"ಒಬ್ಬರ ಸಾವಿನ ವಿಷಯದಲ್ಲಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳಬೇಡಿ"- ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್
ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಕಳೆದ ಕೆಲವು ದಿನಗಳಿಂದ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗೆ ಅವರ ಆಪ್ತ ಗೆಳೆಯ ವೈಶಾಖ್ ಅವರದ್ದೇ ಪ್ಲಾಟ್‌ನಲ್ಲಿ ಆತ್ಯ*ಹತ್ಯೆ ಮಾಡಿಕೊಂಡಿದ್ದು ಮತ್ತೊಮ್ಮೆ ಅವರನ್ನು ಕುಗ್ಗಿಸಿದೆ. ವೈಶಾಕ್ ಹಠಾತ್ ಅಗಲಿಕೆ ಬಳಿಕ ಕೃಷಿ ತಾಪಂಡ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅವು ನಟಿಯನ್ನು ಮಾನಸಿಕವಾಗಿ ಕುಗ್ಗಿಸಿವೆ.
ಕೃಷಿ ತಾಪಂಡ ಇತ್ತೀಚೆಗೆ ಉದ್ಯಮಿಯೊಂದಿಗಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಪಾಡ್‌ಕಾಸ್ಟ್‌ನಲ್ಲಿ ಆ ಸಂಬಂಧದ ಬಗ್ಗೆ ಇಂಚಿಂಚು ಮಾಹಿತಿಯನ್ನು ನೀಡಿದ್ದರು. ತಮ್ಮ ಬದುಕಿನಲ್ಲಿ ನಡೆದ ದುರಂತವನ್ನು ನೆನೆದು ಕಣ್ಣೀರು ಹಾಕಿದ್ದರು. ತಾನು ತಪ್ಪು ಮಾಡಿದ್ದೇನೆ ಎಂದು ಕೃಷಿ ತಾಪಂಡ ಒಪ್ಪಿಕೊಂಡಿದ್ದರು. ಆ ನೋವಿನಿಂದ ಹೊರ ಬರುವುದಕ್ಕೆ ಯತ ಪ್ರಯತ್ನವನ್ನು ಮಾಡುತ್ತಿದ್ದರು.

ಆ ಘಟನೆಗಳಿಗೆ ಇನ್ನೇನು ಚೇತರಿಸಿಕೊಳ್ಳಬೇಕು ಅನ್ನುವಾಗಲೇ ಕೃಷಿ ತಾಪಂಡ ಪ್ಲಾಟ್‌ನಲ್ಲಿ ಗೆಳೆಯ ವೈಶಾಖ್ ಆತ್ಮ*ಹತ್ಯೆಗೆ ಶರಣಾಗಿದ್ದರು. ಇದು ನಟಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಇಂತಹ ಕಷ್ಟದ ಸಮಯದಲ್ಲಿ ಆಪ್ತನನ್ನು ಕಳೆದುಕೊಂಡ ದುಃಖದಲ್ಲಿರುವಾಗ ಕೃಷಿ ತಾಪಂಡ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಸಾವಿನ ಬಗ್ಗೆ ಇಲ್ಲಸಲ್ಲದ ವದಂತಿಗಳು ಹರಿದಾಡುತ್ತಿದೆ. ಇದೇ ಬೆನ್ನಲ್ಲೇ ನಟಿ ಕೃಷಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ಒಬ್ಬರ ಸಾವಿನ ವಿಷಯದಲ್ಲಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಊಹಾಪೋಹಗಳಿಗೆ ಬ್ರೇಕ್ ಹಾಕಿ ಪ್ಲೀಸ್
ನಟಿ ಕೃಷಿ ತಾಪಂಡ ಆಪ್ತ ಗೆಳೆಯ ವೈಶಾಖ್ ಸಾವಿನ ಬಳಿಕ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಕೆಲವು ಸುದ್ದಿ ಬಿತ್ತರಿಸಲಾಗುತ್ತಿದೆ. ಇದು ನಟಿಯ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ವೈಶಾಖ್ ನಿಧನದ ಸುತ್ತ ಕಟ್ಟುಕಥೆಗಳು ಹಾಗೂ ಊಹಾಪೋಹಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಯಾವುದೇ ಸತ್ಯಾಸತ್ಯತೆ ಪರಿಶೀಲನೆ ಮಾಡದೇ ಸುದ್ದಿ ಮಾಡುತ್ತಿರುವುದಕ್ಕೆ ಕೃಷಿ ತಾಪಂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಧೀರ್ಘವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
"ನಾನು ಎಂದಿಗೂ ಇಂತಹದನ್ನು ಊಹಿಸಿರಲಿಲ್ಲ"
ಕೃಷಿ ತಾಪಂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಾಲ್ಕೈದು ಪುಟಗಳ ಪೋಸ್ಟ್ ಹಂಚಿಕೊಂಡಿದ್ದು, ಅದರ ಸಾರಾಂಶ ಹೀಗಿದೆ. "ನಾನು ಇಂತಹದನ್ನು ಬರೆಯಬೇಕಾಗಿ ಬರಬಹುದೆಂಬುದನ್ನು ಎಂದಿಗೂ ಊಹಿಸಿರಲಿಲ್ಲ. ನನಗೆ ಇದನ್ನೆಲ್ಲ ಬರೆಯಲು, ಇಲ್ಲವೇ ಪ್ರಪಂಚದ ಮುಂದೆ ಹಂಚಿಕೊಳ್ಳಲು ದೈಹಿಕ ಶಕ್ತಿಯಾಗಲಿ, ಮಾನಸಿಕ ಧೈರ್ಯವಾಗಲಿ ಇಲ್ಲ. ಇಂತಹ ಕಷ್ಟದ ಸಮಯದಲ್ಲಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡುವುದು ನನಗಿಷ್ಟವಿರಲಿಲ್ಲ. ಆದರೆ ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಮತ್ತು ನಮ್ಮ ಕುಟುಂಬಗಳ ಮೇಲೆ ಬರುತ್ತಿರುವ ಅತಿಯಾದ ಒತ್ತಡ, ಊಹಾಪೋಹಗಳು, ಪದೇ ಪದೇ ನಮ್ಮ ಮುಂದೆ ತೂರಿಬರುತ್ತಿರುವ ಪ್ರಶ್ನೆಗಳಿಗಾಗಿ ಈ ಹೇಳಿಕೆ ನೀಡಬೇಕಾಗಿದೆ. ಕಳೆದ ಕೆಲವು ದಿನಗಳು ನನ್ನ ಬದುಕನ್ನು ನಾನು ಎಂದಿಗೂ ಯೋಚಿಸದಷ್ಟು ಬದಲಾಯಿಸಿವೆ" ಎಂದು ನಟಿ ಕೃಷಿ ಹೇಳಿದ್ದಾರೆ.
ಹತ್ತಿರವಾದವರನ್ನು ಕಳೆದುಕೊಂಡಿದ್ದೇನೆ
"ಇಷ್ಟೆಲ್ಲ ಘಟನೆಗಳ ಮಧ್ಯೆ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದವರೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಯಾವಾಗಲೂ ನನ್ನ ಜೊತೆಯಾಗಿ ನಿಲ್ಲುತ್ತಿದ್ದರು, ನನ್ನನ್ನು ರಕ್ಷಿಸುತ್ತಿದ್ದರು, ಕೇವಲ ಅಪರಂಜಿ ಅಂತಿದ್ದ ಹೃದಯದಿಂದ ನನ್ನನ್ನು ಕಾಳಜಿ ಮಾಡಿದ ವ್ಯಕ್ತಿ ಅವರು. ಅವರನ್ನು ಕಳೆದುಕೊಂಡಿರುವುದು ನನ್ನ ಜೀವನದಲ್ಲಿ ವರ್ಣಿಸಲಾಗದಷ್ಟು ಶೂನ್ಯ ಆವರಿಸಿದೆ. ಈ ನಷ್ಟವನ್ನು ಜೀರ್ಣಿಸಿಕೊಂಡು ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಾ? ಅನ್ನೋದು ನನಗೆ ತಿಳಿಯುತ್ತಿಲ್ಲ" ಎಂದು ನಟಿ ಕೃಷಿ ತಾಪಂಡ ಹೇಳಿದ್ದಾರೆ.


Click it and Unblock the Notifications