"ನಾನು ಮಾಡಿದ್ದರ ಬಗ್ಗೆ ನನಗೆ ಹೆಮ್ಮೆಯಿಲ್ಲ.. 2 ವರ್ಷ ಆಯ್ತು ಹೊರಗೆ ಬಂದಿಲ್ಲ"; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ
ಕೊಡಗಿನ ಕನ್ನಡದ ನಟಿ ಕೃಷಿ ತಾಪಂಡ ಕಳೆದ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದ್ದಾರೆ. ಉದ್ಯಮಿಯೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್ ಅವರಿಗೆ ದೊಡ್ಡ ಕಂಟಕವಾಗಿತ್ತು. ಅದರಲ್ಲೂ ಉದ್ಯಮಿ ಹಾಗೂ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ದೂರು ನೀಡಿದ ಬಳಿಕ ಈ ಸಮಸ್ಯೆ ಲೋಕಕ್ಕೆ ಜಾಹೀರಾಯ್ತು. ಇಲ್ಲಿಂದ ಕೃಷಿ ತಾಪಂಡ ವಿವಾದದ ಸುಳಿಯಿಂದ ಹೊರ ಬರುವುದಕ್ಕೆ ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಕೃಷಿ ತಾಪಂಡ ಈ ವಿವಾದದಲ್ಲಿ ಸಿಕ್ಕಿಕೊಂಡಾಗ ಪ್ರತಿಕ್ರಿಯೆ ನೀಡಿರಲಿಲ್ಲ. ಎಲ್ಲೂ ಕಾಣಿಸಿಕೊಂಡೂ ಇರಲಿಲ್ಲ. ಆದ್ರೀಗ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉದ್ಯಮಿಯೊಂದಿಗಿನ ಸಂಬಂಧದ ಬಗ್ಗೆ, ಅವರಿಂದ ಅನುಭವಿಸಿದ ಕಷ್ಟಗಳ ಬಗ್ಗೆ, ನೋವು-ಯಾತನೆ ಬಗ್ಗೆ ರಿವೀಲ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತನ್ನ ಸುತ್ತ ಸುತ್ತುಕೊಂಡಿರುವ ವಿವಾದದ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅವರು ಇಷ್ಟ ಆಗೋದಕ್ಕೆ ಕಾರಣವಿತ್ತು
ನಟಿ ಕೃಷಿ ತಾಪಂಡ ಹಾಗೂ ಉದ್ಯಮಿಯ ನಡುವಿನ ಸಂಬಂಧ ಬೀದಿಗೆ ಬಿದ್ದಿತ್ತು. ಇಬ್ಬರೂ ಅನ್ಯೋನ್ಯವಾಗಿದ್ದವರು ಪೊಲೀಸ್ ಠಾಣೆ, ಕೇಸು ಅಂತ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಿದ್ದರೂ, ಕೃಷಿ ತಾಪಂಡ ತಮ್ಮ ಬಾಯ್‌ಫ್ರೆಂಡ್ ಉದ್ಯಮಿ ಮೇಲೆ ಕೋಪವಿಲ್ಲ. "ಇವತ್ತಿನವರೆಗೂ ನಾನು ಅವರ ಬಗ್ಗೆ ಏನಕ್ಕೆ ಮಾತಾಡುವುದಕ್ಕೆ ಹೋಗುವುದಿಲ್ಲ ಎಂದರೆ, ನನ್ನನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡಿದ ವ್ಯಕ್ತಿಯನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ಅವರು ಇಷ್ಟ ಆಗುವುದಕ್ಕೆ ಒಂದು ಕಾರಣವಿತ್ತಲ್ಲ. ಆ ಕಾರಣವನ್ನೇ ಇಟ್ಟುಕೊಂಡು ನಾನು ಮುಂದಕ್ಕೆ ಹೋಗುತ್ತೇನೆ. ಅವರು ನನಗೆ ಕೆಟ್ಟದು ಮಾತಾಡಿದ್ದಾರೆ ಅನ್ನೋದನ್ನು ನಾನು ಇಟ್ಟುಕೊಂಡು ನಾನು ಮುಂದಕ್ಕೆ ಹೋದರೆ, ಅದು ಕಹಿ ನೆನಪುಗಳನ್ನು ತರುತ್ತೆ. ಅದನ್ನು ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ನಾನು ಯಾರನ್ನೂ ಯಾವತ್ತೂ ದ್ವೇಷ ಮಾಡಿದವಳಲ್ಲ. ನನಗೆ ಯಾವತ್ತೂ ಅವರ ಬಗ್ಗೆ ಕೋಪವಿಲ್ಲ. ಅವರಿಗೆ ನಾನು ತೊಂದರೆ ಕೊಡಬೇಕು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ" ಎನ್ನುತ್ತಾರೆ ಕೃಷಿ ತಾಪಂಡ.
ನನಗೆ ಹೊರ ಬರೋಕೆ ಆಗಲ್ಲ ಅನಿಸಿತ್ತು
ಕೃಷಿ ತಾಪಂಡ ಹಾಗೂ ಉದ್ಯಮಿ ಇಬ್ಬರೂ ಸಂಬಂಧ ಆರಂಭದಲ್ಲಿ ಚೆನ್ನಾಗಿತ್ತು. ಆದರೆ, ಬರಬರುತ್ತಾ ಅದು ವಿವಾದಕ್ಕೆ ತಿರುಗಿತ್ತು. 2024ರಲ್ಲೇ ಇವರಿಬ್ಬರ ಮಧ್ಯೆ ಕಿಡಿ ಹೊತ್ತಿಕೊಂಡಿತ್ತು. ಆದರೆ, ಇದ ಸರಿ ಹೋಗಲ್ಲ ಅಂತ ಗೊತ್ತಾದಾಗ ಕೃಷಿ ತಾಪಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. "ಜನರಿಗೆ ಮೀಡಿಯಾಗೆ ಗೊತ್ತಿರೋ ಹಾಗೆ ಇದು 2026ನಲ್ಲಿ ಆಗಿದ್ದು, ಆದರೆ, ಇದು ಶುರುವಾಗಿದ್ದು 2024ರಲ್ಲಿ. ಎರಡು ವರ್ಷದಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಇದು ಹೊರ ಬರಬಾರದು ಅಂತ ನಾನು ಟ್ರೈ ಮಾಡುತ್ತಿದ್ದೆ. ಆದರೆ, ಅದು ಆಗುತ್ತಿರಲಿಲ್ಲ. ಆಗ ನನಗೆ ಇದರಿಂದ ನಾನು ಆಚೆ ಬರುವುದಕ್ಕೆ ಆಗುವುದಿಲ್ಲ ಅನಿಸಿತ್ತು." ಎಂದು ಕೃಷಿ ತಾಪಂಡ ಹೇಳಿಕೊಂಡಿದ್ದಾರೆ.

ನಾನು ಮಾಡಿದ್ದರ ಬಗ್ಗೆ ಹೆಮ್ಮೆಯಿಲ್ಲ
ಇದೇ ಸಂದರ್ಶನದಲ್ಲಿ ಉದ್ಯಮಿ ಜೊತೆಗಿನ ಸಂಬಂಧ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಏನು ಮಾಡಿದ್ದೇನೆ ಅದರ ಬಗ್ಗೆ ನನಗೆ ಹೆಮ್ಮೆಯಿಲ್ಲ. 2026ರಲ್ಲಿ ಏನೆಲ್ಲ ಆಯ್ತಲ್ಲ. ಅದನ್ನು ತಡೆ ಹಿಡಿಯುವುದಕ್ಕೆ ನಾನು ಆ ಸ್ಟೆಪ್ ಅನ್ನು ತೆಗೆದುಕೊಂಡೆ. ನನಗೆ ಇದೆಲ್ಲ ಆಗುವುದು ಬೇಡವಾಗಿತ್ತು. ನನಗೆ ಈ ಅವಮಾನ ಎಲ್ಲಾ ಆಯ್ತಲ್ಲ. ಅದೆಲ್ಲ ಆಗುವುದು ನನಗೆ ಬೇಕಾಗಿರಲಿಲ್ಲ. ಅದನ್ನೆಲ್ಲ ತಡೆಯುವುದಕ್ಕೆ ನಾನು ಹೋಗಿಬಿಟ್ಟರೆ, ತೊಂದರೆನೇ ಇರಲ್ವಲ್ಲ. ನನಗೆ ದೌರ್ಜನ್ಯ ಆಗುತ್ತಿತ್ತು. ಅದಕ್ಕೆ ನಾನು ಹೋಗಿ ದೂರು ಕೊಟ್ಟೆ. ಯಾರಿಗೂ ತೊಂದರೆ ಕೊಡಬೇಕು ಅಂತಲ್ಲ. ನಾನು ದೂರು ಕೊಟ್ಟೆ ಅಷ್ಟೆ. ನನ್ನ ಪಾಡಿಗೆ ನಾನು ಇದ್ದೆ. ನನ್ನ ಜೀವನ ನೋಡಿಕೊಳ್ಳುತ್ತಿದ್ದೆ. ಎರಡು ವರ್ಷ ಆಯ್ತು. ನಾನು ಎಲ್ಲೂ ಹೊರಗೆ ಬಂದಿಲ್ಲ." ಎಂದು ಕೃಷಿ ತಾಪಂಡ ಹೇಳಿ ಭಾವುಕರಾಗಿದ್ದಾರೆ.


Click it and Unblock the Notifications