'ರಿಷಿ'ಗೆ ನಾಯಕಿಯಾದ ದುನಿಯ ವಿಜಯ್ ಪುತ್ರಿ ರಿತಾನ್ಯಾ; ಶವಗಳನ್ನು ಹೂಳುವ ನೀಲಮ್ಮ 'ಜವರ'ನಿಗೆ ಕ್ಲಾಪ್ ಮಾಡಿದ್ದೇಕೆ?
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಇದು ಕೂಡ ಸಿನಿಮಾದ ಟೈಟಲ್‌ನಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಹಾಗೇ ಈ ಸಿನಿಮಾದ ಸ್ಟಾರ್‌ಕಾಸ್ಟ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಅಂದ್ಹಾಗೆ ವಿಭಿನ್ನ ಟೈಟಲ್ ಮೂಲಕ ಅನೌನ್ಸ್ ಮಾಡಿದ ಸಿನಿಮಾವೇ 'ಜವರ'. ಅಪರೇಷ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಮೊದಲ ಪುತ್ರಿ ರಿತನ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ಜವರ' ಎನ್ನುವ ಟೈಟಲ್ ವಿಭಿನ್ನವಾಗಿದೆ. ಇನ್ನೊಂದು ಕಡೆ ಸ್ಮಶಾನದಲ್ಲಿ ಶವಗಳನ್ನು ಹೂಳುವ ಕೆಲಸ ಮಾಡುತ್ತಿರುವ ನೀಲಮ್ಮ ಕೈಯಲ್ಲಿ ಈ ಸಿನಿಮಾಗೆ ಕ್ಲಾಪ್ ಮಾಡಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೋಮಲ್ ನಟಿಸಿದ್ದ 'ಯಲಾ ಕುನ್ನಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪ್ರದೀಪ್ ದಳವಾಯ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿದಾವೃಷಭ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

'ಜವರ' ಸಿನಿಮಾ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿಅದ್ದೂರಿಯಾಗಿ ಮುಹೂರ್ತ ಮಾಡಲಾಗಿದೆ. 'ಜವರ' ಎನ್ನುವ ಟೈಟಲ್ ಕೇಳಿಯೇ ಪ್ರೇಕ್ಷಕರು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಟೈಟಲ್ ನೋಡಿ ಮೇಲ್ನೋಟಕ್ಕೆ ಇದೊಂದು ಮಾಸ್ ಟೈಟಲ್ ಸಿನಿಮಾ ಎನಿಸುತ್ತಿದೆ. ಸಿನಿಮಾ ಮುಹೂರ್ತ ಜೊತೆಗೆ ಚಿತ್ರೀಕರಣಕ್ಕೆ ಚಾಲನೆ ಕೂಟ್ಟಿರೋದು ವಿಶೇಷ. ಹಾಗೇ ಸ್ಮಶಾನದಲ್ಲಿ ಶವಗಳನ್ನು ಹೂಳುವ ನೀಲಮ್ಮ ಯಾಕೆ 'ಜವರ' ಸಿನಿಮಾಗೆ ಕ್ಲಾಪ್ ಮಾಡಿದ್ರು? ಅನ್ನೋ ಕುತೂಹಲವೂ ಎದ್ದಿದೆ.
ಇನ್ನು ದುನಿಯಾ ವಿಜಯ್ ಪುತ್ರಿ ರಿತನ್ಯಾ 'ಜವರ' ಸಿನಿಮಾ ಮೂಲಕ ಅಧಿಕೃತವಾಗಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ತಂದೆ ವಿಜಯ್ ನಟಿಸುತ್ತಿರುವ 'ಲ್ಯಾಂಡ್ ಲಾರ್ಡ್' ಸಿನಿಮಾ ಮೊದಲ ಸಿನಿಮಾ ಆಗಿದ್ದರೂ, ನಾಯಕಿಯಾಗಿ ನಟಿಸುತ್ತಿರೋದು ಇದು ಮೊದಲ ಸಿನಿಮಾ. 'ಜವರ'ದಲ್ಲಿ ರಿತನ್ಯಾ ಅವರದ್ದು 'ಭೂಮಿ' ಎನ್ನುವ ಪಾತ್ರ. "ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಅವರ ಜೊತೆ ನಟಿಸುತ್ತಿರುವುದು ತುಂಬಾ ಖುಷಿ ಇದೆ. ನಾನು ತುಂಬಾ ಲಕ್ಕಿ ಎನಿಸುತ್ತೆ" ಎಂದು ರಿತನ್ಯಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಹಾಗೇ 'ಜವರ' ಸಿನಿಮಾದಲ್ಲಿ ನಾಯಕನಾಗಿ ರಿಷಿ ನಟಿಸುತ್ತಿದ್ದಾರೆ. ಇದರಲ್ಲಿ ಅವರ ಪಾತ್ರದ ಹೆಸರು ರುದ್ರ. "ಕಥೆ ತುಂಬಾ ಇಷ್ಟವಾಯಿತು. ನಿರ್ದೇಶಕರು ಕಥೆ ಹೇಳುವಾಗಲೇ ಸ್ಕ್ರೀನ್ ಪ್ಲೇ ಕೂಡ ರೆಡಿ ಮಾಡಿಕೊಂಡಿದ್ದರು. ಅದು ತುಂಬಾ ಇಷ್ಟ ಆಯ್ತು. ನಿರ್ದೇಶಕರು ತುಂಬಾ ಯೋಚಿಸಿ ಮಾಡಿರುವ ಕಥೆ ಇದು. ನಿರ್ದೇಶಕ ಎನ್ನುವುದಕ್ಕಿಂತ ಕ್ರಿಯೇಟಿವ್ ಹೆಡ್ ಎನ್ನುಬಹುದು. ರಿತನ್ಯಾ ತುಂಬಾ ಚೆನ್ನಾಗಿ ನಟಿಸುತ್ತಾರೆ" ಎಂದು ರಿಷಿ ಹೇಳಿದ್ದಾರೆ.

ರಿಷಿ ಹಾಗೂ ರಿತನ್ಯಾ ಜೊತೆ ಸ್ಯಾಂಡಲ್‌ವುಡ್‌ನ ಹಿರಿಯ ಕಲಾವಿದರಾದ ರಂಗಾಯಣ ರಘು ಹಾಗೂ ನಟಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಅವರವರ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ರಂಗಾಯಣ ರಘು ಗೌರಿ ಪಾತ್ರದಲ್ಲಿ ನಟಿಸುತ್ತಿದ್ದರೆ, ಶ್ರುತಿಯವರು ರಾಯಲ್ ಮೀನಾಕ್ಷಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ."ಶ್ರುತಿ ಅವರ ಜೊತೆ ಮತ್ತೆ ನಟಿಸುತ್ತಿದ್ದೀನಿ. ಪಾತ್ರ ತುಂಬಾ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ನಾನು ಇರುವ ಜಾಗ ತುಂಬಾ ಪ್ರಶಾಂತವಾಗಿರುತ್ತೆ. ಶಿವ ಇರುವ ಜಾಗವದು. ಅಂಥ ಅದ್ಭುತ ಪಾತ್ರದಲ್ಲಿ ನಟಿಸುತ್ತಿದ್ದೇನೆ." ಎಂದು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಶ್ರುತಿ "ಕಥೆ ತುಂಬಾ ಚೆನ್ನಾಗಿದೆ. ಬದುಕೆಲ್ಲ ಮುಗಿದ ಮೇಲೆ ಹೊರಡುವ ಜಾಗದಲ್ಲಿ ಇರ್ತೀನಿ" ಎಂದಿದ್ದಾರೆ.
ನಿರ್ದೇಶಕ ಪ್ರದೀಪ್ ಡೈರೆಕ್ಷನ್ ಜೊತೆಗೆ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. "ಸಿನಿಮಾದ ಕಥೆಗೆ ನಟಿ ಶ್ರುತಿ ಮತ್ತು ರಂಗಾಯಣ ರಘು ಅವರು ತುಂಬಾ ಅವಶ್ಯಕತೆ ಇತ್ತು. ಅವರು ಒಪ್ಪಿಕೊಂಡಿರುವುದು ಖುಷಿಯಿದೆ. ರಿತನ್ಯಾ ಅವರು ತುಂಬಾ ಚೆನ್ನಾಗಿ ನಟಿಸುತ್ತಾರೆ.ರಿಷಿ ಕೂಡ ತುಂಬಾ ಒಳ್ಳೆಯ ಕಲಾವಿದ' ಎಂದು ತಮ್ಮ ಸಿನಿಮಾದ ಪಾತ್ರದ ಬಗ್ಗೆ ಮಾತಾಡಿದ್ದಾರೆ. ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











