"ಅಯೋಗ್ಯ ನನಗೆ ಲೆಕ್ಕನೇ ಅಲ್ಲ.. ರೈಸ್ ಆಫ್ ಅಶೋಕ ಹಾಕಿದ ಬಜೆಟ್ ಬೇರೆ"-ಸತೀಶ್ ನೀನಾಸಂ
ಸತೀಶ್ ನೀನಾಸಂ ಅಪ್ ಕಮಿಂಗ್ ಸಿನಿಮಾ 'ರೈಸ್ ಆಫ್ ಅಶೋಕ'. ನೂರೆಂಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಜೋಷ್‌ನಲ್ಲಿ ಶುರುವಾಗಿದ್ದ ಈ ಸಿನಿಮಾ ಕೊನೆಗೆ ಹತ್ತು ಹಲವು ಕಷ್ಟಗಳನ್ನು ಎದುರಿಸಿತ್ತು. ಹಣಕಾಸಿನ ತೊಂದರೆಯಿಂದ ಈ ಸಿನಿಮಾ ನಿಂತ್ತಿತ್ತು. ಹೊಸ ಇನ್ವೆಸ್ಟರ್ ಬಂದು ಇನ್ನೇ ಮತ್ತೆ ಶುರುವಾಗುತ್ತೆ ಅನ್ನೋ ಖುಷಿಯಲ್ಲಿದ್ದ ತಂಡಕ್ಕೆ ದೊಡ್ಡ ಶಾಕ್ ಎದುರಾಗಿತ್ತು. ಈ ಸಿನಿಮಾ ನಿರ್ದೇಶಕ ವಿನೋದ್ ಧೋಂಡಾಲೆ ಆತ್ಯಹತ್ಯೆ ಸಿನಿಮಾ ತಂಡವನ್ನು ಮತ್ತೊಮ್ಮೆ ಕುಗ್ಗಿಸಿತ್ತು.
ಈ ಸಮಯದಲ್ಲಿ ಸತೀಶ್ ನೀನಾಸಂ ಇಡೀ ಚಿತ್ರತಂಡವನ್ನು ಬಡಿದೆಬ್ಬಿಸಿದರು. ಸಿನಿಮಾವನ್ನು ಟೇಕ್ ಓವರ್ ಮಾಡಿ ಶೂಟಿಂಗ್ ಮುಗಿಸಿ ಬಿಡುಗಡೆಗೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ಮೊದಲ ಹಂತವಾಗಿ 'ರೈಸ್ ಆಫ್ ಅಶೋಕ'ದ ಚೊಚ್ಚಲ ಹಾಡು "ಏಳೋ ಏಳೋ ಮಾದೇವ.."ವನ್ನು ರಿಲೀಸ್ ಮಾಡಿದ್ದಾರೆ. ಮಲೆ ಮಾದೇಶ್ವರನ ಸನ್ನಿಧಿಯಲ್ಲಿಯೇ ಹಾಡು ಬಿಡುಗಡೆಯಾಗಿದ್ದು ವಿಶೇಷ.

ಈ ಹಾಡು ಬಿಡುಗಡೆ ಮಾಡಿದ ಬಳಿಕ ಸತೀಶ್ ನೀನಾಸಂ 'ರೈಸ್ ಆಫ್ ಅಶೋಕ'ಗೆ ಪಟ್ಟ ಪಾಡನ್ನು ಜನರ ಮುಂದೆ ರಿವೀಲ್ ಮಾಡಿದ್ದಾರೆ. ಸಿನಿಮಾದ ಕಥೆ ಕೇಳಿದ ಕ್ಷಣದಿಂದ ಇಲ್ಲಿವರೆಗೂ ನಡೆದು ಬಂದ ಪ್ರತಿಯೊಂದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ವೇಳೆ 'ಅಯೋಗ್ಯ' ಸಿನಿಮಾಗಿಂತ 'ರೈಸ್ ಆಫ್ ಅಶೋಕ' ಯಾಕೆ ಮುಖ್ಯ ಅನ್ನೋದನ್ನು ಕೇಳಿದ್ದಾರೆ. ಅದರ ಝಲಕ್ ಇಲ್ಲಿದೆ.
"ಅಯೋಗ್ಯ ನನಗೆ ಲೆಕ್ಕನೇ ಅಲ್ಲ"
"ರೈಸ್ ಆಫ್ ಅಶೋಕ ಪ್ರೆಸ್‌ಮೀಟ್ ಜನರಿಗೆ ಒಂದು ಪ್ರೋಗ್ರಾಂ. ನೋಡುವವರಿಗೆ ಐದು ನಿಮಿಷದ ಕಾರ್ಯಕ್ರಮವಿದು. ಈ ಸಿನಿಮಾಗಾಗಿ ನಾವು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಎಲ್ಲಾ ಇದ್ದೂ ಸಿನಿಮಾಗೆ ಎಫರ್ಟ್ ಹಾಕುವುದು ದೊಡ್ಡ ವಿಷಯ ಅಲ್ಲ. ನನಗೆ ಅಯೋಗ್ಯ ನನಗೆ ಲೆಕ್ಕನೇ ಅಲ್ಲ. ನಾನು ಮನೆಯಲ್ಲಿ ಮಲಗಿದರೂ ಜನ ನೋಡುತ್ತಾರೆ ಅನ್ನೋದು ನನಗೆ ಗೊತ್ತಿದೆ. ಯಾಕಂದ್ರೆ ಅಯೋಗ್ಯ ಅನ್ನೋ ಬ್ರ್ಯಾಂಡ್ ಇದೆ. ಆದರೆ, ಈ ಸಿನಿಮಾ ಶುರುವಾದಾಗ ಹಾಕಿದ ಬಜೆಟ್ ಬೇರೆ, ಆದ ಬಜೆಟ್ ಬೇರೆ." ಎಂದು ಸತೀಶ್ ನೀನಾಸಂ ಹೇಳಿದ್ದಾರೆ.
ಕೆಜಿಎಫ್-ಕಾಂತಾರ ತರ ಆಗ್ಬೇಕು ಅನ್ನೋದ್ರಲ್ಲಿ ಏನು ತಪ್ಪು?
"ನೀವು ಕೇಳುತ್ತಿದ್ರಿ ಪ್ಯಾನ್ ಇಂಡಿಯಾ ಮಾಡುವ ಹುಚ್ಚಾ ಅಂತ. ಪ್ಯಾನ್ ಇಂಡಿಯಾ ಮಾಡುವುದಕ್ಕೆ ಈ ಸಿನಿಮಾ ಮಾಡಿಲ್ಲ. ಸಿನಿಮಾ ಚೆನ್ನಾಗಿ ಆಗಬೇಕು. ಈ ಸಿನಿಮಾವನ್ನು ಅಷ್ಟು ಚೆನ್ನಾಗಿ ತೋರಿಸಬೇಕು. ನಮ್ಮ ಸಿನಿಮಾವನ್ನೂ ಆ ಲೆವೆಲ್‌ಗೆ ಮಾಡಬೇಕು. ನಾನು ಒಂದು ದಿನ ಸ್ಟೇಜ್ ಮೇಲೆ ನಿಂತುಕೊಂಡು ಒಂದು 'ಕೆಜಿಎಫ್' ತರನೋ.. ಒಂದು 'ಕಾಂತಾರ' ತರಾನೋ ಆಗಬೇಕು ಅಂತ ಕನಸು ಕಾಣುವುದರಲ್ಲಿ ಯಾರದ್ದೂ ತಪ್ಪಲ್ಲ. ಹಾಗೆ ಹೊರಟಿದ್ದ ಜರ್ನಿ ಇದು. ಹಾಗಂತ ನಾವು ನೂರು ಕೋಟಿ ಹಾಕಿ ಸಿನಿಮಾ ಮಾಡಿದ್ದಲ್ಲ." ಎಂದು ಹೇಳಿದ್ದಾರೆ.

ಮರುದಿನವೇ ವಿನೋದ್ ಇಲ್ಲ
"ನನ್ನ ಬಳಿ ಬಂದು ಕಥೆ ಹೇಳಿದಾಗ ಬಹಳ ಇಂಟ್ರೆಸ್ಟಿಂಗ್ ಆಗಿದೆ. ಇದೊಂದು ಕಥೆ ಮಾಡೋಣ ಅಂತ ಅನಿಸಿತು. ಸಿನಿಮಾವನ್ನು ಶುರು ಮಾಡಿದ್ವಿ. ವರ್ಧನ್ ಅವರು ಶುರು ಮಾಡಿದಾಗ ಅವರ ಲೆಕ್ಕಾಚಾರ ಬೇರೆನೇ ಇತ್ತು. ಆಗ ನಾನು ಎಂಟ್ರಿನೇ ಆಗಿರಲಿಲ್ಲ. ವಿನೋದ್ ಅವರು ಶೂಟಿಂಗ್ ಮುಗಿಸುವವರೆಗೂ ಯಾಕೆ ಈ ಶಾಟ್ ತೆಗೆಯುತ್ತಿದ್ದೀರಾ? ಏನು ಮಾಡುತ್ತಿದ್ದೀರಾ? ಎಷ್ಟು ಖರ್ಚು ಮಾಡುತ್ತಿದ್ದೀರಾ? ಅಂತ ಒಂದು ಮಾತೂ ಕೇಳಿಲ್ಲ. ಸಿನಿಮಾ ತಂಡದಿಂದ ಒಂದು ರೂಪಾಯಿಯನ್ನು ತೆಗೆದುಕೊಂಡು ಹೋಗಿಲ್ಲ. ಹೀಗಿರುವಾಗ ಅವತ್ತು ರಾತ್ರಿ ಇನ್ವೆಸ್ಟರ್ ಬರುತ್ತಾರೆ. ಅದರ ಮರುದಿನವೇ ವಿನೋದ್ ಅವರು ಇಲ್ಲ. ವಿನೋದ್ ಅವರಿಗೆ ಹ್ಯಾಂಡ್ ಶೇಕ್ ಮಾಡಿದ್ದೀವಿ. ಹಗ್ ಮಾಡಿದ್ದೀವಿ. ನಾಳೆ ಶೂಟಿಂಗ್ ಹೋಗೋಣ ಅಂತ ಹೇಳಿದ್ದೀವಿ. ನಾನು, ವರ್ಧನ್ ಅವರು ಬಂದು ಖುಷಿಯಾಗಿ ನಾಳೆ ಶೂಟಿಂಗ್ ಅಂದುಕೊಂಡ್ವಿ. ಮರು ದಿನವೇ ಅವರು ಇಲ್ಲ." ಎನ್ನುತ್ತಾರೆ.
"ನನ್ನ ತೊಡೆ ನಡುಗುತ್ತಿತ್ತು"
"ಈ ಘಟನೆ ನಡೆದಾಗ ಒಬ್ಬನೇ ಆಫೀಸ್‌ನಲ್ಲಿ ಇದ್ದೆ. ಪೂರ್ಣ ಚಂದ್ರ ಅವರು ಓಡೋಡಿ ಬಂದರು. ಆ ವೇಳೆ ನನ್ನ ತೊಡೆ ನಡುಗುತ್ತಿತ್ತು. ಈ ಸಿನಿಮಾ ಕಂಟಿನ್ಯೂ ಮಾಡಬೇಕಾ? ಬೇಡ್ವಾ? ಗೊಂದಲವಿತ್ತು. ಎಲ್ಲರೂ ಹಿಂದೆ ಸರಿದಿದ್ದರು. ಆಗ ನಾನೊಬ್ಬನೇ ಹೆಗಲು ಕೊಟ್ಟಿದ್ದು. ವರ್ಧನ್ ಅವರು ಒಂದು ಹೆಗಲು ಇಳಿಸಿದ್ದರು. ಅವರು ಸುಸ್ತಾಗಿದ್ದರು. ಈ ಕನಸನ್ನು ಮುಂದೆ ತೆಗೆದುಕೊಂಡು ಹೋಗಬೇಕಿತ್ತು. ವಿನೋದ್ ಅವರು ಯಾವಾಗಲೂ ಹೇಳೋರು. ಸರ್ ನೂರು ಕೋಟಿ ತೆಗೆದುಕೊಳ್ಳುತ್ತೀರ ಸರ್ ಅನ್ನೋರು. ನೀವು ನೋಡಿ ಸರ್ ಈ ಸಿನಿಮಾ ಹೇಗಾಗುತ್ತೆ ಅಂತ ಅನ್ನೋರು. ಅವರು ಇಲ್ಲ ಅಂದಾಗ ನನಗೆ ಜೀರ್ಣಿಸಿಕೊಳ್ಳುವುದಕ್ಕೆ ಆಗಲಿಲ್ಲ. ಊರು ಬಿಟ್ಟು ಹೋಗಿದ್ದೆ." ಎಂದು ಸತೀಶ್ ನೀನಾಸಂ ಹೇಳಿದ್ದಾರೆ.


Click it and Unblock the Notifications











