ವೇದಿಕೆ ಮೇಲೆ 'ಯುದ್ಧಕಾಂಡ' ಬಳಿಕ ಟಿಕೆಟ್ ಖರೀದಿಸಿದ ಕ್ರೇಜಿಸ್ಟಾರ್: ಕಾಲು ಮುಟ್ಟಿ ನಮಸ್ಕರಿಸಿದ ಅಜೇಯ್ ರಾವ್
ಕ್ರೇಜಿಸ್ಟಾರ್ ರವಿಚಂದ್ರನ್ ಏನೇ ಮಾಡಿದರೂ ಧೈರ್ಯವಾಗಿ ಮಾಡಿಯೇ ಅಭ್ಯಾಸ. ಹೊಗಳುವುದಿದ್ದರೂ ನೇರವಾಗಿ ಹೊಗಳುತ್ತಾರೆ. ತೆಗಳುವುದಿದ್ದರೂ ಮುಲಾಜಿಲ್ಲದೆ ನೇರವಾಗಿ ತೆಗಳುತ್ತಾರೆ. ಇದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸ್ವಭಾವ. ಇವರು ಅಜೇಯ್ ರಾವ್ ನಟಿಸಿ, ನಿರ್ಮಿಸಿದ 'ಯುದ್ಧಕಾಂಡ 2' ಸಿನಿಮಾದ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಜೇಯ್ ರಾವ್ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ 1989ರಲ್ಲಿ 'ಯುದ್ಧಕಾಂಡ' ಎನ್ನುವ ಹೆಸರಿನಲ್ಲಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಕೆವಿ ರಾಜು ನಿರ್ದೇಶನ ಮಾಡಿದ್ದರು. ಇದು 1985ರಲ್ಲಿ ಹಿಂದಿಯಲ್ಲಿ ತೆರೆಕಂಡಿದ್ದ 'ಮೇರಿ ಜಂಗ್' ಎನ್ನುವ ಸಿನಿಮಾದ ರಿಮೇಕ್ ಆಗಿತ್ತು. ಕನ್ನಡದಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಅಜಯ್ ರಾವ್ ಇದೇ ಹೆಸರಿಟ್ಟುಕೊಂಡು 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾವನ್ನು ನಿರ್ಮಿಸಿದ್ದಾರೆ.

ಇದೇ ಏಪ್ರಿಲ್ 18ರಂದು 'ಯುದ್ಧಕಾಂಡ 2' ಸಿನಿಮಾ ರಾಜ್ಯಾದ್ಯಾಂತ ರಿಲೀಸ್ ಆಗಲಿದೆ. ಈ ಸಿನಿಮಾದ ವಿಶೇಷ ಅತಿಥಿಯಾಗಿ ಬಂದಿದ್ದ ವಿ. ರವಿಚಂದ್ರನ್, ಅಜೇಯ್ ರಾವ್ ನಾವು ಸಪೋರ್ಟ್ ಮಾಡಬೇಕು ಅಂತ ವೇದಿಕೆ ಮೇಲೆ ಐದು ಗೋಲ್ಡ್ ಕ್ಲಾಸ್ ಟಿಕೆಟ್ ಅನ್ನು ಖರೀದಿ ಮಾಡಿದ್ದರು. ಆ ವೇಳೆ ಕ್ರೇಜಿಸ್ಟಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ವಿಶೇಷ ಕ್ಷಣವಾಗಿತ್ತು.
ಕಳೆದ ಕೆಲವು ದಿನಗಳಿಂದ ಅಜೇಯ್ ರಾಜ್ 'ಯುದ್ಧಕಾಂಡ 2'ಗಾಗಿ ಮಾಡಿದ ಸಾಲದ ಬಗ್ಗೆ ಚರ್ಚೆಯಾಗುತ್ತಿದೆ. ಸಂದರ್ಶನ ನೀಡಿದ ದಿನದಿಂದ ಅಜೇಯ್ ರಾವ್ ಬೆಂಬಲಕ್ಕೆ ನೆಟ್ಟಿಗರೇ ನಿಂತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ರವಿಚಂದ್ರನ್ ಇದೇ ಸಂದರ್ಶನಗಳನ್ನು ನೋಡಿಕೊಂಡು ಬಂದಿದ್ದರು. ವೇದಿಕೆ ಮೇಲೆ ಏರುತ್ತಿದ್ದಂತೆ ಅದೇ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
"ದಾರಿಯುದ್ಧಕ್ಕೂ ಸಂದರ್ಶನವನ್ನು ನೋಡಿಕೊಂಡು ಬರುತ್ತಿದ್ದೆ. ಎಷ್ಟು ಮಾತಾಡುತ್ತಾನೆ. ಇವನು ಮಾತಾಡುತ್ತಿದ್ದರೆ ಭಯ ಬಂದು ಬಿಡುತ್ತೆ. ಸಂದರ್ಶನವನ್ನು ನೋಡಿಕೊಂಡು ಬರುವಾಗ ಯುದ್ಧಕಾಂಡ ಏನು ಅನ್ನೋ ಪ್ರಶ್ನೆ ಕಾಡುವುದಕ್ಕೆ ಶುರುವಾಗಿತ್ತು. ಅಜೇಯ್ ರಾವ್ ಒಬ್ಬ ಲಾಯರ್ ಆಗಿ, ಒಬ್ಬ ಜವಾಬ್ದಾರಿಯುತ ನಿರ್ಮಾಪಕನಾಗಿ, ಅರ್ಧ ಡೈರೆಕ್ಟರ್ ಆಗಿ, ಒಬ್ಬ ಶಿಸ್ತಿನ ಸಿಪಾಯಿಯಾಗಿ, ಒಬ್ಬ ಫಾದರ್ ಆಗಿ, ಒಬ್ಬ ಪ್ರಜೆಯಾಗಿ ಈ ಹೋರಾಟಕ್ಕೆ ನಿಂತಿರುವುದೇ ಯುದ್ಧಕಾಂಡ." ಎಂದು ಹೇಳಿದ್ದಾರೆ.
ಸಿನಿಮಾ ನಿರ್ಮಾಣ ಮಾಡಿ, ಅದನ್ನು ರಿಲೀಸ್ ಮಾಡುವ ಹಂತಕ್ಕೆ ಬಂದಾಗ ಎಲ್ಲರ ಎದೆಯಲ್ಲಿ ನಡುಕ ಉಂಡಾಗುತ್ತೆ. ಸಿನಿಮಾ ರಿಸಲ್ಟ್ ಏನಾಗುತ್ತೋ? ಜನರಿಗೆ ಇಷ್ಟ ಆಗುತ್ತಾ ಇಲ್ವಾ? ಎನ್ನುವ ಪ್ರಶ್ನೆ ಎದ್ದೇಳುತ್ತೆ. ಹಾಗೇ ಸಿನಿಮಾ ಬೆಳ್ಳಿ ಪರದೆ ಮೇಲೆ ಬಂದಾಗ ಆಗುವ ಖುಷಿಯೇ ಬೇರೆ ಎನ್ನುತ್ತಾರೆ. "ನನ್ನಂಥ 40 ವರ್ಷ ಸಿನಿಮಾ ಜರ್ನಿ ಮಾಡಿಕೊಂಡು ಬಂದವರಿಗೆ ಒಂದು ಭಯವಿರುತ್ತೆ. ಪುಕ ಪುಕ ಅಂತ ಹಾರ್ಟ್ ಹೊಡೆದುಕೊಳ್ಳುವುದಕ್ಕೆ ಶುರುವಾಗುತ್ತೆ. ಅಂದರೆ, ಸಿನಿಮಾವನ್ನು ಅಷ್ಟು ಪ್ರೀತಿಸುತ್ತೇವೆ. ಒಂದು ಬಿಳಿ ಪರದೆ ಮೇಲೆ ಪ್ರತಿ ಸಾರಿ ಬಣ್ಣ ಬಳಿಯಬೇಕಾದರೆ, ಆ ಬಣ್ಣ ಅಲ್ಲಿಗೆ ಹೋಗಿ ಮೆಚ್ಚಿಸಿಕೊಂಡು ಬರುತ್ತೆ ಅನ್ನುವ ಖುಷಿಯಿದೆಯಲ್ಲ. ಆ ಖುಷಿ, ಆ ಕುತೂಹಲ ನಿನ್ನಲ್ಲಿ ಎದ್ದು ಕಾಣಿಸುತ್ತೆ. ನಿನ್ನಲ್ಲಿ ನನ್ನನ್ನು ಕಾಣುತ್ತೇನೆ." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.
'ಯುದ್ಧಕಾಂಡ ಚಾಪ್ಟರ್ 2' ತಂಡದ ಮಾತುಗಳನ್ನು ಕ್ರೇಜಿಸ್ಟಾರ್ ಚೆನ್ನಾಗಿಯೇ ಗಮನಿಸಿದ್ದಾರೆ. ನಟ ಹಾಗೂ ನಿರ್ದೇಶಕನಲ್ಲಿ ಕ್ಲಾರಿಯಟಿಯ ಬಗ್ಗೆ ಮಾತಾಡಿದ್ದಾರೆ. "ಅಜೇಯ್ ರಾವ್ ಹಾಗೂ ನಿರ್ದೇಶಕರು ಮಾತಾಡುತ್ತಾ ತೊದಲಲಿಲ್ಲ. ಒಂದು ವೇಳೆ ತೊದಲಿದರೆ ಇನ್ನೂ ಎಲ್ಲೋ ಒಂದು ಕಡೆ ಕನ್ಫ್ಯೂಷನ್ ಇದೆ ಅಂತ. ತೊದಲಲಿಲ್ಲ ಅಂದ್ರೆ, ಅಷ್ಟೇ ಕಾನ್ಫಿಡೆಂಟ್ ಆಗಿ ಅವರಿಗೆ ಏನು ಬೇಕೋ ಅದನ್ನು ಸಿನಿಮಾದಲ್ಲಿ ಹೇಳಿದ್ದಾರೆ. ಅದರಲ್ಲಿ ಬೇರೆ ಡೌಟ್ ಇಲ್ಲ. ನನಗೆ ಒಂದು ಎಮೋಷನಲ್ ಸಿನಿಮಾ ಕಣ್ಮುಂದೆ ಕಾಣಿಸುತ್ತಿದೆ." ಎನ್ನುತ್ತಾರೆ ರವಿಚಂದ್ರನ್.
ಅಜೇಯ್ ರಾವ್ ಸಾಲ ಮಾಡಿದ್ದೀನಿ ಅಂತ ಹೇಳಿದ್ದು ಕೇಳಿ ನನ್ನ ಸಾಲ ನೆನಪಿಗೆ ಬಂತು ಎಂದು ಗಂಭೀರವಾಗಿದ್ದ ಸಮಯದಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. "ಸಾಲ ಮಾಡಿದ್ದೀನಿ, ಸಾಲ ಮಾಡಿದ್ದೀನಿ ನಾನು ಅಂತ ಅಜಯ್ ರಾವ್ ಅಂದಾಗ. ನನ್ನ ಸಾಲ ನೆನಪಾಯ್ತು. ಸಾಲ ಮಾಡುವುದಕ್ಕೆ ತಾಕತ್ತು ಬೇಕು ಅಂದ. ನನಗೆ ಸಾಲ ತೀರಿಸುವುದಕ್ಕೆ ತಾಕತ್ತು ಬೇಕು. ಇಷ್ಟೊಂದು ಧೈರ್ಯ ತಗೊಂಡು ಸಿನಿಮಾ ಮಾಡಬೇಕಾ ಅನ್ನೋದು ಬಂತು. ನಾನು ಸಿನಿಮಾ ಮಾಡುತ್ತಲೇ ಇದ್ದೇನೆ. ಸಾಲದಲ್ಲೇ ಬದುಕಿದ್ದೀವಿ. ಸಾಲದಲ್ಲೇ ಹೋರಾಡುತ್ತಿದ್ದೇವೆ. ಆದರೆ, ಇವನಿಗೆ ಯಾಕೆ ಬೇಕು? ಇಷ್ಟೊಂದು ಯಾಕೆ ಬೇಕು? ಸಾಲ ಮಾಡುತ್ತೇನೆ ಅಂತ ಎಲ್ಲೂ ಹೇಳಬೇಡ. ಅಷ್ಟು ದುಡ್ಡು ಸಂಪಾದನೆ ಮಾಡು." ಎಂದಿದ್ದಾರೆ.
"ನಮ್ಮ ಅಪ್ಪ ಇದ್ದಾಗ ನನಗೆ ದುಡ್ಡಿನ ಬೆಲೆನೇ ಗೊತ್ತಿರಲಿಲ್ಲ. ಕೊನೆಯವರೆಗೂ ಗೊತ್ತಿರಲಿಲ್ಲ. ಇದೂವರೆಗೂ ಗೊತ್ತಿಲ್ಲ. ನಾನು ಹಾಗೆ ಬೆಳೆದು ಕೊಂಡು ಬಂದೆ. ನನಗೆ ನೂರು ಟ್ಯಾಂಕ್ ನೀರುಬೇಕು. ನನಗೆ ನೂರು ಜನ ಡ್ಯಾನ್ಸರ್ಸ್ ಬೇಕು. ನಮ್ಮ ಅಪ್ಪ ಎಲ್ಲಿಂದ ತರುತ್ತಿದ್ದರು. ಏನು ಮಾಡುತ್ತಿದ್ದರು. ಒಂದೂ ಗೊತ್ತಿಲ್ಲ ನನಗೆ. ಅವನ ಆಸೆ, ಅವನಿಗೆ ಏನು ಬೇಕೋ ಕೊಡ್ರಪ್ಪ ಅನ್ನೋದರು. ಅದರ ಹಿಂದೆ ಎಷ್ಟು ಸಾಲ ಮಾಡುತ್ತಿದ್ದಾರೆ. ಎಷ್ಟು ಕಷ್ಟ ಪಡುತ್ತಿದ್ದಾರೆ. ನನಗಂತೂ ಗೊತ್ತಿಲ್ಲ." ಎಂದು ತಮ್ಮ ಯವ್ವನದ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವಾಗ ನಡೆದುಕೊಳ್ಳುತ್ತಿದ್ದ ರೀತಿಯನ್ನು ಬಣ್ಣಿಸಿದ್ದಾರೆ.

ಹಾಗೇ ಅವರೇ ನಿರ್ಮಾಣಕ್ಕೆ ಇಳಿದಾಗ ದುಡ್ಡಿನ ಬೆಲೆ ಗೊತ್ತಾಯ್ತು ಎನ್ನುತ್ತಾರೆ. "ಅದೇ ನಾನು ಮಾಡುವಾಗ ಪ್ರತಿಯೊಂದು ಪೈಸಾನೂ ಗೊತ್ತಾಯ್ತು. ನನ್ನ ಜೇಬು ಖಾಲಿಯಾದಾಗ ನನ್ನ ಹತ್ತಿರ ದುಡ್ಡು ಇಲ್ವಲ್ಲ ಅಂತ. ಎಷ್ಟೇ ದುಡ್ಡಿಲ್ಲದೆ ಹೋದರೂ ಸಿನಿಮಾ ಮಾಡುವಂತಹ ಹುಚ್ಚಂತೂ ಬಿಡೋದಿಲ್ಲ. ನನ್ನ ಹತ್ತಿರ ದುಡ್ಡಿಲ್ಲ ಅಂದರೆ, ಅಷ್ಟರಲ್ಲೇ ಸಿನಿಮಾ ಮಾಡುವುದನ್ನು ಕಲಿಯಬೇಕು. ಯಾಕಂದ್ರೆ, ಇಲ್ಲಿ ಹಣ ಮುಖ್ಯ ಅಲ್ಲ. ಕಂಟೆಂಡ್ ಮುಖ್ಯ." ಎಂದು ವಿ ರವಿಚಂದ್ರನ್ ವೇದಿಕೆ ಹೇಳಿದ್ದಾರೆ. ಹೀಗಾಗಿ ಅಜೇಯ್ ರಾಮ್‌ಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ.
ಇದೇ 'ಯುದ್ಧಕಾಂಡ 2' ಇವೆಂಟ್‌ನ ವೇದಿಕೆ ಮೇಲೆ ಐದು ಗೋಲ್ಡ್ ಕ್ಲಾಸ್ ಟಿಕೆಟ್‌ಗಳನ್ನು ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. "ಅಜೇಯ್ ರಾವ್‌ನಲ್ಲಿ ಕಾನ್ಫಿಡೆನ್ಸ್ ಕಾಣಿಸುತ್ತಿದೆ. ಗೆಲ್ಲುತ್ತೇನೆ ಎನ್ನುವ ಉತ್ಸಾಹ ಕಾಣಿಸುತ್ತಿದೆ. ಇದಕ್ಕೆ ನಾವೇನು ಮಾಡಬಹುದು? ಅದಕ್ಕೆ ನಾನು ಇಲ್ಲೇ ಒಂದು ಐದು ಟಿಕೆಟ್ ಗೋಲ್ಡ್‌ಕ್ಲಾಸ್‌ದು ತೆಗೆದುಕೊಳ್ಳುತ್ತೇನೆ." ಎಂದು ವೇದಿಕೆ ಮೇಲೆ ಅಜೇಯ್ ರಾವ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಣ ನೀಡಿದರು. ಟಿಕೆಟ್‌ಗೆ ಮೊದಲ ಹಣ ಪಡೆದ ಅಜೇಯ್ ರಾವ್ ಕ್ರೇಜಿಸ್ಟಾರ್ ರವಿಚಂದ್ರನ್ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಹಾಗೇ ನಾನು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತೇನೆ. ಪುಕ್ಕಟ್ಟೆಯಾಗಿ ಸಿನಿಮಾ ನೋಡುವುದಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ. ಅಜೇತ್ ರಾವ್ ನಟಿಸಿದ ಸಿನಿಮಾ 'ಯುದ್ಧಕಾಂಡ ಚಾಪ್ಟರ್ 2" ಇದೇ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ವಕೀಲನಾಗಿ ನಟಿಸಿರುವ ಅಜೇಯ್ ರಾವ್ ಸಿನಿಮಾವನ್ನು ಜನರು ಮೆಚ್ಚಿಕೊಳ್ಳುತ್ತಾರಾ? ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆಲ್ಲತ್ತಾ? ಅಜೇಯ್ ರಾವ್ ಮತ್ತೆ ಚಿತ್ರರಂಗದಲ್ಲಿ ಸದ್ದು ಮಾಡುತ್ತಾರಾ? ಏಪ್ರಿಲ್ 12ರ ಬಳಿಕ ತಿಳಿಯಲಿದೆ.


Click it and Unblock the Notifications











