"ಒಂದು ದುರ್ಘಟನೆ ನಡೀತು ಅಂದರೆ, ಅದರಿಂದ ಮಾತ್ರ ಚಿತ್ರರಂಗನಾ?"; ವಸಿಷ್ಠ ಸಿಂಹ ಮಾತಿನ ಅರ್ಥವೇನು?
ಸ್ಯಾಂಡಲ್‌ವುಡ್ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಅನ್ನೋ ಅಳುಕು ಒಂದು ಕಡೆ. ಅದೇ ಇನ್ನೊಂದು ಕಡೆ ವಿವಾದ ಮೇಲೆ ವಿವಾದ. ಇದೇ ಮೂರು ನಾಲ್ಕು ವರ್ಷಗಳ ಹಿಂದೆ ಬೇರೆ ಚಿತ್ರರಂಗದವರು ಕನ್ನಡ ಚಿತ್ರರಂಗವನ್ನು ತಲೆ ಎತ್ತಿ ನೋಡುತ್ತಿದ್ದರು. ಆದ್ರೀಗ ಇತ್ತ ನೋಡುವುದೂ ಇಲ್ಲ. ಅದಕ್ಕೆ ಕಾರಣ ಯಾರು? ಕನ್ನಡ ಸಿನಿಮಾ ಮಂದಿನೇ ಹೊರತು, ಬೇರೆ ಯಾರು ಹೊಣೆ.
ಬಿಗ್ ಬಜೆಟ್‌ನಲ್ಲಿ 'ಕೆಜಿಎಫ್' ಮಾಡಿದಾಗ ಕನ್ನಡಿಗರು ಮುಗಿಬಿದ್ದು ಸಿನಿಮಾ ನೋಡಿದರು. ಹಾಗೇ ಸ್ಮಾಲ್ ಬಜೆಟ್‌ನಲ್ಲಿ 'ಕಾಂತಾರ' ಮಾಡಿದಾಗಲೂ ಥಿಯೇಟರ್ ಕಿಕ್ಕಿರಿದು ತುಂಬಿ ತುಳುಕುತ್ತಿತ್ತು. ಇವೆರಡು ಬಿಡಿ, ಕೇವಲ ಕನ್ನಡಿಗರಿಗಾಗಿಯೇ 'ಕಾಟೇರ' ಸಿನಿಮಾ ಮಾಡಿದಾಗಲೂ ಚಿತ್ರಮಂದಿರಗಳು ತುಂಬಿ ತುಳುಕಿದ್ದವು. ಇದರ ಅರ್ಥ ಸಿನಿಮಾ ಚೆನ್ನಾಗಿ ಮಾಡಬೇಕಷ್ಟೇ.

ಒಂದು ಸಿನಿಮಾ ಬರುತ್ತಿದೆ ಅನ್ನೋದು ಪ್ರಚಾರದ ಮೂಲಕ ಜನರ ಬಳಿಗೆ ತೆಗೆದುಕೊಂಡು ಹೋಗಬಹುದು. ಆದರೆ, ಜನರನ್ನು ಥಿಯೇಟರ್‌ಗೆ ಎಳೆದು ತರುವುದಕ್ಕೆ ಸಾಧ್ಯವಿಲ್ಲ. ಸಿನಿಮಾದಲ್ಲಿ ಕಂಟೆಂಟ್ ಇರಬೇಕು. ಅದೇ ಪ್ರಚಾರ, ವಿಮರ್ಶೆ ಎಲ್ಲವನ್ನೂ ಮಾಡುತ್ತಾ ಮುಂದಕ್ಕೆ ಹೋಗುತ್ತೆ. ಅಷ್ಟಕ್ಕೂ ಈ ಮಾತು ಈಗ್ಯಾಕೆ ಅಂದರೆ, ಕನ್ನಡದ ನಟ ವಸಿಷ್ಠ ಸಿಂಹ ಪರಭಾಷೆಗೆ ಸಿಕ್ಕಂತಹ ಪ್ರೋತ್ಸಾಹ ಕನ್ನಡ ಸಿನಿಮಾಗೆ ಸಿಗುತ್ತಿಲ್ಲ ಅನ್ನೋದು ಲವ್‌ಲೀ ವೇದಿಕೆ ಮೇಲೆ ಹೇಳಿ ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ. ಅದರ ಝಲಕ್ ಇಲ್ಲಿದೆ.
"ಇಂಡಸ್ಟ್ರಿ ಕಟ್ಟುವ ಕೆಲಸ ನಾಲ್ಕು ಜನ ಹೀರೊಯಿಂದ ಆಗಲ್ಲ"
"ಚಿತ್ರರಂಗ ಡ್ರೈ ಆಗಿದ್ದಾಗ ನಮ್ಮ ಸಿನಿಮಾ ಲವ್‌ಲೀ ಆಗಲಿ, ಕೋಟಿ ಆಗಲಿ, ಶೆಫ್ ಚಿದಂಬರ ಆಗಲಿ, ಶಿವಮ್ಮ ಆಗಲಿ ಬಂತು. ಇಂತಹ ಸಂದರ್ಭಗಳಲ್ಲಿ 70 ಥಿಯೇಟರ್‌ಗಳು ಓಪನ್ ಆದವು. ಇದರ ಬಗ್ಗೆ ಯಾರಾ ಮಾತಾಡಿಲ್ಲ. ಇದರ ಮಧ್ಯೆ ಎಲ್ಲಾ ಘಟನೆಗಳು ನಮಗೆ ಗೊತ್ತೇ ಇದೆ. ಹಾಸನದಿಂದ ಅಂತ ನಮ್ಮ ಕೃಷ್ಣ ಶುರು ಮಾಡಿದರು. ಇಲ್ಲಿ ಏನು ಹೇಳಬೇಕು ಅನ್ನೋದು ಗೊತ್ತಿಲ್ಲ. ಇಲ್ಲಿ ಇಂಡಸ್ಟ್ರಿ ಕಟ್ಟುವ ಕೆಲಸ ನಾಲ್ಕು ಜನ ಹೀರೊಯಿಂದ ಆಗಲ್ಲ. ನಾಲ್ಕು ಜನ ಡೈರೆಕ್ಟರ್‌ಗಳಿಂದ ಆಗಲ್ಲ. ಎಲ್ಲರೂ ಒಮ್ಮತದಿಂದ ಕೆಲಸ ಮಾಡಿದಾಗ ಮಾತ್ರ ಪುನಶ್ಚೇತನ ಸಿಗುತ್ತೆ ಅನ್ನೋ ಗಟ್ಟಿ ಮನಸ್ಸು ನನ್ನದು." ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ಲವ್‌ಲೀ ಕಲೆಕ್ಷನ್ ಲೆಕ್ಕಹಾಕಿ
"ನಮ್ಮ ತೆಲುಗು ಸಿನಿಮಾ ಬಂದಾಗ ಮುಗಿಬಿದ್ದು ನೋಡಿದ ಹಾಗೆ ಕಂಡಿತಾ ನಮ್ಮ ಸಿನಿಮಾಗೆ ಬಂದಿಲ್ಲ. ಒಪ್ಪುವ ಮಾತೇ. ಆದರೆ, ನಮ್ಮ ಸಿನಿಮಾ ಬಗ್ಗೆ ಸುಳ್ಳಂತೂ ಹೇಳುವುದಕ್ಕೆ ಆಗಲ್ಲ. ಯಾಕಂದ್ರೆ, ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಅದಕ್ಕೆ ಸರಾಸರಿ 150 ರೂಪಾಯಿ ಇಟ್ಟುಕೊಳ್ಳಿ ಕಲೆಕ್ಷನ್ ಗೊತ್ತಾಗಿಬಿಡುತ್ತೆ. ಥಿಯೇಟರ್‌ನವರು ದಾಕ್ಷಿಣ್ಯಕ್ಕೆ ಇಟ್ಟುಕೊಳ್ಳಲ್ಲ." ಎಂದು ಸಿನಿಮಾ ಯಶಸ್ಸಿನ ಬಗ್ಗೆ ಮಾತಾಡಿದ್ದಾರೆ.
"ಕಲಾವಿದರ ಪರ್ಸನಲ್ ಲೈಫ್ ಮುಖ್ಯ"
"ತೆಲುಗು ಸಿನಿಮಾಗಳಿಗೆ ಬೆಳಗ್ಗೆ ಐದು ಗಂಟೆಗೆ ಹೋಗಿ ವಿಮರ್ಶೆ ಬರೀತಾರೆ. ಅವರು ಕನ್ನಡ ಸಿನಿಮಾಗಳಿಗೆ ಯಾಕೆ ಮಾಡಲ್ಲ ಅಂದ್ರೆ, ಅವರು ಯಾರೂ ಇಲ್ಲಿ ಸಿಗಲ್ಲ. ಅಲ್ಲಿ ಗಾಸಿಪ್ ಮಾಡುವುದಕ್ಕೆ ಅವಕಾಶವಿಲ್ಲ. ಯಾರೂ ಒಂದು ಇಂಟರ್‌ವ್ಯೂ ಕೂಡ ಕೊಡಲ್ಲ. ಅವರು ಕಲಾವಿದರಾಗಿಯೇ ಕಾಣಿಸುತ್ತಾರೆ. ಅವರ ಸಿನಿಮಾ ನೋಡುವುದೇ ಎಂಟರ್‌ಟೈನ್ಮೆಂಟ್‌ಗಾಗಿ. ನಮ್ಮಲ್ಲಿ ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನು ಜನ ಎಂಟರ್‌ಟೈನ್ ಮಾಡುತ್ತಿದ್ದಾರೆ." ಎಂದು ನಟ ವಸಿಷ್ಠ ಸಿಂಹ ಮಾತಾಡಿದ್ದಾರೆ.
"ಎಲ್ಲರಿಗೂ ಅವಕಾಶಗಳು ಎಲ್ಲಾ ಕಡೆನೂ ಇದೆ"
"ಇರಲಿ, ಇದು ಶಾಶ್ವತವಾದ ಫೇಸ್ ಏನೂ ಅಲ್ಲ. ಇದೂ ಕೂಡ ಮುಗಿದು ಹೋಗುತ್ತದೆ. ಇದೇ ಮುಂದುವರೆಯುತ್ತೆ ಅಂದರೆ, ಎಲ್ಲರಿಗೂ ಅವಕಾಶಗಳು ಎಲ್ಲಾ ಕಡೆನೂ ಇದೆ. ಒಂದು ದುರ್ಘಟನೆ ನಡೀತು ಅಂದರೆ, ಅದರಿಂದ ಮಾತ್ರ ಚಿತ್ರರಂಗನಾ? ಅಥವಾ ಅಷ್ಟು ಮಾತ್ರ ಚಿತ್ರರಂಗನಾ?ಸಾವಿರಾರು ಕುಟುಂಬವಿದೆ. ಅವರಿಗೆ ಬದುಕು ಈ ಚಿತ್ರರಂಗ ಚೆನ್ನಾಗಿದ್ದರೆ ಮಾತ್ರ" ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.


Click it and Unblock the Notifications











