"ವಿಜಯ್‌ದೆ ಬೇರೆ.. ನನ್ನದೇ ಬೇರೆ.. ನಾನು ಎಲೆಕ್ಷನ್‌ಗೆ ನಿಂತುಕೊಳ್ಳುತ್ತೇನೆ" 'ಪ್ರಜಾಕೀಯ'ದ ಉಪೇಂದ್ರ
ತಮಿಳುನಾಡು ರಾಜಕೀಯ ಲೆಕ್ಕಾಚಾರವನ್ನು ವಿಜಯ್ ಬುಡಮೇಲು ಮಾಡಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಹರ ಸಾಹಸ ಮಾಡುತ್ತಿದ್ದರೂ, ಮೊದಲ ಪ್ರಯತ್ನದಲ್ಲಿಯೇ ಎರಡು ಪಕ್ಷಗಳನ್ನು ಹಿಂದಿಕ್ಕಿ ಮುಂದೆ ಬಂದಿದ್ದಾರೆ. ರಾಜಕೀಯದಲ್ಲಿ ವಿಜಯ್ ಮಾಡಿರುವ ಸಾಧನೆ ದೇಶಾದ್ಯಂತ ಗಮನ ಸೆಳೆದಿದೆ. ಇದೇ ವೇಳೆ ಕರ್ನಾಟಕದಲ್ಲಿಯೂ ಮತ್ತೆ ಉಪೇಂದ್ರ ಅವರ ಪ್ರಜಾಕೀಯ ಮುನ್ನೆಲೆ ಬಂದಿದೆ.
ವಿಜಯ್‌ಗಿಂತಲೂ ಮೊದಲು ಉಪೇಂದ್ರ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಆದರೆ, ರಾಜಕೀಯ ನಡೆ ಬೇರೆಯಾಗಿತ್ತು. ಪ್ರಜಾಕೀಯ ಅನ್ನೋ ತಮ್ಮ ವಿಭಿನ್ನ ಕಲ್ಪನೆಯೊಂದಿಗೆ ಸದ್ದು ಮಾಡಿದ್ದರು. ಆದರೆ, ಕಲ್ಪನೆ ಅದ್ಭುತವಾಗಿದ್ದರೂ, ಚುನಾವಣೆಯಲ್ಲಿ ಪ್ರಬಲ ಪಕ್ಷಗಳ ಸಮ್ಮುಖದಲ್ಲಿ ಬೆಳೆಯುವಷ್ಟು ಸದ್ದು ಮಾಡಲಿಲ್ಲ. ಆದ್ರೀಗ ತಮಿಳುನಾಡಿನಲ್ಲಿ ವಿಜಯ್ ಅಬ್ಬರ ನೋಡಿ ಮತ್ತೆ ಉಪೇಂದ್ರ ಪ್ರಜಾಕೀಯ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿಯೇ ಉಪೇಂದ್ರಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉಪ್ಪಿ ಮತ್ತೆ ಪ್ರಜಾಕೀಯದ ಜಪ ಮಾಡಿದ್ದು, ವಿಜಯ್ ಅವರ ದಾರಿಯೇ ಬೇರೆ.. ನನ್ನ ದಾರಿಯೇ ಬೇರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಚುನಾವಣೆಗೆ ನಿಲ್ಲುತ್ತೇನೆ, ಗ್ರೌಂಡ್ ಇಳಿಯುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಉಪ್ಪಿ ಮುಂದೆ ಕರ್ನಾಟಕದ ಸಿಎಂ ಆಗುತ್ತಾರಾ?
"ಪ್ರಜಾಕೀಯ ಅದರ ಪಾಡಿಗೆ ಅದು ಆಗುತ್ತಿದೆ. ಮಾಡುವವರು ಮಾಡುತ್ತಿದ್ದಾರೆ. ಯಾರೆಲ್ಲ ಹೊಸತನ, ಬದಲಾವಣೆ ಬಯಸುತ್ತಿದ್ದಾರೋ ಅವರೆಲ್ಲ ತುಂಬಾ ಕೆಲಸ ಮಾಡುತ್ತಿದ್ದಾರೆ. ನನಗೆ ಏನು ಅನಿಸಿದೆ ಅಂದರೆ, ಪ್ರಜಾಕೀಯ ಬರಬೇಕು ಅಂತ ತುಂಬಾ ಜನರಿಗೆ ಆಸೆಯಿದೆ. ಎಲ್ಲರಿಗೂ ಬೇಗ ಆಗಬೇಕು ಅಂತ ಅನಿಸಿದೆ. ಎಲ್ಲರಿಗೂ ಈ ವಿಚಾರಗಳು ಗೊತ್ತಿದೆ. ಆದರೆ, ಸಮಸ್ಯೆ ಎಲ್ಲಿ ಆಗುತ್ತಿದೆ ಅಂದರೆ, ನಾನು ನೋಡಿ ಸುಮ್ಮನಾಗುತ್ತಿದ್ದೇನೆ. ಅದೇ ಒಂದು ನಾಲ್ಕು ಮಂದಿಗೆ ಹೇಳಿ ಬಿಟ್ಟರೆ, ಖಂಡಿತವಾಗಿಯೂ ಅದ್ಭುತ ಬದಲಾವಣೆ ಆಗುತ್ತೆ" ಎನ್ನುತ್ತಾರೆ ಉಪೇಂದ್ರ.
ತಮಿಳುನಾಡಿನಲ್ಲಿ ವಿಜಯ್ ಗೆದ್ದಿದ್ದಾರೆಂದು ನಾವು ಇಲ್ಲಿ ಅದಕ್ಕಾಗಿ ಯೋಚನೆ ಮಾಡಬಾರದು ಎಂದಿದ್ದಾರೆ. "ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ತಾಕತ್ತು ಇದೆ. ಅಲ್ಲಿ ವಿಜಯ್ ಗೆದ್ದಿದ್ದಾರೆ. ಅದಕ್ಕಾಗಿ ನಾವು ಇಲ್ಲಿ ಪಕ್ಷ ಕಟ್ಟಬೇಕು ಅಂತಲ್ಲ ಯೋಚನೆ ಮಾಡಬಾರದು. ಎಷ್ಟೋ ಜನ ಕಲಾವಿದರು ರಾಜಕೀಯಕ್ಕೆ ಬಂದು ಸಕ್ಸಸ್ ಆಗಿದ್ದಾರೆ. ಅವರದ್ದೂ ಇಲ್ಲಿ ಕೊಡುಗೆಗಳು ಇವೆ. ಈಗಾಗಲೇ ಬಂದಿದ್ದಾರೆ. ಮುಂದೇನೂ ಬರಬಹುದು." ಅನ್ನೋದು ಉಪೇಂದ್ರ ವಾದ.

ಇದು ಜನಗಳ ಪಕ್ಷ ಅಂದ್ಮೇಲೆ ಪ್ರಜೆಗಳು ಮಾಡಬೇಕು. ಇಲ್ಲಿ ಪ್ರಜೆಗಳು ಸೇರಿಕೊಳ್ಳುತ್ತಾರೆ ಅಂತ ಅಂದುಕೊಂಡೆ. ಸೇರುವವರು ಪ್ರಜಾಕೀಯಕ್ಕೆ ಸೇರುತ್ತಿದ್ದಾರೆ, ಆದರೆ, ಹಳೆ ಮೈಂಡ್‌ಸೆಟ್ ಇರುವವರು ಉಪೇಂದ್ರ ಬರಬೇಕು ಅಂತಾರೆ. ಯಾರೋ ಬಂದು ಬದಲಾವಣೆ ಮಾಡಬೇಕು ಅನ್ನೋದು ಇಲ್ಲಿ ಅಭ್ಯಾಸ ಆಗಿದೆ. ಯುವಕರು ಈತರ ಬದಲಾವಣೆ ಬೇಕು ಅಂತ ಬಂದರೆ, ಎಲ್ಲರೂ ಶುರು ಮಾಡುತ್ತಾರೆ ಅನ್ನೋದು ಉಪ್ಪಿ ಹೇಳೋ ಮಾತು.
"ನಾನು ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಈಗ ಎಲ್ಲರೊಂದಿಗೂ ಕೂತು ಮಾತಾಡುತ್ತಿದ್ದೇನೆ. ನಾನೊಂದು ಆಪ್ ಮಾಡುತ್ತಿದ್ದೇನೆ. ನಾಳೆ ನಾನು ಗ್ರೌಂಡ್‌ಗೆ ಇಳಿಬೇಕಾ ಅದನ್ನೂ ಮಾಡುತ್ತೇನೆ. ಅದಲ್ಲ ಪ್ರಶ್ನೆ. ಯಾಕಂದ್ರೆ ನಿಮಗೂ ಒಂದೂ ಜವಾಬ್ದಾರಿಯಿದೆ. ನೀವು ಒಂದಿಷ್ಟು ಜನರಿಗೆ ಹೇಳಬೇಕು. ಬರೀ ವಿಚಾರ ಇರುವುದರಿಂದ ಹೇಳುತ್ತಿದ್ದೇನೆ. ಬರೀ ಉಪೇಂದ್ರ ಹೇಳಿದರೆ ಮಾತ್ರ ಆಗುವುದಿಲ್ಲ." ಎನ್ನುತ್ತಾರೆ ರಿಯಲ್ ಸ್ಟಾರ್.
ವಿಜಯ್ ಅವರಂತ ಅಲ್ಲ, ನಾನು ಬೇರೆಯದ್ದೇ ದಾರಿಯಲ್ಲಿದ್ದೇನೆ ಅಂತ ಉಪ್ಪಿ ಹೇಳಿದ್ದಾರೆ. "ಉಪೇಂದ್ರ ಅಂದರೆ ಪ್ರಜಾಕೀಯ ಅಂದುಕೊಂಡಿದ್ದೀರ. ನನಗೂ ಒಂದು ವೈಯಕ್ತಿಕ ಜೀವನ ಇದೆ. ನನಗೂ ಫ್ರೆಂಡ್ಸ್ ಇದ್ದಾರೆ. ನಾನು ಯಾರೊಂದಿಗೋ ಫೋಟೋ ತೆಗೆಸಿಕೊಳ್ಳುತ್ತೇನೆ. ಯಾರದ್ದೋ ಮನೆಗೆ ಊಟಕ್ಕೆ ಹೋಗುತ್ತೇನೆ. ಅದಕ್ಕೂ ಇದಕ್ಕೂ ಏನು ಸಂಬಂಧ? ಅದು ಬೇರೆ, ಇದು ಬೇರೆ. ನಾನು ಬೇರೆ ದಾರಿಯಲ್ಲಿ ಇದ್ದೀನಿ. ಅಂತಹ ಒಬ್ಬ ನಾಯಕ ಬೇಕು ಅಂದರೆ, ನಿಮಗೆ ಖಂಡಿತಾ ಸಿಗುತ್ತಾನೆ." ಎಂದು ವಿಜಯ್ ಅವರ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
ಇದೇ ವೇಳೆ ಜನರು ಬಯಸಿದರೆ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ. "ನಾನು ಬರುತ್ತಿದ್ದೀನಿ. ನಾನು ಇದ್ದೀನಿ ಇಲ್ಲೇ. ನಾನು ಸಕ್ರಿಯವಾಗಿ ಇರುತ್ತೇನೆ. ನಾನು ನೀವು ಎಲೆಕ್ಷನ್‌ಗೆ ನಿಂತುಕೊಳ್ಳಬೇಕು ಅಂದರೆ, ನಿಂತುಕೊಳ್ಳುತ್ತೇನೆ. ನನಗೆ ಅನಿಸಬೇಕು ಎಲ್ಲರಿಗೂ ಈ ವಿಚಾರದ ಬಗ್ಗೆ ಆಸಕ್ತಿಯಿದೆ ಅಂತ. ಆಗ ಖಂಡಿತವಾಗಿಯೂ ನಿಂತುಕೊಳ್ಳುತ್ತೇನೆ. ನಾನು ನಿಮಗೋಸ್ಕರ ಕೆಲಸ ಮಾಡುವುದಕ್ಕೆ ಬರುತ್ತಿದೇನೆ. ನೀವು ಉತ್ಸಾಹ ಕೊಡಬೇಕು. ನನಗೆ ಈಗ 60 ವರ್ಷ. ಎಲ್ಲರೂ ಪ್ರೋತ್ಸಾಹ ಕೊಡಬೇಕು" ಎಂದು ಉಪೇಂದ್ರ ಹೇಳಿದ್ದಾರೆ.


Click it and Unblock the Notifications
