"ನಾನು ಈಗ ಸತ್ತರೂ ಟಿವಿಯಲ್ಲಿ ಹಾಕುವುದಕ್ಕೂ ನನ್ನ ಸಿನಿಮಾಗಳಿಲ್ಲ"; ರಾಕೇಶ್ ಅಡಿಗ
ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸದ್ದು ಮಾಡಿದ ನಟ ರಾಕೇಶ್ ಅಡಿಗ. ಬಿಗ್ ಬಾಸ್ ಓಟಿಟಿ ಹಾಗೂ ಸೀಸನ್ ಒಂಬತ್ತರ ರನ್ನರ್ ಅಪ್ ಆಗಿದ್ದ ರಾಕೇಶ್ ಅಡಿಗ ಈ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇವರನ್ನು ಹುಡುಕೊಂಡು ಬರುತ್ತಿವೆ. ಸದ್ಯ ಮೂರು ಸಿನಿಮಾಗಳಲ್ಲಿ ರಾಕೇಶ್ ಅಡಿಗ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್‌ಗೆ ಹೋಗಿ ಬಂದ್ಮೇಲೆ ರಾಕೇಶ್ ಅಡಿಗ ಜೀವನ ಬದಲಾಗಿದೆ. ತಮ್ಮ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿದ್ದಾರೆ. ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋನಿಂದ ಹೊರಬಂದ್ಮೇಲೆ ಸಿಕ್ಕಿರುವ ಸಿನಿಮಾಗಳು ತೃಪ್ತಿಕೊಟ್ಟಿವೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಸಂದರ್ಶನದಲ್ಲಿ ರಾಕೇಶ್ ಅಡಿಗ ಹೆಚ್ಚು ಫಿಲಾಸಫಿಯನ್ನೇ ಮಾತಾಡಿದ್ದಾರೆ. ಇದರ ಜೊತೆ ಇದೂವರೆಗಿನ ತಮ್ಮ ಸಿನಿಮಾ ಜರ್ನಿಯ ಬಗ್ಗೆನೂ ಮಾತಾಡಿದ್ದಾರೆ. ಇದೂವರೆಗೂ ನಟಿಸಿದ 16 ಸಿನಿಮಾಗಳಲ್ಲಿ ಕೇವಲ ನಾಲ್ಕು ಸಿನಿಮಾ ಅಷ್ಟೇ ನೋಡುವುದಕ್ಕೆ ಸಿಗುತ್ತೆ. ನಾನು ಸತ್ತರೂ ಟಿವಿಯಲ್ಲಿ ಹಾಕುವುದಕ್ಕೆ ನನ್ನ ಸಿನಿಮಾಗಳು ಸಿಗಲ್ಲ ಎಂದು ಹೇಳಿಕೊಂಡಿದ್ದಾರೆ. ಯಾಕೆ ಹೀಗಂದ್ರು ಅನ್ನೋದನ್ನು ತಿಳಿಯಲು ಮುಂದೆ ಓದಿ.
ತನಗೆ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಬಿಗ್‌ಬಾಸ್‌ಗೆ ಆಯ್ಕೆ ಮಾಡುವಾಗ ಅಂದು ಕಲರ್ಸ್ ಕನ್ನಡದ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್ ಏನು ಹೇಳಿದ್ದನ್ನು ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. "ನಾನು ಫೇಮ್ ಅನ್ನು ಬಿಟ್ಟು ಯಾವಾಗ ಬದುಕುವುದಕ್ಕೆ ಶುರು ಮಾಡಿದೆ. ಜಸ್ಟ್ ಒಂದು ವಾರ ಆದ್ಮೇಲೆ ಬಿಗ್‌ಬಾಸ್‌ನಿಂದ ಫೋನ್ ಬಂತು. ಪರಮ್ ನನಗೆ ನೀನೇ ಕೊನೆಯ ಸ್ಪರ್ಧಿ ಅಂತ ಕರೆದಿದ್ದರು. ಬಿಗ್‌ಬಾಸ್ ಓಟಿಟಿಗೆ ಆಯ್ಕೆ ಮಾಡುತ್ತಾರೆ. ನನಗೆ ಬಿಗ್‌ಬಾಸ್ ಒಂದನೇ ಸೀಸನ್‌ನಿಂದ ಬರುತ್ತಿತ್ತು. ಆದರೆ, ಯಾಕೋ ನಾನು ನಿಮ್ಮನ್ನು ಆಯ್ಕೆ ಮಾಡಿಲ್ಲ ಅಂತ ಹೇಳುತ್ತಿದ್ದರು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ರಾಕೇಶ್ ಅಡಿಗಗೆ ಬಿಗ್ ಬಾಸ್ ಅನ್ನೂ ಗೆಲ್ಲಬೇಕು ಅಂತೇನು ಇರಲಿಲ್ವಂತೆ. ಅಲ್ಲಿಂದ ಹೊರ ಬಂದ ಮೇಲೆ ಒಂದು ವಾರ ಡಿಪ್ರೆಷನ್‌ಗೆ ಹೊರಟು ಹೋಗಿದ್ದರು. ಎರಡು ದಿನ ರೂಮ್‌ನಲ್ಲಿ ಲಾಕ್ ಮಾಡಿಕೊಂಡು ಇದ್ದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. "ಬಿಗ್ ಬಾಸ್ ಮನೆಯೊಳಗೆ ನಾನು ಫೋನ್ ಏನೂ ಇಲ್ಲದೆ ಆರಾಮಾಗಿದ್ದೆ. ಆಚೆ ಬಂದ ತಕ್ಷಣ ನೀನು ಹಂಗೆ ಮಾಡಬೇಕಿತ್ತು. ಹೀಗೆ ಮಾಡಬೇಕಿತ್ತು. ಅವನು ಹಾಗೆ ಮಾತಾಡಿದ. ಹೀಗೆ ಮಾತಾಡಿದ. ಹೀಗೆ ಇದ್ದಿದ್ದರೆ ಗೆದ್ದುಬಿಡುತ್ತಿದ್ದೆ ಅಂತ ಹೇಳುವುದಕ್ಕೆ ಶುರು ಮಾಡಿದ್ದರು." ಎಂದು ಬಿಗ್ ಬಾಸ್ ಬಳಿಕ ಬದುಕು ಹೇಗಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಬಿಗ್‌ಬಾಸ್ ಬಳಿಕ ಒಳ್ಳೊಳ್ಳೆ ಸಿನಿಮಾಗಳು ಆಫರ್ ಬಂದಿವೆ. ಆರ್ ಜೆ ಪ್ರದೀಪ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ 'ನಾನು ಮತ್ತು ಗುಂಡ 2', ದುನಿಯಾ ವಿಜಯ್ ಅವರ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಈ ಮೂರೂ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾನೇ ಖುಷಿಯಿದೆ ಎಂದಿದ್ದಾರೆ.
ಇದೇ ವೇಳೆ ಇದೂವರೆಗೂ ಅವರೇ ನಟಿಸಿದ ಸಿನಿಮಾಗಳು ನೋಡುವುದಕ್ಕೂ ಸಿಗುತ್ತಿಲ್ಲ ಎಂದಿದ್ದಾರೆ. "ಇಷ್ಟು ದಿನ ಏನಾಗಿತ್ತು. ಇದೂವರೆಗೂ 16 ಸಿನಿಮಾ ಮಾಡಿದ್ದೇನೆ. ನಾನು ಸತ್ತರೂ ಈಗ ಅದನ್ನು ಟಿವಿಯಲ್ಲಿ ಹಾಕುವುದಕ್ಕೂ ಇಲ್ಲ. ಯೂಟ್ಯೂಬ್‌ನಲ್ಲಿ ಹಾಕುವುದಕ್ಕೂ ಇಲ್ಲ. ಎಲ್ಲ ಇಲ್ಲ ಆ ಸಿನಿಮಾ. ಅಷ್ಟು ಕಷ್ಟ ಪಟ್ಟು ನಟನೆ ಮಾಡಿದ್ದೇನೆ. ಈಗ ನೋಡುವುದಕ್ಕೂ ಇಲ್ಲ. ಅದು ಹಿಟ್ ಅಥವಾ ಫ್ಲಾಪೋ ಜನಕ್ಕೆ ನೋಡುವುಕ್ಕೆ ಸಿಗಲಿ ಅಂತ ಬಯಸುತ್ತಿದ್ದೆ. 16 ಸಿನಿಮಾ ಜೋಷ್, ಮನಸಾಲಜಿ, ಅಲೆಮಾರಿ ಸೇರಿ ನಾಲ್ಕು ಸಿನಿಮಾ ಇದೆ ಅಷ್ಟೇ." ಎಂದಿದ್ದಾರೆ.


Click it and Unblock the Notifications











