ಕನ್ನಡ ಚಿತ್ರರಂಗಕ್ಕೆ ಶಿಷ್ಯ ದೀಪಕ್ ಸವಾಲು; ದಿಢೀರನೇ ವಿಡಿಯೋ ಮಾಡಿ ಹೇಳಿದ್ದೇನು?
ಕನ್ನಡ ಚಿತ್ರರಂಗ ಕಳೆದ ಒಂದೂವರೆ ಎರಡು ವರ್ಷದಿಂದ ಜೋರಾಗಿ ಸದ್ದು ಮಾಡುತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಇಂಡಿಯಾ ಸಿನಿಮಾಗಳನ್ನು ಕೊಟ್ಟಿದ್ದ ಸ್ಯಾಂಡಲ್‌ವುಡ್ ದಿಢೀರನೇ ಸೋಲಿನ ಸುಳಿಗೆ ಸಿಲುಕಿದೆ. ಅದೆಷ್ಟೇ ಒಳ್ಳೆಯ ಸಿನಿಮಾಗಳನ್ನು ಮಾಡಿದರೂ, ಕನ್ನಡದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವುದಕ್ಕೆ ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಕಳೆದ ಒಂದೂವರೆ ವರ್ಷದಿಂದಲೂ ಕನ್ನಡ ಚಿತ್ರರಂಗದ ನಿರ್ಮಾಪಕರು ಈ ಮಾತನ್ನು ಹೇಳುತ್ತಲೇ ಬರುತ್ತಿದ್ದಾರೆ. 'ಕಾಂತಾರ' ಬಳಿಕ ಕನ್ನಡ ಚಿತ್ರರಂಗಕ್ಕೆ ಒಂದೇ ಒಂದು ಹಿಟ್ ಸಿನಿಮಾ ಕೂಡ ಸಿಕ್ಕಿಲ್ಲ. ದರ್ಶನ್ ನಟಿಸಿದ 'ಕಾಟೇರ' ಸಿನಿಮಾವನ್ನು ಹೊರತು ಪಡಿಸಿದರೆ, ಬೇರೆ ನಟರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ಹೀಗಾಗಿ ಸ್ಯಾಂಡಲ್‌ವುಡ್ ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದೆ.

'ಕೆಜಿಎಫ್ 2', 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಕಂಡ ಬಳಿಕ ಇಂತಹದ್ದೊಂದು ಸ್ಥಿತಿ ನಿರ್ಮಾಣ ಆಗಿದೆ ಅಂತ ಕೆಲವರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇನ್ನು ಕೆಲವರು ಕನ್ನಡ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಶಿಷ್ಯ ಸಿನಿಮಾದ ಮೂಲಕ ಜನಪ್ರಿಯರಾಗಿದ್ದ ನಟ ದೀಪಕ್ ಕೂಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕನ್ನಡ ಚಿತ್ರರಂಗದವರೇ ಕನ್ನಡ ಸಿನಿಮಾ ನೋಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ 'ಹೆಜ್ಜಾರು' ಅನ್ನುವ ಸಿನಿಮಾ ತೆರೆಕಂಡಿದೆ. ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಆದರೆ, ಜನರು ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಹೋಗುತ್ತಿಲ್ಲ. ಹೀಗಾಗಿ ಕಂಟೆಂಡ್ ಬೇಸ್ಡ್ ಸಿನಿಮಾ ಬಂದರೂ, ಜನರು ಚಿತ್ರಮಂದಿರಕ್ಕೆ ಯಾಕೆ ಬರುತ್ತಿಲ್ಲ? ಅನ್ನುವ ಪ್ರಶ್ನೆ ಸಿನಿಮಾ ಮಂದಿಯನ್ನೇ ಕಾಡುತ್ತಿದೆ. ಈ ಸಂದರ್ಭದಲ್ಲಿ 'ಹೆಜ್ಜಾರು' ಸಿನಿಮಾ ನೋಡಿದ ದೀಪಕ್ ಕನ್ನಡ ಚಿತ್ರರಂಗಕ್ಕೆ ಒಂದು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಇವತ್ತು ಕನ್ನಡ ಸಿನಿಮಾ ಹೆಜ್ಜಾರು ಅನ್ನುವುದನ್ನು ನೋಡಿದೆ. ಮೊದಲನೆಯದಾಗಿ ಕನ್ನಡ ಕಲಾವಿದರು, ಕನ್ನಡ ಸಿನಿಮಾದವರು ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಶುರು ಮಾಡಬೇಕು. ಕನ್ನಡ ಸಿನಿಮಾ ಸೋತಿದೆ ಅಂತ ಸುಮ್ಮನೆ ಕೂತು ಅಳುವುದಲ್ಲ. ಇದಕ್ಕೆ ಉತ್ತರವೇನು? ಅನ್ನೋದನ್ನು ಮೊದಲು ಹುಡುಕಬೇಕು." ಎಂದು ನಟ ಶಿಷ್ಯ ದೀಪಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಕನ್ನಡ ಚಿತ್ರರಂಗಕ್ಕೆ ಚಿಕ್ಕದೊಂದು ಸವಾಲನ್ನು ಎಸೆದಿದ್ದಾರೆ. ಕನ್ನಡ ಚಿತ್ರರಂಗದವರು ಮೊದಲು ಕನ್ನಡ ಸಿನಿಮಾವನ್ನು ನೋಡುವುದಕ್ಕೆ ಶುರು ಮಾಡಬೇಕು ಎಂದಿದ್ದಾರೆ. "ಇದು ಒಂದು ಚಿಕ್ಕ ಚಾಲೆಂಜ್. ಕನ್ನಡ ಕಲಾವಿದರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಎಲ್ಲರೂ ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಶುರು ಮಾಡಿ. ಇದು ನನ್ನ ಕೋರಿಕೆ. ಪ್ಲೀಸ್, ಕನ್ನಡ ಸಿನಿಮಾವನ್ನು ಮೊದಲ ಕನ್ನಡದವರು ನೋಡುವುದನ್ನು ಕಲಿಯಬೇಕು." ಎಂದು ನಟ ದೀಪಕ್ ಹೇಳಿದ್ದಾರೆ.
ಆಗಸ್ಟ್ ಬಳಿಕ ಕನ್ನಡದ ಕೆಲವು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ದುನಿಯಾ ವಿಜಯ್ ನಟನೆಯ 'ಭೀಮ', ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ', ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್', 'ಕೆಡಿ', ಸೇರಿದಂತೆ ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಸಿನಿಮಾಗಳನ್ನು ಕನ್ನಡಿಗರು ಕೈ ಹಿಡಿದರೆ, ಮತ್ತೆ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಲಿದೆ.


Click it and Unblock the Notifications











