಚಗುಳಿ ಇಡಲು ಬರುತ್ತಿದ್ದಾರೆ.

ಸಾಧು ಮೊದಲ ಖಾತೆ
ನಿಜ. ಸಾಧು ಮಹಾರಾಜ್ ಕೂಡ ಟ್ವಿಟ್ಟರ್ ಲೋಕಕ್ಕೆ ಕಾಲಿರಿಸಿದ್ದಾರೆ. ಸಾಧು ಕೋಕಿಲಾ ಹೆಸರಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಖಾತೆಗಳಿದ್ದರೂ ಅವುಗಳ ಅಧಿಕೃತತೆ ಖಚಿತವಾಗಿಲ್ಲ. ಹೆಚ್ಚಿನವು ಅಭಿಮಾನಿಗಳೇ ಸೃಷ್ಟಿಸಿದ ಖಾತೆಗಳು.
ಆಂಜನೇಯ ಸ್ವಾಮಿ ಒಳ್ಳೆಯದು ಮಾಡಲಿ
'My first Tweet. ಶನಿವಾರದಂದೇ ನಾನು ಇಲ್ಲಿಗೆ ಕಾಲಿಟ್ಟಿದ್ದೇನೆ ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ' ಎಂದು ಸಾಧು ಕೋಕಿಲ ಮಾರ್ಚ್ 21ರಂದು ಟ್ವಿಟ್ಟರ್ ಲೋಕಕ್ಕೆ ಕಾಲಿರಿಸಿದ್ದನ್ನು ತಿಳಿಸಿದ್ದಾರೆ. 'ಕೋಕಿಲ ಸಾಧು' ಖಾತೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಡ್ಡಿ ದೋಸ್ತ್ ನೆನಪು...
ಇದರ ಬಳಿಕ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ 'ದೋಸ್ತಾ ಕಣೋ' ಹಾಡನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, 'ಈ ಹಾಡು ಕೇಳಿದ ಕೂಡಲೇ 'ಚಡ್ಡಿ ದೋಸ್ತ್' ಸಿನಿಮಾ ನೆನಪಾಯಿತು' ಎಂದು ಸಾಧು ತಮ್ಮ ಹಾಗೂ ರಂಗಾಯಣ ರಘು ನಟನೆಯ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.
ಸಾವಿರಾರು ಫಾಲೋವರ್ಸ್
ಸಾಧು ಕೋಕಿಲ ಹೆಸರಲ್ಲಿ ಟ್ವಿಟ್ಟರ್‌ನಲ್ಲಿ ಕೂಡ ಹಳೆಯ ಖಾತೆಯಿದೆ. ಆದರೆ ಅದು ಅವರೇ ಸೃಷ್ಟಿಸಿದ್ದ ಖಾತೆಯೇ ಎನ್ನುವುದು ಖಚಿತವಾಗಿಲ್ಲ. ಹೊಸ ಖಾತೆಯಲ್ಲಿ ಸಾಧು ಅವರನ್ನು ಕಂಡ ಜನರು ರೋಮಾಂಚಿತರಾಗಿದ್ದಾರೆ. ಟ್ವಿಟ್ಟರ್‌ಗೆ ಕಾಲಿಟ್ಟ ಐದಾರು ಗಂಟೆಯಲ್ಲಿಯೇ ಸುಮಾರು ಎರಡು ಸಾವಿರ ಮಂದಿ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಸಾಧು ಖಾಸಗಿ ಟಿವಿ ವಾಹಿನಿ, ಕಿಚ್ಚ ಸುದೀಪ್, ದರ್ಶನ್ ತೂಗುದೀಪ ಮತ್ತು ಹಂಸಲೇಖ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications











