"ಅಭಿಮಾನಿಗಳೇ ದೇವರು ಅಂತ ಕರೆಸಿಕೊಂಡ ರಾಜ್ಯದಲ್ಲಿ ಈ ಘಟನೆ ನಡೆಯಬಾರದಿತ್ತು"; ಕುಮಾರ್ ಬಂಗಾರಪ್ಪ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರ ಸೇರಿ ತಿಂಗಳ ಮೇಲಾಗಿದೆ. ಆಗಸ್ಟ್ 1 ರಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಕೂಡ ಮುಗಿಯಲಿದೆ. ಅಲ್ಲಿ ದರ್ಶನ್‌ಗೆ ಜಾಮೀನು ಸಿಗುತ್ತಾ? ಇಲ್ಲಾ ಮತ್ತೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ಮಾಡುತ್ತಾ? ಅನ್ನುವ ಕುತೂಹಲವಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ನಟ ಕುಮಾರ್ ಬಂಗಾರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮತಾಡುವ ವೇಳೆ ಕುಮಾರ್ ಬಂಗಾರಪ್ಪ ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಅಭಿಮಾನಿಗಳೇ ದೇವರು ಅಂದಿರೋ ರಾಜ್ಯದಲ್ಲಿ ಇಂತಹ ಘಟನೆ ನಡೆದಿದ್ದು ದುರಂತ ಎಂದು ಹೇಳಿಕೆ ಕೊಟ್ಟಿದ್ದಾರೆ.

ಈ ಘಟನೆ ನಡೆಯಬಾರದಿತ್ತು. ಆದರೆ, ಇಂತಹದ್ದೊಂದು ಅಹಿತಕರವಾದ ಘಟನೆ ನಡೆದು ಹೋಗಿದೆ. ರೇಣುಕಾಸ್ವಾಮಿಯವರ ಕುಟುಂಬಕ್ಕೂ ಬಹಳ ದೊಡ್ಡ ಆಘಾತ ಆಗಿದೆ. ತಂದೆ-ತಾಯಿ ಹಾಗೂ ಪತ್ನಿಗೆ ತುಂಬಲಾರದ ನಷ್ಟ ಆಗಿದೆ. ದರ್ಶನ್ ಅವರು ಬಂಧಿತರಾಗಿದ್ದಾರೆ. ಕಾನೂನಿಗೆ ತನ್ನದೇ ಆದ ವ್ಯವಸ್ಥೆಯಿದೆ. ಈ ಸಂದರ್ಭದಲ್ಲಿ ಅದರ ಬಗ್ಗೆ ಕಾಮೆಂಟ್ ಮಾಡುವುದು ಯೋಗ್ಯವಲ್ಲ. ಈ ಕೇಸ್ ಬಗ್ಗೆ ತೀರ್ಮಾನಿಸುವುದಕ್ಕೆ ನ್ಯಾಯಾಲಯವಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿಕೊಂಡಿದ್ದಾರೆ.
"ಕಲಾವಿದನಾಗಿ ದರ್ಶನ್ ಅವರೊಂದಿಗೆ ನಾನು ಕೆಲಸ ಮಾಡಿದ್ದೆ. ಯಾವುದೇ ಕಲಾವಿದನಿಗೂ ನೋವಾಗುತ್ತೆ ಅಂದಾಗ ಆ ನೋವಿನಲ್ಲಿ ನಾವಿರುತ್ತೇವೆ. ಆ ನೋವನ್ನು ತಾನೇ ಮಾಡಿಕೊಂಡಾಗ, ಚಿತ್ರರಂಗದ ಎಲ್ಲಾ ಕುಟುಂಬಕ್ಕೂ ನೋವಾಗುತ್ತೆ. ಹಾಗಾಗಿ ದರ್ಶನ್ ಅವರಿಂದಾನೇ ತಪ್ಪು ಆಗಿದ್ದರೆ, ನ್ಯಾಯಾಲಯ ತೀರ್ಮಾನ ಮಾಡುತ್ತೆ. ದೇವರು ಅಂತ ಒಬ್ಬ ಇದ್ದಾನೆ. ನ್ಯಾಯನಾ ಆ ಕುಟುಂಬಕ್ಕೂ ಒದಗಿಸಿಕೊಡುತ್ತಾನೆ. ತಪ್ಪು ಮಾಡಿದವರಿಗೆ ಶಿಕ್ಷೆಯನ್ನೂ ಕೊಡಿಸುತ್ತಾನೆ." ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸಿದ್ದನ್ನೂ ನೆನಪಿಸಿಕೊಂಡಿದ್ದಾರೆ. "ಅವರೊಂದಿಗೆ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಸುಮಾರು ಒಂದು ತಿಂಗಳು ಅವರೊಂದಿಗೆ ಜೊತೆಯಲ್ಲಿ ಇದ್ದೆವು. ದರ್ಶನ್‌ಗೆ ಅವರದ್ದೇ ಆದ ಒಂದು ಆಟಿಟ್ಯೂಡ್ ಇದೆ. ಈ ವೇಳೆ ಕೊಲೆ ಮಾಡಿಬಿಟ್ಟಿದ್ದಾರೆ. ಅಥವಾ ಮಾಡಿಲ್ಲ ಅಂತ ಹೇಳುವುದಕ್ಕೆ ಹೋಗುವುದಿಲ್ಲ. ಆದರೆ, ಅವರೊಬ್ಬ ಒಳ್ಳೆಯ ವ್ಯಕ್ತಿ. ಬಹಳ ಕಷ್ಟದಿಂದ ಬಂದಿದ್ದಾರೆ. ಅವರ ತಂದೆಯೂ ಒಬ್ಬ ಕಲಾವಿದರಾಗಿದ್ದರು. ಬಹಳ ಕೆಳ ಮಟ್ಟದಿಂದ ಬಂದು ಸೂಪರ್‌ಸ್ಟಾರ್ ಆಗಿ, ಇಂತಹ ಸಂದರ್ಭದಲ್ಲಿ ಹೀಗಾಗಿದ್ದು ಬಹಳ ದೊಡ್ಡ ದುರಂತ ಅಂತಲೇ ಭಾವಿಸಿದ್ದೇನೆ." ಎಂದಿದ್ದಾರೆ.
ದರ್ಶನ್‌ಗೆ ಸ್ನೇಹಿತರೆಲ್ಲರೂ ಅವರ ಜೊತೆಯಲ್ಲಿಯೇ ಇರಬೇಕು. ಅವರ ಸಂತೋಷನೇ ನಮ್ಮ ಸಂತೋಷ ಅನ್ನುವಂತಹ ಭಾವನೆಯಿದೆ. ಕುಟುಂಬ ಅಂದಕೂಡಲೇ ಅವರಿಗೆ ಎಲ್ಲದನ್ನೂ ಕೊಡಲೇಬೇಕು. ಯಾವ ಮಟ್ಟಕ್ಕಾದರೂ ಹೋಗಿ ಸಾಧಿಸಲೇಬೇಕು. ಇದರಿಂದ ಒಂದು ರೀತಿಯಲ್ಲಿ ಒಳ್ಳೆಯದೂ ಆಗಿದೆ. ಇನ್ನೊಂದು ರೀತಿಯಲ್ಲಿ ಕೆಟ್ಟದ್ದೂ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರರಂಗದ ಪರದೆ ಮೇಲೆ ಒಳ್ಳೆಯದ್ದನ್ನೇ ಹೇಳುತ್ತಾ ಬಂದಿದ್ದೇವೆ. ಒಳ್ಳೆಯದನ್ನೇ ಮಾಡಬೇಕು ಅಂತ ಹೇಳಿದ್ದೇವೆ. ಈತರ ಆದಾಗ ಒಮ್ಮೆಗೆ ನನ್ನ ರೋಲ್ ಮಾಡಲ್ ಯಾರು? ಅನ್ನೋ ಪ್ರಶ್ನೆ ಬಂದು ಬಿಡುತ್ತೆ ಎಂದು ಅಣ್ಣಾವ್ರ ಉದಾಹರಣೆ ಕೊಟ್ಟು ಹೇಳಿದ್ದಾರೆ. "ಅಪ್ಪಾಜಿ, ಡಾ. ರಾಜ್‌ಕುಮಾರ್ ಅಭಿಮಾನಿಗಳೇ ದೇವರು ಅಂತಿದ್ರು. ಅಭಿಮಾನಿಗಳೇ ದೇವ್ರು ಎಂದು ಕರೆಸಿಕೊಂಡ ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಡಾ. ರಾಜ್ ಕುಮಾರ್ ನಮಗೆಲ್ಲಾ ರೋಲ್ ಮಾಡೆಲ್ ಆಗಿದ್ದಾರೆ. ನಟರಲ್ಲಿ ಸರಳತೆ ಇರಬೇಕು. ಯಾರಿಗೂ ನೋವಾಗದಂತೆ ಬದುಕಬೇಕು" ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.


Click it and Unblock the Notifications











