ಕೊರಗಜ್ಜನಿಗೂ ಕನ್ನಡದ ಈ ಟ್ವಿನ್ಸ್ ನಟಿಯರಿಗೂ ಏನು ನಂಟು? ಅಜ್ಜನ ಬಗ್ಗೆ ಯಾಕಿಷ್ಟು ನಂಬಿಕೆ?
'ಕಾಂತಾರ' ಸಿನಿಮಾ ಬಂದ್ಮೇಲೆ ದಕ್ಷಿಣ ಕನ್ನಡದ ದೈವಗಳ ಬಗ್ಗೆ ಬೇರೆ ಭಾಗದ ಜನರಿಗೆ ಗೊತ್ತಾಗುವುದಕ್ಕೆ ಶುರುವಾಗಿದೆ. ಅದರಲ್ಲೂ ಕೊರಗಜ್ಜನ ಮಹಿಮೆಯನ್ನು ಅರಿತು ಅವರ ಆದಿ ಸ್ಥಳಗಳನ್ನು ಹುಡುಕಿಕೊಂಡು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರುತ್ತಿದ್ದಾರೆ. ಕೊರಗಜ್ಜನ ಬಳಿ ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಕೊರಗಜ್ಜನ ಮಹಿಮೆಯನ್ನು ತಿಳಿಸುವ ಸಲುವಾಗಿ ಒಂದು ಸಿನಿಮಾ ಕೂಡ ಸಿದ್ಧವಾಗುತ್ತಿದೆ. ಇನ್ನೇನು ಆ ಸಿನಿಮಾ ಕೂಡ ಬಿಡುಗಡೆಯಾಗಬೇಕಿದೆ. ದಕ್ಷಿಣ ಕನ್ನಡದಲ್ಲಿ ಕೊರಗಜ್ಜನದ್ದು ಏಳು ಆದಿ ಸ್ಥಳಗಳು ಇವೆ. ಅದರಲ್ಲಿ ಒಂದು ಕುತ್ತಾರು ಕೂಡ ಹೌದು. ಈ ಸ್ಥಳವನ್ನು ನೋಡಿಕೊಳ್ಳುತ್ತಿರುವುದು ಕನ್ನಡದ ಚಿತ್ರರಂಗದ ಟ್ವಿನ್ಸ್ ನಟಿಯರಾದ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿಯ ಕುಟುಂಬ.

ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಚಿರಪರಿಚಿತ. ಆದರೆ, ಕೊತ್ತಾರುವಿನಲ್ಲಿರುವ ತುಳುನಾಡಿನ ದೈವ ಕೊರಗಜ್ಜನ ಆದಿಸ್ಥಳ ಇವರ ಕುಟುಂಬವೇ ನೋಡಿಕೊಳ್ಳುತ್ತಿರುವ ವಿಷಯ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಕೊರಗಜ್ಜನ ಮಹಿಮೆ ಬಗ್ಗೆ ಈ ಇಬ್ಬರು ನಟಿಯರು ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಕೊರಗಜ್ಜನ ಹಿನ್ನೆಲೆ ಏನು?
ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಇಬ್ಬರೂ ಯೂಟ್ಯೂಬ್ ಸಂದರ್ಶನದಲ್ಲಿ ಕೊರಗಜ್ಜನ ಮಹಿಮೆಯ ಬಗ್ಗೆ ಮಾತಾಡಿದ್ದಾರೆ. ತಮಗಾದ ಅನುಭವವನ್ನು ಹೇಳಿದ್ದಾರೆ. ಹಾಗೇ ಕೊರಗಜ್ಜನ ಹಿನ್ನೆಲೆಯನ್ನು ತಿಳಿಸಿಕೊಟ್ಟಿದ್ದಾರೆ. "ಕೊರಗಜ್ಜನ ಬಗ್ಗೆ ಗೊತ್ತಿರುವವರಿಗೆ ಗೊತ್ತು. ಅವರ ಪವರ್ ಏನು ಅಂತ. ಕೊರಗಜ್ಜ ಒಬ್ಬ ಮಾನವ ಸ್ವರೂಪ. ಅವರಲ್ಲಿ ಶಕ್ತಿಯಿದೆ ಅಂತ ಗೊತ್ತಾಗಿ, ಅವರನ್ನು ಪೂಜಿಸುವುದಕ್ಕೆ ಜನರು ಶುರು ಮಾಡಿದರು. ಪಂಚಂದಾಯ ಮತ್ತು ಬಂಟ ದೈವಗಳೇ ಕೊರಗಜ್ಜನಿಗೆ ಶಕ್ತಿ ಕೊಟ್ಟಿರುವುದು. ಅಂದರೆ, ಪಂಜಂದಾಯ ಬಂಟ ದೈವಗೆ ಏನೋ ಒಂದು ಕೆಲಸ ಮಾಡುವುದಕ್ಕೆ ಆಗಿರುವುದಿಲ್ಲ. ಆಗ ಕೊರಗಜ್ಜ ತಾನು ಮಾಡಿಕೊಡುತ್ತೇನೆ ಎಂದು ಮುಂದೆ ಬರುತ್ತಾರೆ. ಆಗ ನನಗೆ ಏನು ಕೊಡುತ್ತೀರ ಎಂದು ಕೇಳುತ್ತಾರೆ. ಆ ವೇಳೆ ಏಳು ಆದಿ ಸ್ಥಳಗಳನ್ನು ಕೊಡುತ್ತೇನೆ ಎಂದು ಹೇಳುತ್ತಾರೆ. ಆ ಏಳು ಆದಿ ಸ್ಥಳಗಳಲ್ಲಿ ಕೊತ್ತಾರು ಕೂಡ ಒಂದು." ಎಂದು ನಟಿಯರು ಮಾಹಿತಿ ಹಂಚಿಕೊಂಡಿದ್ದಾರೆ.

ಭಕ್ತಾದಿಗಳು ದೀಪ ಹಚ್ಚುವ ಹಾಗಿಲ್ಲ ಯಾಕೆ?
"ಕೊರಗಜ್ಜನ ಸನ್ನಿಧಿಯಲ್ಲಿ ಭಕ್ತಾಧಿಗಳು ಬಂದು ದೀಪ ಹಚ್ಚುವ ಹಾಗಿಲ್ಲ. 6.30 ನಂತರ ಹೆಣ್ಣು ಮಕ್ಕಳು ಕೊರಗಜ್ಜನ ಸನ್ನಿಧಿಗೆ ಹೋಗಬಾರದು. ಒಂದು ದೀಪದ ಬೆಳಕು ಬಿಟ್ಟರೆ, ಬೇರೆ ಲೈಟ್‌ಗಳಂತೂ ಕಾಣಲೇ ಬಾರದು. ಕೋಲಾಗೂ ಅಷ್ಟೇ ಮಹಿಳೆಯರಿಗೆ ಪ್ರವೇಶವಿಲ್ಲ." ಎಂದು ಹೇಳುತ್ತಾರೆ.
ಆ ಕೋಣೆ ತುಂಬಾ ಪವರ್‌ಫುಲ್
"ನಮ್ಮದು ಮಾಗಂದಡಿ ಗುತ್ತು ಅಂತ ಏನು ಹೇಳಿದೆ. ತುಂಬಾ ಜನ ಬಂದಿದ್ದಾರೆ. ಮಾಲಾಶ್ರೀ ಮೇಡಂ, ರಕ್ಷಿತಾ, ಶಿವರಾಜ್‌ಕುಮಾರ್ ಸರ್ ಎಲ್ಲರೂ ಮನೆಗೆ ಬಂದಿದ್ದಾರೆ. ಆ ಮನೆಯಲ್ಲಿ ಒಂದು ರೂಮ್ ಇದೆ. ಆ ರೂಮ್‌ನಲ್ಲಿ ಪಂಚಂದಾಯ, ಬಂಟ, ಗುಳಿಗ ಮತ್ತೆ ಅಜ್ಜ ಅವರ ಎಲ್ಲ ಒಡವೆಗಳು, ಮತ್ತೆ ಅಜ್ಜನ ಬೆತ್ತ ಹಾಗೂ ಚಿನ್ನ, ಬೆಳ್ಳಿಯ ಒಡವೆಗಳು ಆ ರೂಮ್‌ನಲ್ಲಿ ಇದೆ. ಡಿಸೆಂಬರ್‌ನಲ್ಲಿ ಬಂಡಾರ ಅಂತ ಆಗುತ್ತೆ. ಆಗ ಈ ಒಡವೆಗಳನ್ನು ತೆಗೆದುಕೊಂಡು ಹೋಗಿ ಆದಿ ಸ್ಥಳಗಳಲ್ಲಿ ಪೂಜೆಯನ್ನು ಮಾಡುತ್ತಾರೆ. ವರ್ಷಕ್ಕೊಮ್ಮೆ ಕೋಲಾ ಮಾಡುತ್ತೇವೆ. ಆಗ ಮಾತ್ರ ಆ ರೂಮಿನ ಬಾಗಿಲು ತೆಗೆಯುತ್ತೇವೆ. ಅಲ್ಲಿವರೆಗೂ ಕ್ಲೋಸ್ ಇರುತ್ತೆ. ತುಂಬಾನೇ ಪವರ್‌ಫುಲ್ ಅದು." ಎನ್ನುತ್ತಾರೆ.

ಅಜ್ಜ-ಅಜ್ಜಿ ರೂಪದಲ್ಲಿ ಕಾಣಿಸುತ್ತಾರೆ
"ಎಷ್ಟೋ ಸಾರಿ ಅಜ್ಜ ಅವರ ರೂಪದಲ್ಲಿ ಬಂದಿಲ್ಲ ಅಂತಾದರೂ, ಅಜ್ಜಿ ಅಜ್ಜನ ರೂಪದಲ್ಲಿ ಕೋಲು ಹಿಡಿದುಕೊಂಡು ಬಂದೇ ಬರುತ್ತಾರೆ. ಎಷ್ಟು ಜನರಿಗೆ ಅದು ಅನುಭವಕ್ಕೆ ಬಂದಿದೆ ಅಂತ. ಯಾರಿಗೆ ಕೊರಗಜ್ಜನಲ್ಲಿ ನಂಬಿಕೆಯಿದೆ. ಅವರು ಹಿರಿಯರ ಅಜ್ಜ ಅಜ್ಜಿಯ ರೂಪದಲ್ಲಿ ಅವರನ್ನು ಭೇಟಿ ಮಾಡಿಯೇ ಇರುತ್ತಾರೆ. ರಸ್ತೆಯಲ್ಲಿ ಹೋಗುವಾಗ ಯಾರಿಗೋ ಕಷ್ಟ ಎದುರಾಗಿರುತ್ತೆ. ಆಗ ಯಾರೋ ಬಂದು ಬಾ ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದೂ ಇದೆ." ಎಂದು ಕೊರಗಜ್ಜನ ಮಹಿಮೆ ಬಗ್ಗೆ ನಟಿಯರು ಸಂದರ್ಶನದಲ್ಲಿ ಹೇಳಿದ್ದಾರೆ.
ಕೊರಗಜ್ಜ ಪರಿಹಾರ ಕೊಟ್ಟೇ ಕೊಡುತ್ತಾನೆ
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ನಟಿಯರು ಸಿನಿಮಾ ವೇಳೆ ತಮಗೆ ಆದ ಎರಡು ಅನುಭವಗಳನ್ನು ಹೇಳಿಕೊಂಡಿದ್ದಾರೆ. ಹಾಗೇ ಕೊರಗಜ್ಜ ತಡವಾಗಿಯಾದರೂ ಪರಿಹಾರ ಕೊಟ್ಟೇ ಕೊಡುತ್ತಾನೆ ಎನ್ನುತ್ತಾರೆ. "ನನಗೆ ಒಬ್ಬೊಬ್ಬರು ಬಂದು ಕೇಳಿದ್ದು ಇದೆ. ನಾನು ಎಷ್ಟು ಪ್ರಾರ್ಥನೆ ಮಾಡಿದ್ದರೂ ನನಗೆ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಒಂದು ಸಾರಿ ನಿಧಾನಗತಿಯಲ್ಲಿ ಇರುತ್ತೆ. ಇನ್ನೊಂದು ಸಲ ವೇಗವಾಗಿ ಆಗುತ್ತೆ. ಆದರೆ, ಕೊಡುವುದಂತೂ ಕೊಟ್ಟೇ ಕೊಡುತ್ತಾರೆ. ಎಷ್ಟೋ ಜನರಿಗೆ ಈಗ ಕಳೆದು ಹೋಯ್ತು ಅಂದರೆ, ಈಗಲೇ ಬೇಕು ಅಂತ. ಪಾಪ ಅಜ್ಜನಿಗೂ ಟೈಮ್ ಕೊಡಬೇಕಲ್ಲ. ಅವರಿಗೂ ಎಷ್ಟು ಭಕ್ತಾಧಿಗಳು ಇದ್ದಾರೆ." ಎನ್ನುತ್ತಾರೆ.
ಕೊರಗಜ್ಜ ಸತ್ಯದ ಪರ
"ಕೊರಗಜ್ಜ ಸತ್ಯದ ಪರ ಇರುತ್ತಾರೆ. ಒಮ್ಮೆ ಯಾರೋ ಒಬ್ಬರು ಕೊರಗಜ್ಜನ ಹುಂಡಿಯಿಂದ ಕದ್ದಿದ್ದರು. ಕೋಲಾದ ಸಮಯದಲ್ಲಿ ಬಂದಿರೋರು ಪ್ರಶ್ನೆ ಮಾಡಿದ್ದಾರೆ. ನಿನಗೆ ಅಷ್ಟು ಪವರ್ ಇದೆಯಲ್ಲ. ಯಾರು ಕದ್ದಿರೋದು ಅಂತ ನೀನು ನನಗೆ ಹೇಳಬೇಕು ಅಂತ ಹೇಳಿದ್ದರು. ಅವತ್ತು ಹುಂಡಿಯಲ್ಲಿ ಕದ್ದಿರುವ ವ್ಯಕ್ತಿನೂ ಅಲ್ಲಿದ್ದ. ಆಗ ಪ್ರಶ್ನೆ ವೇಳೆ ಅವರು ಯಾಕೆ ಕದ್ದಿದ್ದಾನೆ ಅಂತ ನನಗೆ ಗೊತ್ತು. ಅವನನ್ನು ನಾನು ಕ್ಷಮಿಸುತ್ತೇನೆ ಅಂದಾಗ, ಆತ ಕಾಲಿಗೆ ಬೀಳುತ್ತಾನೆ. ನನಗೆ ಗೊತ್ತು ನಿನ್ನ ಅಮ್ಮನಿಗೆ ಹುಷಾರಿರಲಿಲ್ಲ. ಅದಕ್ಕೆ ಈ ಕೆಲಸ ಮಾಡಿದ್ದೀಯ. ಇನ್ನೊಮ್ಮೆ ಮಾಡಬೇಡ ಅನ್ನುತ್ತಾರಂತೆ. ಇಂತಹ ಸಾಕಷ್ಟು ಘಟನೆಗಳು ನಡೆದಿವೆ." ಎಂದು ನಟಿಯರಿಬ್ಬರು ಅನುಭವ ಹಂಚಿಕೊಂಡಿದ್ದಾರೆ.
ಬೆತ್ತದ ಸೌಂಡು, ಗಾಳಿ, ಮಲ್ಲಿಗೆ ಸುವಾಸನೆ
"ಅಜ್ಜ ಇದ್ದಾರೆ ಅಂದರೆ, ಅಲ್ಲಿ ಬೆತ್ತದ ಸೌಂಡು, ಗಾಳಿ, ಮಲ್ಲಿಗೆ ಹೂವಿನ ಸುವಾಸನೆ ಬಂದರೂ ಇದ್ದಾರೆ ಅಂತ. ಎಷ್ಟೋ ಸಾರಿ ಇಂತಹ ಅನುಭವ ಆಗಿದೆ. ಯಾರೋ ಬಂದು ಕೈ ಹಿಡಿದು ನಾನಿದ್ದೀನಿ ಅಂತ ಹೇಳಿದ ಹಾಗೆ. ನಾವು ಈಗ ಹೇಗಾಗಿದ್ದೀವಿ ಅಂದರೆ, ಅಜ್ಜ ಇದ್ದಾರೆ. ನಮಗಾಗಿ ಏನೋ ಮಾಡುತ್ತಿದ್ದಾರೆ. ಅಜ್ಜ ಏನೋ ಒಳ್ಳೆಯದ್ದೆ ಮಾಡಿದ್ದಾರೆ. ಈ ಕೆಲಸ ಹೋಯ್ತು ಅಂದರೆ ಪರ್ವಾಗಿಲ್ಲ. ಬೇರೆ ಏನೋ ಕೊಡುತ್ತಾರೆ ಅಷ್ಟೇ. ಕೊರಗಜ್ಜನ ನಂಬುವವರಿಗೆ ಏನು ಹೇಳುತ್ತೇನೆ ಅಂದರೆ, ನಿಮ್ಮ ಬಳಿ 100 ಸಮಸ್ಯೆ ಇರಬಹುದು. ಆದರೆ, 99 ಸಮಸ್ಯೆಗಳಲ್ಲಿ ಕೊರಗಜ್ಜ ಕೈ ಬಿಡುವುದಿಲ್ಲ." ಎಂದು ನಟಿಯರಾದ ಅದ್ವಿತಿ, ಅಶ್ವಿತಿ ಶೆಟ್ಟಿ ಹೇಳಿದ್ದಾರೆ. ಸದ್ಯ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಕೊರಗಜ್ಜನ ಮಹಿಮೆ ಬಗ್ಗೆ ತಿಳಿಸಿಕೊಟ್ಟ ನಟಿಯರಿಗೆ ಕೊರಗಜ್ಜನ ಭಕ್ತರು ಮೆಚ್ಚುಗೆ ಸೂಚಿಸುತ್ತಿದ್ದಾರೆ.


Click it and Unblock the Notifications











