'ರಂಗನಾಯಕ' ಚಿತ್ರದಲ್ಲಿ ವಾಟಾಳ್ ನಾಗರಾಜ್; ಈ ಪಾತ್ರ ಮಾಡಿದ ವ್ಯಕ್ತಿ ಈಗ ಬದುಕಿಲ್ಲ.. ಏನಾಯ್ತು?
'ಮಠ', 'ಎದ್ದೇಳು ಮಂಜುನಾಥ'ದಂತಹ ಸಿನಿಮಾ ಕೊಟ್ಟ ಜೋಡಿ ಮತ್ತೆ ಒಂದಾಗಿದೆ. 15 ವರ್ಷಗಳ ಬಳಿಕ ನವರಸ ನಾಯಕ ಜಗ್ಗೇಶ್ ಹಾಗೂ ಗುರುಪ್ರಸಾದ್ ಒಟ್ಟಿಗೆ ಒಂದು ಸಿನಿಮಾ ಮಾಡಿದ್ದಾರೆ. ಅದುವೇ 'ರಂಗನಾಯಕ'. ಈ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸುತ್ತಲೇ ಸಮಾಜಕ್ಕೆ ಸಂದೇಶ ಕೊಡುವುದಕ್ಕೆ ಹೊರಟಿದ್ದಾರೆ.
ನಿರೀಕ್ಷೆ ಮಾಡಿದಂತೆ ಈ ಸಿನಿಮಾದ ಪ್ರಚಾರ ಅದ್ಭುತವಾಗಿ ಆರಂಭ ಆಗಿದೆ. 'ರಂಗನಾಯಕ' ಸಿನಿಮಾದ ಕನ್ನಡ ಹಾಡು ಕಿಕ್ ಕೊಡುವುದಕ್ಕೆ ಶುರು ಮಾಡಿದೆ. ಜೊತೆಗೆ ವಿವಾದವನ್ನು ಹುಟ್ಟುಹಾಕಿದೆ. ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ಹೆಸರು ತೆಗೆಯಲಾಗಿದೆ. ಈ ಬಗ್ಗೆ ಗುರುಪ್ರಸಾದ್ ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದೂ ಆಗಿದೆ. ಈ ವಿವಾದಗಳನ್ನೆಲ್ಲ ಪಕ್ಕಕ್ಕಿಟ್ಟು ನೋಡುವುದಾರೆ, ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಹೊರಬಿದ್ದಿದೆ.

ಕೆಲವು ದಿನಗಳ ಹಿಂದೆ ಅಪ್ಪಟ ಕನ್ನಡದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಕನ್ನಡದ ಮಣ್ಣಿನ ಸಾಧಕರು, ಕನ್ನಡ ಹೋರಾಟಗಾರರು, ಕನ್ನಡದ ನಟರನ್ನು ನೆನಪಿಸಿಕೊಳ್ಳಲಾಗಿದೆ. ಹಾಗೇ ಕನ್ನಡ ಹೋರಾಟಗಾರ ಅಂದ ಕೂಡಲೇ ನೆನಪಾಗುವ ವಾಟಾಳ್ ನಾಗರಾಜ್ ಅವರನ್ನು ಪ್ರತಿನಿಧಿಸಲಾಗಿದೆ. ದುರಂತ ಅಂದರೆ, ಈ ಹಾಡಿನಲ್ಲಿ ವಾಟಾಳ್ ನಾಗರಾಜ್ ಪಾತ್ರದಲ್ಲಿ ನಟಿಸಿದ ವ್ಯಕ್ತಿ ಈಗ ಬದುಕಿಲ್ಲ. ಅಷ್ಟಕ್ಕೂ ಅಂತಹದ್ದೇನಾಯ್ತು?
ವಾಟಾಳ್ ನಾಗರಾಜ್ ಪಾತ್ರಧಾರಿಯ ಬಗ್ಗೆ ಹೇಳುವುದಕ್ಕೂ ಮುನ್ನ ಈ ಹಾಡಿಗೆ ವಾಟಾಳ್ ಯಾಕೆ ಬಂದ್ರು? ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ. ಕನ್ನಡದ ಹಾಡಿನಲ್ಲಿ ವಾಟಾಳ್ ನಾಗರಾಜ್ ಬಗ್ಗೆ ಹೇಳಲೇ ಬೇಕು ಅಂತ ನಿರ್ದೇಶಕ ಗುರುಪ್ರಸಾದ್ ನಿರ್ಧರಿಸಿದ್ದರು. ಹಾಗಾಗಿ ವಾಟಾಳ್ ನಾಗರಾಜ್ ಅವರ ಬಗ್ಗೆ ಹಾಡಿನಲ್ಲಿ ಕೆಲವು ಸಾಲುಗಳನ್ನು ಬರೆದಿದ್ದರು. ಹೀಗಾಗಿ ಈ ಹಾಡಿನಲ್ಲಿ ನಟಿಸುವಂತೆ ವಾಟಾಳ್ ಅವರಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಆದರೆ, ಹಲವು ಕಾರಣಗಳಿಗೆ ಅವರು ಒಪ್ಪಿರಲ್ಲ. ಈ ಬಗ್ಗೆ ಸ್ಪೀಡ್ ಪ್ಲಸ್ ಜೊತೆ ಮಾತಾಡುವಾಗ ರಿವೀಲ್ ಮಾಡಿದ್ದಾರೆ.
"ಕನ್ನಡದ ಎಲ್ಲಾ ಹೋರಾಟಗಾರರ ಬಗ್ಗೆನೂ ನನಗೆ ಖುಷಿಯಿದೆ. ನಾನು ಅವರನ್ನು ಬೆಂಬಲಿಸಿಯೇ ಬೆಂಬಲಿಸುತ್ತೇನೆ. ವಾಟಾಳ್ ನಾಗರಾಜ್ ಅವರನ್ನು ಕರೆದೆ. ಕನ್ನಡದ ಹಾಡು. ನೀವೇ ಬಂದು ಮಾಡಿ ಅಂದೆ. ಬಂದ್ ಬಂದ್ ಬಂದ್ ಅಂತ ಮೂರು ಬಾರಿ ಹೇಳಿ. ಭಾರೀ ಮಜಾ ಬರುತ್ತೆ ಅಂತ ಅಂದೆ. ಆ ಮೇಲೆ ಅದೇ ತರಹದ ಒಬ್ಬ ತದ್ರೂಪಿಯನ್ನು ಹುಡುಕಿ ಬೇರೆಯವರ ಹತ್ತಿರ ಮಾಡಿಸಿಕೊಂಡೆ." ಎನ್ನುತ್ತಾರೆ ನಿರ್ದೇಶಕ ಗುರುಪ್ರಸಾದ್.

ಇದೇ ಸಂದರ್ಶನದಲ್ಲಿ ವಾಟಾಳ್ ನಾಗರಾಜ್ ಪಾತ್ರ ಮಾಡಿದ್ದ ವ್ಯಕ್ತಿ ಈಗ ಬದುಕಿಲ್ಲ ಅನ್ನೋ ನೋವಿನ ವಿಷಯವನ್ನು ಹಂಚಿಕೊಂಡಿದ್ದಾರೆ. "ಆ ವ್ಯಕ್ತಿ ಸತ್ತೂ ಹೋದ. ಈ ಹಾಡಿನಲ್ಲಿ ಪಾತ್ರ ಮಾಡಿದ್ದಾರಲ್ಲ ಅವರು ಇಲ್ಲ. ಕೊರೊನಾ ಸಮಯದಲ್ಲಿ ಕಳೆದುಕೊಂಡೆವು." ಎಂದು ಗುರುಪ್ರಸಾದ್ ಹೇಳಿದ್ದಾರೆ.
ಅಂದ್ಹಾಗೆ, ವಾಟಾಳ್ ನಾಗರಾಜ್ ಅವರ ಬಗ್ಗೆ ಗುರುಪ್ರಸಾದ್‌ಗೆ ಗೌರವ ತುಸು ಹೆಚ್ಚು. ಚಿಕ್ಕಂದಿನಿಂದಲೂ ಅವರನ್ನೂ ನೋಡಿ ಬೆಳೆದಿದ್ದು, ಈ ಸಿನಿಮಾದನ್ನು ಗೌರವಪೂರ್ವಕವಾಗಿ ಅವರ ಹೆಸರನ್ನು ಬಳಸಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನವರಸ ನಾಯಕ ಜಗ್ಗೇಶ್ ಅವರ ಕೈಯಲ್ಲಿ ಮುಗಿಸಿದ್ದಾಗಿ ಹೇಳಿಕೊಂಡಿದ್ದಾರೆ. ಸದ್ಯ ತಂಗಾಳಿ ಹಾಡನ್ನು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಆದರೆ, ಗ್ಯಾಪ್‌ನಲ್ಲಿ ಚಿಕ್ಕದೊಂದು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.


Click it and Unblock the Notifications











