ಐಂದ್ರಿತಾ ರೇಗೆ ಅಪಘಾತ ಮುಂಬೈ ಆಸ್ಪತ್ರೆಗೆ ದಾಖಲು
ನಟಿ ಐಂದ್ರಿತಾ ರೇ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಸ್ನೇಹಿತೆಯೊಬ್ಬರ ಮದುವೆಗೆಂದು ಅವರು ಗುಜರಾತ್ ನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಶನಿವಾರ (ನವೆಂಬರ್ 8) ನಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐಂದ್ರಿತಾ ರೇ ಅವರ ಕಾರನ್ನು ಅವರ ಚಾಲಕ ಚಲಾಯಿಸುತ್ತಿದ್ದ. ರಸ್ತೆ ತಿರುವೊಂದರಲ್ಲಿ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಐಂದ್ರಿತಾ ಅವರ ಎಡ ಭುಜಕ್ಕೆ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ಅವರು ಮುಂಬೈ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. [ಎಲ್ಲಿಂದಲೋ ಬಂದವರು ಈಗ ಕನ್ನಡ ಬಾಂಧವರು]
ಈಗಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದು ಇನ್ನೂ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಎರಡು ದಿನಗಳ ಬಳಿಕ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನುತ್ತವೆ ಮೂಲಗಳು.ಐಂದ್ರಿತಾ ರೇ ಅವರು ಮುಂಬೈನಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕವಷ್ಟೇ ಅಪಘಾತದ ಮತ್ತಷ್ಟು ವಿವರಗಳು ಲಭ್ಯವಾಗಲಿವೆ. ಕಾರಿನಲ್ಲಿ ಡ್ರೈವರ್ ಸೇರಿ ಒಟ್ಟು ಮೂರು ಮಂದಿ ಇದ್ದರು. ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
"ಕಾರನ್ನು ಚಾಲಕ ತುಂಬಾ ವೇಗವಾಗಿ ಚಲಾಯಿಸುತ್ತಿದ್ದ. ದಿಢೀರ್ ಎಂದು ರಸ್ತೆ ತಿರುವು ಬಂದಾಗ ಹಠಾತ್ ಆಗಿ ಬ್ರೇಕ್ ಚಲಾಯಿಸಿದ್ದಾನೆ. ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ" ಎಂದು ಐಂದ್ರಿತಾ 'ಟೈಂಸ್ ಆಫ್ ಇಂಡಿಯಾ'ಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications












