ಇಲ್ಲೇ ಹುಟ್ಟಿ. ಇಲ್ಲೇ ಬದುಕಿ, ಹೀಗೆ ಹೀನ ಕೃತ್ಯ ಮಾಡಿದ್ದು ಎಷ್ಟು ಸರಿ?: ಕನ್ನಡ ಬಾವುಟ ಸುಟ್ಟವರಿಗೆ ಸತೀಶ್ ಎಚ್ಚರಿಕೆ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ದರು. ಇಲ್ಲಿಂದ ಮತ್ತೆ ಎಂಇಎಸ್, ಶಿವಸೇನೆಯ ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಒಂದು ವಾರದ ಹಿಂದೆ ನಡೆದ ಘಟನೆಯ ಬಳಿಕ ಕರ್ನಾಟಕದೊಳಗೆ ಕನ್ನಡ ಬಾವುಟಕ್ಕೆ ಬೆಂಕಿ ಇರುವ ಕೆಲಸ ನಡೆಯುತ್ತಲೇ ಇದೆ. ಬಸವಣ್ಣ ಮುಖಕ್ಕೆ ಮಸಿ ಬಳಿಯುವುದು. ರಾಯಣ್ಣ ಪ್ರತಿಮೆ ದ್ವಂಸ ಮಾಡಲು ಯತ್ನಿಸಿದ ಘಟನೆಗಳು ನಡೆಯುತ್ತಲೇ ಇವೆ.
ಬೆಳಗಾವಿಯಲ್ಲಿನ ಕನ್ನಡಿಗರು ಹಾಗೂ ಮರಾಠಿಗರ ನಡುವಿನ ಸಮರ ನಡೆಯುತ್ತಲೇ ಇರುತ್ತವೆ. ಎಂಇಎಸ್ ಹಾಗೂ ಶಿವಸೇನೆ ಕನ್ನಡದ ಬಾವುಟ ಸುಡುವ ಮೂಲಕ ಉದ್ಧಟತನ ತೋರಿದಕ್ಕೆ ಕನ್ನಡ ಚಿತ್ರರಂಗ ಸಿಡಿದೆದ್ದಿದೆ. ಶಿವರಾಜ್‌ಕುಮಾರ್, ದರ್ಶನ್, ದುನಿಯಾ ವಿಜಯ್ ಸೇರಿದಂತೆ ಬಹುತೇಕ ನಟ-ನಟಿಯರು ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಟ ನೀನಾಸಂ ಸತೀಶ್ ಕನ್ನಡ ವಿರೋಧಿಗಳಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಬಾವುಟಕ್ಕೆ ಬೆಂಕಿ ಇಟ್ಟವರ ವಿರುದ್ಧ ಸತೀಶ್ ಆಕ್ರೋಶ
ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟವರ ವಿರುದ್ಧ ಇಡೀ ಸ್ಯಾಂಡಲ್‌ವುಡ್ ರೊಚ್ಚಿಗೆದ್ದಿದೆ. ಕನ್ನಡ ನಾಡಿನಲ್ಲೇ ಇದ್ದು, ಶಾಂತಿ ಕದಡುತ್ತಿರುವವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರಲ್ಲೂ ನೀನಾಸಂ ಸತೀಶ್ ಕನ್ನಡ ವಿರೋಧಿಗಳಿಗೆ ಬಹಿರಂಗ ಪತ್ರವನ್ನೇ ಬರೆದಿದ್ದಾರೆ. "ಬಾವುಟಕ್ಕೆ ಬೆಂಕಿ ಇಟ್ಟವರೇ.. ಇಲ್ಲೇ ಹುಟ್ಟಿ. ಇಲ್ಲೇ ಬದುಕಿ, ಹೀಗೆ ಹೀನ ಕೃತ್ಯ ಮಾಡಿದ್ದು ಎಷ್ಟು ಸರಿ?. ಶಾಂತಿಯಿಂದ ಬದುಕುತ್ತಿರುವ ನಾಡಿಗೆ ಕೊಳ್ಳಿ ಇಟ್ಟಿದ್ದು ಎಷ್ಟು ಸರಿ?. ನಿಮ್ಮ ಊರು, ನೀವಿರುವ ನೆಲ, ಪ್ರೀತಿಸದ ನೀವು ನಿಮ್ಮನ್ನು ಪ್ರೀತಿಸಲು ಸಾಧ್ಯವೇ? ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲ, ನಿಮಗೆ ನಿಮ್ಮ ವ್ಯಕ್ತಿತ್ವಕ್ಕೆ." ಎಂದು ಆಕ್ರೋಶ ಹೊರಹಾಕಿದ್ದಾರೆ.

ನೆಲ ಜನ ಭಾಷೆ ಗೌರವಿಸಬೇಕು
ಕನ್ನಡ ನಾಡಿನಲ್ಲಿಯೇ ಕನ್ನಡಿಗೇ ಸಾರ್ವಭೌಮ. ಕನ್ನಡ ನಾಡಿನಲ್ಲಿ ಇರುವಾಗ, ಇಲ್ಲಿನ ಭಾಷೆ , ಸಂಸ್ಕೃತಿಗೆ ಗೌರವ ನೀಡಲೇಬೇಕು. ಈ ಮಾತನ್ನು ನೀನಾಸಂ ಸತೀಶ್ ಕೂಡ ಸಾರಿ ಹೇಳಿದ್ದಾರೆ. " ಒಂದು ಜಾಗದಲ್ಲಿ ಕೆಲಸ ಮಾಡುವಾಗ, ಅಲ್ಲಿನ ಜನ, ಜಲ, ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕಾದ್ದು, ಧರ್ಮ ಮತ್ತು ಕರ್ತವ್ಯ ಮತ್ತು ಪ್ರೀತಿ. ಕರ್ನಾಟಕ ಎಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಅನ್ಯಭಾಷಿಗರಿಗೆ ಜಾಗನೀಡಿದೆ. ಸಮಾನತೆಯನ್ನೂ ಕೂಡ. ಪದೇ ಪದೇ ಈ ರೀತಿ ಘಟನೆಗಳನ್ನು ಮಾಡಿ, ನಮ್ಮನ್ನು ಕೆಣಕಿ ನಮ್ಮ ಸ್ವಾಭಿಮಾನವನ್ನು ಪ್ರಶ್ನೆ ಮಾಡಬೇಡಿ." ಎಂದು ಪತ್ರದಲ್ಲಿ ಹೇಳಿದ್ದಾರೆ.

ಕನ್ನಡ ವಿರೋಧಿಗಳಿಗೆ ಸತೀಶ್ ವಾರ್ನಿಂಗ್
ಕಳೆದೊಂದು ವಾರದಿಂದ ಕನ್ನಡ ರಾಜ್ಯದೊಳಗೆ ಇರುವ ಕನ್ನಡ ವಿರೋಧಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಇಂತಹವರಿಗೆ ನೀನಾಸಂ ಸತೀಶ್ ವಾರ್ನಿಂಗ್ ಕೊಟ್ಟಿದ್ದಾರೆ. "ಇದಕ್ಕೆ ತಕ್ಕ ಉತ್ತರ ನಮ್ಮಿಂದ ಬಯಸಬೇಡಿ. " ಜೈ ಭಾರತೀಯ ತುನುಜಾತೆ" ಎಂದು ಹಾಡುವ ನಾವು ಎಲ್ಲರ ಜೊತೆಗೂಡಿ ಬದುಕುವುದನ್ನು ಕಲಿತ್ತಿದ್ದೇವೆ. ಹಾಗೆ ಸಮಯ ಬಂದರೆ, ಅಣ್ಣಾವ್ರ ಗೋಕಾಕ್ ಚಳುವಳಿಗೂ ಸಿದ್ಧ. ಇದು ಎಚ್ಚರಿಕೆಯೂ ಹೌದು. ಕಾಳಜಿಯೂ." ಎಂದು ನೀನಾಸಂ ಸತೀಶ್ ಎಚ್ಚರಿಕೆ ನೀಡಿದ್ದಾರೆ.

ಪುಂಡರಿಗೆ ಹೋರಾಟದ ಎಚ್ಚರಿಕೆ
ಕನ್ನಡ ಬಾವುಟ ಸುಟ್ಟಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಿದಂತಾಗಿದೆ. ಪ್ರತಿ ಬಾರಿ ಶಿವಸೇನೆ ಹಾಗೂ ಎಂಇಎಸ್ ಪುಂಡರು ಕನ್ನಡ ವಿರೋಧಿ ಚಟುವಟಿಕೆ ನಡೆಸಿದಾಗಲೂ ಕರ್ನಾಟಕದಲ್ಲಿ ಶಾಂತಿ ಹಾಳಾಗುತ್ತೆ. ಹೀಗಾಗಿ ಶಿವರಾಜ್‌ಕುಮಾರ್, ನಟ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕನ್ನಡ ವಿರೋಧಿ ಪುಂಡರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











