ಮದುವೆಗಾಗಿ ಮತಾಂತರಗೊಂಡ್ರಾ ನಟಿ ಖುಷ್ಬೂ? ನೆಟ್ಟಿಗರ ಈ ಪ್ರಶ್ನೆಗೆ 'ವಿಶೇಷ ವಿವಾಹ ಕಾಯಿದೆ' ಗೊತ್ತಿಲ್ವಾ? ಎಂದ ನಟಿ!
ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ ನಟಿ ಖುಷ್ಬೂ. ಅದರಲ್ಲೂ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್.
90ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದ ಖುಷ್ಬು ಸುಂದರ್ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಖುಷ್ಬೂ ಗುರುತಿಸಿಕೊಂಡಿದ್ದು, ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದಾರೆ.

ಖುಷ್ಬೂ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು ಅನ್ನೋದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚೆಗೆ 'ದಿ ಕೇರಳ ಸ್ಟೋರಿ' ರಿಲೀಸ್ ಆಗುತ್ತಿದ್ದಂತೆ ಖುಷ್ಬೂಗೆ ಮದುವೆಗಾಗಿ ಮತಾಂತರಗೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
'ಮದುವೆಗಾಗಿ ಮತಾಂತರ': ಖುಷ್ಬೂ ವಿರುದ್ಧ ಟೀಕೆ
ಖುಷ್ಬೂ ಮುಂಬೈನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ್ದರು. ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಕ್ಷಿಣ ಭಾರತದ ಕಡೆಗೆ ಪಯಣ ಬೆಳೆಸಿದ್ದರು. 1991ರಲ್ಲಿ 'ಚಿನ್ನತಂಬಿ' ಅನ್ನೋ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಖುಷ್ಬೂ ಮತ್ತೆಂದೂ ತಿರುಗಿ ನೋಡಿಲ್ಲ.
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರೋ ನಟಿಯೀಕೆ. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ತಮಿಳು ನಿರ್ದೇಶಕ ಸುಂದರ್ ಸಿ ಅವರನ್ನು ವಿವಾಹವಾದರು. ಮುಸ್ಲೀಂ ಧರ್ಮದವರಾದ ಖುಷ್ಬೂ ಸುಂದರ್ ಅವರನ್ನು ಮದುವೆ ಆಗುವುದಕ್ಕಾಗಿ ಮತಾಂತರಗೊಂಡಿದ್ದಾರೆ ಎಂದು ಟೀಕೆ ಮಾಡಲಾಗಿತ್ತು. ಈ ಟೀಕೆ ಖುಷ್ಬೂ ಖಾರಾವಾಗಿ ಪ್ರತಿಕ್ರಿಯಿಸಿದ್ದಾರೆ.
'ವಿಶೇಷ ವಿವಾಹ ಕಾಯಿದೆ' ಕೇಳಿಲ್ಲವೇ?
ಖುಷ್ಬೂ ನೇರ ನುಡಿಯ ನಟಿ. ಅದ್ಯಾರೇ ಅದೆಂತಹದ್ದೇ ಟೀಕೆ ಮಾಡಿದರೂ, ಅದಕ್ಕೆ ತಿರುಗೇಟು ನೀಡುತ್ತಾರೆ. ಈಗ ಮದುವೆಗಾಗಿ ಮತಾಂತರಗೊಂಡಿದ್ದಾರೆ ಅನ್ನೋ ಪ್ರಶ್ನೆಗೂ ಖುಷ್ಬೂ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಯಾರು ನಮ್ಮ ಮದುವೆಯನ್ನು ಪ್ರಶ್ನೆ ಮಾಡುತ್ತಿದ್ದಾರೋ.. ಅಥವಾ ನನ್ನ ಗಂಡನನ್ನು ಮದುವೆಯಾಗಲು ಮತಾಂತರಗೊಂಡ ಎನ್ನುತ್ತಿದ್ದಾರೋ ಅವರಿಗೆ ಈ ಬಗ್ಗೆ ಸ್ವಲ್ಪ ಅರಿವಿರಲಿ. ನಮ್ಮ ದೇಶದಲ್ಲಿ 'ವಿಶೇಷ ವಿವಾಹ ಕಾಯಿದೆ' ಇದೆ ಅನ್ನೋದು ಗೊತ್ತಿಲ್ಲದೆ ಇರೋ ಬೇಸರದ ಸಂಗತಿ. ನಾನು ಮತಾಂತರಗೊಂಡಿಲ್ಲ. ಇಲ್ಲಾ ಯಾರೂ ಮತಾಂತರವಾಗು ಅಂತ ಒತ್ತಡ ಹೇರಿಲ್ಲ. ನನ್ನ 23 ವರ್ಷಗಳ ವೈವಾಹಿಕ ಜೀವನದಲ್ಲಿ ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಭು ಗಣೇಶ್ ಮದುವೆಯಾಗಿದ್ದ ನಟಿ
ಖುಷ್ಬೂ ನಟ, ನಿರ್ದೇಶಕ ಸಿ ಸುಂದರ್ ಅವರನ್ನು ಮದುವೆ ಆಗುವುದಕ್ಕೂ ಮುನ್ನ ಪ್ರಭು ಗಣೇಶನ್ ಅವರನ್ನು ಪ್ರೀತಿಸುತ್ತಿದ್ದರು. 1993ರಲ್ಲಿ ಖುಷ್ಬೂ ಹಾಗೂ ಪ್ರಭು ಮದುವೆಯಾದರು. ಆದರೆ, ಪ್ರಭು ತಂದೆ ಶಿವಾಜಿ ಗಣೇಶನ್ ಇವರಿಬ್ಬರ ಮದುವೆಯನ್ನು ಒಪ್ಪಲಿಲ್ಲ. ಈ ಕಾರಣಕ್ಕೆ ನಾಲ್ಕು ತಿಂಗಳ ಬಳಿಕ ಇಬ್ಬರು ಬೇರೆಯಾದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ರಾಜಕೀಯಕ್ಕೆ ಕಾಲಿಟ್ಟ ದಿನದಿಂದ ಖುಷ್ಬೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗಷ್ಟೇ ಗೋಪಿಚಂದ್ ಅಭಿನಯದ 'ರಾಮಬಾಣಂ' ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ರಜನಿಕಾಂತ್ ನಟಿಸಿದ್ದ 'ಅಣ್ಣಾತ್ತೆ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. 'ವಾರಿಸು' ಸಿನಿಮಾದಲ್ಲಿ ನಟಿಸಿದ್ದರೂ, ಆ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು.


Click it and Unblock the Notifications











