ರಾಕೆಟ್ ಚಿತ್ರದ ಲಾಭದಲ್ಲಿ ರೈತರಿಗೆ ಪಾಲು : ನೀನಾಸಂ ಸತೀಶ
ಹುಬ್ಬಳ್ಳಿಯಲ್ಲಿ ಕನ್ನಡ ಚಿತ್ರರಂಗ ಸೂಪರ್ ಸ್ಟಾರ್ ಗಳು, ಗಣ್ಯಾತಿಗಣ್ಯರು, ಹೀರೋಯಿನ್ ಗಳು ಬಂದು ಮೆರವಣಿಗೆ ಮಾಡಿ ರೈತರ ಹೋರಾಟ ಬೆಂಬಲ ಸೂಚಿಸಿದ್ದು ಓದುಗರಿಗೆ ನೆನಪಿರಬಹುದು. ಕಳಸಾ ಬಂಡೂರಿ ಯೋಜನೆಗಾಗಿ ಸ್ಯಾಂಡಲ್ ವುಡ್ ಮಂದಿ ಒಗ್ಗೂಡಿ ಕೈ ಜೋಡಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಇದಾದ ಬಳಿಕ ಅಲ್ಲಲ್ಲಿ ರೈತ ಪರ ದನಿ ಕೇಳಿ ಬರುತ್ತಿದೆ. ಲೂಸಿಯಾ ಖ್ಯಾತಿಯ ನೀನಾಸಂ ಸತೀಶ್ ಅವರು ಗಟ್ಟಿಯಾಗಿ ರೈತ ಪರ ನಿಲುವು ತಳೆದಿದ್ದಾರೆ.
ಇದೇ ಮೊದಲ ಬಾರಿಗೆ ನಿರ್ಮಾಪಕನಾಗಿ ಕೂಡಾ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನೀನಾಸಂ ಸತೀಶ್ ಅವರು ತಮ್ಮ ಹೊಸ ಚಿತ್ರ 'ರಾಕೆಟ್' ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ರೈತ ಪರ ಘೋಷಣೆ ಮಾಡಿದರು. [ಕಳಸಾ-ಬಂಡೂರಿ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದಾರೆ ಪೂಜಾಗಾಂಧಿ]
ರಾಕೆಟ್ ಚಿತ್ರದಿಂದ ಬರುವ ಶೇ 10ರಷ್ಟು ಲಾಭಾಂಶವನ್ನು ಸಂಕಷ್ಟದಲ್ಲಿರುವ ರೈತರ ಕುಟುಂಬಗಳಿಗೆ ನೀಡಲು ಮೀಸಲಿಡುವುದಾಗಿ ಹೇಳಿದ್ದಾರೆ.
ನಾನು ಕೂಡಾ ರೈತಾಪಿ ಕುಟುಂಬದಿಂದ ಬಂದವನು. ರೈತರ ಆತ್ಮಹತ್ಯೆ ಸುದ್ದಿ ಕಿವಿಗೆ ಬಿದ್ದರೆ ಸಂಕಟವಾಗುತ್ತದೆ. ಕಷ್ಟದಲ್ಲಿರುವವರಿಗೆ ನಮ್ಮ ಕೈಲಾಗುವ ನೆರವು ನೀಡಲು ನಿರ್ಧರಿಸಿದ್ದೇನೆ. ಇದಕ್ಕೆ ರಾಕೆಟ್ ಚಿತ್ರ ತಂಡ ಕೂಡಾ ಸಹಕರಿಸುತ್ತಿದೆ. [ರೈತರಿಗೆ ಚಿತ್ರರಂಗದ ಬೆಂಬಲ, ಭಾಷಣಕ್ಕೆ ಟ್ವೀಟ್ ಪ್ರತಿಕ್ರಿಯೆ]
ಈ ರೀತಿಯ ಆರ್ಥಿಕ ನೆರವು ರಾಕೆಟ್ ಚಿತ್ರದ ಮೂಲಕ ಆರಂಭವಾಗಲಿದ್ದು, ಇನ್ನು ಮುಂದೆ ಕೂಡಾ ನನ್ನ ಚಿತ್ರದಿಂದ ಬರುವ ಲಾಭವನ್ನು ರೈತರ ಕುಟುಂಬಗಳಿಗೆ ಹಂಚುತ್ತೇನೆ ಎಂದು ನೀನಾಸಂ ಸತೀಶ್ ಹೇಳಿದರು.
ರೈತರ ಆತ್ಮಹತ್ಯೆ ಹಾಗೂ ಸಂಕಷ್ಟ ಪರಿಸ್ಥಿತಿ ಬಗ್ಗೆ ಬಂದಿರುವ ವರದಿ, ಸಮೀಕ್ಷೆಗಳನ್ನು ಅಧ್ಯಯನ ಮಾಡಿ ಪಟ್ಟಿ ತಯಾರಿಸಲಾಗುತ್ತದೆ. ಕನಿಷ್ಠ 20,000 ರು ನಂತೆ ಸುಮಾರು 100 ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸತೀಶ್ ಫಿಲಂ ಹೌಸ್ ಟ್ರಸ್ಟ್ ವತಿಯಿಂದ ರಾಜ್ಯದ ಎಲ್ಲಾ ಭಾಗದ ರೈತರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು. [ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]
ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ ಬಗ್ಗೆ ಸುಳಿವು ನೀಡಿದ ಸತೀಶ್, 'ಬಾರ್ಕೋಲು' ಎಂಬ ರೈತರ ಬದುಕಿನ ಕಥೆಯುಳ್ಳ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಚಿತ್ರದ ಕಥೆ ತಯಾರಾಗುತ್ತಿದೆ. ನಮ್ಮ ಬ್ಯಾನರ್ ನಲ್ಲೇ ನಿರ್ಮಿಸಿ, ನಿರ್ದೇಶಿಸುವ ಬಯಕೆ ಇದೆ ಎಂದು ಹೇಳಿದರು. ಹಿಂದಿ ಚಿತ್ರರಂಗದ ನಾನಾ ಪಾಟೇಕರ್, ಅಕ್ಷಯ್ ಕುಮಾರ್ ನಂತರ ಸ್ಟಾರ್ ನಟರೊಬ್ಬರು ರೈತರಿಗೆ ನೆರವಾಗುವ ಸುದ್ದಿ ಶುಭ ಸೂಚನೆಯಾಗಿ ಬಂದಿದೆ.


Click it and Unblock the Notifications













