ಶಿವಣ್ಣನಿಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ನಟಿ ಇಳಾ ವಿಟ್ಲ ಪಾಲು; ಆ ಮೇಲೆ ನಡೆದ ಪವಾಡವೇನು?
ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರದ ಮಹಿಮೆಗೆ ಸ್ಯಾಂಡಲ್ ವುಡ್ ರಕ್ಷಿತಾರಿಂದ ಹಿಡಿದು ಬಾಲಿವುಡ್ ಕತ್ರಿನಾ ತನಕ ಸಾಕಷ್ಟು ತಾರೆಯರು ಅಭಿಮಾನಿಗಳಾಗಿದ್ದಾರೆ. ಇದೀಗ ಮೂಲತಃ ಕರಾವಳಿಯ ವಿಟ್ಲದವರೇ ಆಗಿರುವ ಕನ್ನಡ ಕಿರುತೆರೆ ಬೆಳ್ಳಿತೆರೆ ನಟಿ ಇಳಾ ವಿಟ್ಲ ಕೂಡ ದೈವಕ್ಷೇತ್ರ ಸಂದರ್ಶಿಸಿ ಪ್ರಾರ್ಥಿಸಿದ್ದಾರೆ. ಕೊರಗಜ್ಜನ ಪವಾಡ ತಮಗೂ ಅರಿವಾದ ಬಗ್ಗೆ KUDLADAKLU (ಕುಡ್ಲದಕ್ಲು) ತುಳು ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.
ಇಳಾ ವಿಟ್ಲ ಈ ಹಿಂದೆ ಕಿರುತೆರೆ ಧಾರಾವಾಹಿಗಳಾದ 'ಕಾದಂಬರಿ', 'ಸೊಸೆ ತಂದ ಸೌಭಾಗ್ಯ' ಹಾಗೂ 'ಶೈಲೂ' ಸಿನಿಮಾಗಳಲ್ಲಿನ ನಟನೆಯ ಮೂಲಕ ಗುರುತಿಸಿಕೊಂಡಿರುವ ಇಳಾ ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶಾಂತಿನಿವಾಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಇದರ ಮಧ್ಯೆಯೇ ಇಳಾ ತನ್ನ ಆಪ್ತ ಬಂಧುಗಳೊಂದಿಗೆ ಕೆಲವು ದಿನಗಳ ಭೇಟಿಗೆ ತವರಿಗೆ ಮರಳಿದ್ದಾರೆ. ಶುಕ್ರವಾರ ಮಂಗಳೂರಲ್ಲಿ ಕರ್ಪ್ಯೂ ಹಾಕಲಾಗಿತ್ತು. ಇದರ ಮಧ್ಯೆಯೇ ಇಳಾ ತನ್ನ ಆಪ್ತ ಬಂಧುಗಳೊಂದಿಗೆ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೈವ, ದೇವರು ಅಂದರೆ ನಂಬಿಕೆ ಇರುವ ಪರಂಪರೆಯಿಂದಲೇ ಬಂದವರು ಇಳಾ ವಿಟ್ಲ. ಅದರಲ್ಲೂ ಕೊರಗಜ್ಜನ ಮಹಿಮೆಯನ್ನು ಅನುಭವಿಸಿರುವ ರೀತಿ ಅನನ್ಯ.
ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಕುಡ್ಲದಕ್ಲು (KUDLADAKLU ) ವಾಹಿನಿಯೊಂದಿಗೆ ಇಳಾ ವಿಟ್ಲ ಈ ಬಗ್ಗೆ ಮಾತನಾಡಿದ್ದಾರೆ. "ವಸಂತ ರುಕ್ಮಿಣಿ ಅನ್ನೋ ಸಿನಿಮಾ ಚಿತ್ರೀಕರಣದ ವೇಳೆ ಮೊಬೈಲ್ ಕಳೆದು ಹೋಗಿತ್ತು. ಅದು ತುಂಬ ಹೊಸ ಮೊಬೈಲ್ ಫೋನ್ ಆಗಿತ್ತು. ಹೀಗಾಗಿ ಹಳೆಬೀಡು ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ್ದೆ. ಇನ್ನೂ ಒಂದು ತಿಂಗಳ ಇಎಮ್ಐ ಕಟ್ಟೋಕೂ ಶುರು ಮಾಡಿರಲಿಲ್ಲ. ಸ್ನೇಹಿತರ ಸಲಹೆಯ ಮೇರೆಗೆ ಇಂಥ ಸಂದರ್ಭದಲ್ಲಿ ಮತ್ತೆ ಮೊಬೈಲ್ ಸಿಗಲೇಬೇಕು ಅಂತ ಕೊರಗಜ್ಜನಿಗೆ ಹರಕೆ ನೀಡಿದ್ದೆ. ತಿಂಗಳ ಬಳಿಕ ಮಂಗಳೂರಲ್ಲಿ ಸಿಕ್ಕಿರುವುದಾಗಿ ಹಳೇಬೀಡು ಪೊಲೀಸರು ತಿಳಿಸಿದ್ದರು. ಚಿಕ್ಕ ಮಗಳೂರಲ್ಲಿ ಮೊಬೈಲ್ ಹೇಗೆ ಕಳೆದು ಹೋಗುವಾಗ ಹೇಗಿತ್ತೋ, ಮಂಗಳೂರಿಗೆ ಮಾರಾಟಗೊಂಡಿದ್ದ ಆ ಮೊಬೈಲ್ ಅಷ್ಟೇ ಚೆನ್ನಾಗಿಯೇ ಸಿಕ್ಕಿತ್ತು." ಎನ್ನುತ್ತಾರೆ ನಟಿ ಇಳಾ ವಿಟ್ಲ.

ಕೊರಗಜ್ಜನಿಗೆ ಇಳಾ ವಿಟ್ಲ ಈ ಹರಕೆ ತೀರಿಸುವ ಮೊದಲೇ ಮತ್ತೊಂದು ವಿಸ್ಮಯಕಾರಿ ಘಟನೆ ಸಂಭವಿಸಿತ್ತು. ಈ ಘಟನೆ ಸಿನಿಮಾ ಪತ್ರಕರ್ತರೊಬ್ಬರ ಮೂಲಕ ನಡೆದಿದ್ದಾಗಿಯೂ ಇಳಾ ಹಂಚಿಕೊಂಡಿದ್ದಾರೆ. ಹಿರಿಯನಟ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ವಿದೇಶದಲ್ಲಿ ಆಪರೇಷನ್ ಮಾಡಿಸಿಕೊಂಡರು. ಈ ಆಪರೇಷನ್ ಹಿಂದಿನ ದಿನ, ಇದು ಸಾಂಗವಾಗಿ ನೆರವೇರುವಂತೆ ಪತ್ರಕರ್ತ ಶಶಿಕರ ಪಾತೂರು ವೈಯಕ್ತಿಕವಾಗಿ ಕೊರಗಜ್ಜನಲ್ಲಿ ಬೇಡಿಕೊಂಡಿದ್ದರು. ಶಿವಣ್ಣ ಪೂರ್ತಿಗುಣಮುಖರಾಗಿ ಮರಳಿದ್ದೇ ತಡ, ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ಪತ್ರಕರ್ತರು ತಮ್ಮ ಹರಕೆ ತೀರಿಸಿಕೊಂಡಿದ್ದರು. ಆದರೆ ಮರುದಿನ ಬೆಂಗಳೂರಿಗೆ ಸೇರಿದ ಬಳಿಕ ಪ್ರಸಾದ ತಲುಪಿಸಲು ಶಿವಣ್ಣನ ಭೇಟಿ ಮಾಡಲು ಆಗಿರಲಿಲ್ಲ. ಮಾತ್ರವಲ್ಲ, ಈ ಹರಕೆಯ ಬಗ್ಗೆ ಶಿವಣ್ಣನಿಗೂ ಅರಿವಿರದ ಕಾರಣ, ಅವರ ಕಡೆಯಿಂದಲೂ ಪ್ರಸಾದ ಪಡೆಯುವ ಪ್ರಯತ್ನ ನಡೆದಿರಲಿಲ್ಲ. ಕೊರಗಜ್ಜನ ಪ್ರಸಾದ ಎನ್ನುವುದು ವೀಳ್ಯದೆಲೆ ಮತ್ತು ಚಕ್ಕುಲಿ ರೂಪದಲ್ಲಿರುವ ಕಾರಣ ಹೆಚ್ಚು ದಿನ ತಮ್ಮಲ್ಲಿಯೇ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಪತ್ರಕರ್ತರು, ತಕ್ಷಣ ತಮ್ಮ ಪಕ್ಕದ ಮನೆಯಲ್ಲಿರುವ ಕೊರಗಜ್ಜನ ಭಕ್ತೆ ಇಳಾರನ್ನು ನೆನಪಿಸಿಕೊಂಡಿದ್ದಾರೆ. ಭಕ್ತಿಯಿಂದ ಪ್ರಸಾದ ಸ್ವೀಕರಿಸಿದ ಇಳಾಗೆ ಒಂದು ಅಚ್ಚರಿ ನಡೆದಿದೆ.
"ಅನಿರೀಕ್ಷಿತವಾಗಿ ಶುರುವಾಗಿದ್ದ ಕಾಲು ನೋವು ನನಗೆ ಹಲವಾರು ದಿನಗಳಿಂದ ಕಾಡತೊಡಗಿತ್ತು. ಚಿಕಿತ್ಸೆ ಮಾಡಿದ್ದರೂ ಗುಣವಾಗಿರಲಿಲ್ಲ. ಆದರೆ, ಕೊರಗಜ್ಜನ ಪ್ರಸಾದವಾಗಿ ಸಿಕ್ಕ ಚಕ್ಕುಲಿಗಳಲ್ಲಿ ಮೂರನೇ ಚಕ್ಕುಲಿ ತಿನ್ನುವುದರೊಳಗೆ ನನ್ನ ನೋವೆಲ್ಲ ದೂರಾಗಿದೆ. ನಾನು ಬೇಡದೆಯೇ ದೈವ ನನ್ನ ಕಾಲುನೋವು ಗುಣಪಡಿಸಿದೆ. ಬಹುಶಃ ಈ ಮೂಲಕ ನನ್ನ ಉಳಿದು ಹೋದ ಹರಕೆ ಬಗ್ಗೆ ಕೊರಗಜ್ಜ ನೆನಪಿಸುತ್ತಿರಬಹುದೇ ಎನ್ನುವ ಸಂದೇಹವೂ ಮೂಡಿದೆ. ತಕ್ಷಣವೇ ಬಿಡುವು ಮಾಡಿಕೊಂಡು ಮಂಗಳೂರಿನ ನನ್ನ ಮನೆಗೆ ಬಂದಿದ್ದೇನೆ. ನಾನು ದೇವಸ್ಥಾನಕ್ಕೆ ಹೋಗಬೇಕಾದ ದಿನ ಮಂಗಳೂರಲ್ಲಿ ಬಂದ್ ಇತ್ತು. ನಿಷೇಧಾಜ್ಞೆ ಹೇರಲಾಗಿತ್ತು. ಆದರೂ ಹಠಬಿಡದೆ ಕೊರಗಜ್ಜನ ದರ್ಶನ ಮಾಡಿ ಹರಕೆ ತೀರಿಸಿ ಸಂತೃಪ್ತಿ ಕಂಡಿದ್ದೇನೆ" ಎಂದು ಇಳಾ ವಿಟ್ಲ ಹೇಳಿಕೊಂಡಿದ್ದಾರೆ.


Click it and Unblock the Notifications











