86ರ ಇಳಿವಯಸ್ಸಿನಲ್ಲೂ ರೈತರ ಬೆಂಬಲಕ್ಕೆ ನಿಂತ ಹಿರಿಯ ನಟಿ: "ನೀರು ಅಂತ ಕಣ್ಣೀರು ಹಾಕಬಾರದು" ಎಂದ ಲೀಲಾವತಿ
ಕಾವೇರಿ ನದಿ ನೀರು ವಿವಾದ ಕರ್ನಾಟಕದಲ್ಲಿ ತೀವ್ರಗೊಂಡಿದೆ. ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ವಿರೋಧಿಸಿ ಮಂಡ್ಯ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ಬಿಡುತ್ತಿರುವ ವಿಚಾರಕ್ಕೆ ರೈತರು ಆಕ್ರೋಶಗೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಂಡ್ಯ ಭಾಗದ ರೈತರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಕೈ ಜೋಡಿಸಿದ್ದಾರೆ. 86ರ ಇಳಿವಯಸ್ಸಿನಲ್ಲೂ ಹೋರಾಟಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ.

ಹಿರಿಯ ನಟಿ ಲೀಲಾವತಿ ಜೊತೆ ಪುತ್ರ ವಿನೋದ್ ರಾಜ್ ಕೂಡ ಆಗಮಿಸಿದ್ದರು. ಅನಾರೋಗ್ಯದ ಹೊರತಾಗಿಯೂ ರೈತರ ಹೋರಾಟದಲ್ಲಿ ಭಾಗಿಯಾಗಿ ಅವರಿಗೆ ಬೆಂಬಲವನ್ನು ಸೂಚಿಸಿದ್ದರು. ಈ ವೇಳೆ ಕಾವೇರಿ ಕಣ್ಣೀರು ಆಗಬಾರದು ಎಂದು ಹೇಳಿದ್ದಾರೆ. ಹಿರಿಯ ನಟಿ ಆಡಿದ ಮಾತುಗಳು ರೈತರಿಗೆ ಮತ್ತಷ್ಟು ಹುರುಪು ಕೊಟ್ಟಿದೆ.
"ನೀರು ಕಣ್ಣೀರು ಆಗಬಾರದು"
ಕನ್ನಡದ ಹಿರಿಯ ನಟಿ ಲೀಲಾವತಿಗೆ ಈಗ 86 ವರ್ಷ. ಈ ಇಳಿವಯಸ್ಸಿನಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಿದ್ದರೂ, ಕಷ್ಟ ಪಟ್ಟು ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರೈತರ ಬೆಂಬಲಕ್ಕೆ ನಿಂತಿದ್ದಾರೆ. ಈ ವೇಳೆ ಕಾವೇರಿ ನೀರು ಕಣ್ಣೀರು ಆಗಬಾರದು ಎಂದು ಹೇಳಿದ್ದಾರೆ."ನೀರು ಕಣ್ಣೀರು ಆಗಬಾರದು ಅಂತ ಅಮ್ಮ ಹೇಳುತ್ತಿದ್ದಾರೆ. ಮಂಡ್ಯದ ಅಭಿಮಾನ ಅವರನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ನೀರು ಕಣ್ಣೀರು ಆಗಬಾರದು ಆನಂದಬಾಷ್ಪ ಆಗಿರಬೇಕು" ಎಂದು ಹಿರಿಯ ನಟಿ ಲೀಲಾವತಿ ಅಭಿಪ್ರಾಯ ಪಟ್ಟಿದ್ದಾರೆ.

"ಶಾಂತಿಯುತವಾಗಿ ಹೋರಾಡಿ ಗೆಲ್ಲೋಣ"
ಹಿರಿಯ ನಟಿ ಲೀಲಾವತಿ ಜೊತೆ ಪುತ್ರ ವಿನೋದ್ ರಾಜ್ ಕೂಡ ಆಗಮಿಸಿದ್ದರು. ಕಾವೇರಿ ಬಗ್ಗೆ, ರೈತರ ಬಗ್ಗೆ ಅಮ್ಮನ ಮನದಾಳದ ಮಾತನ್ನು ರೈತರಿಗೆ ಮುಟ್ಟಿಸಿದರು. ಇದರ ಜೊತೆ ಶಾಂತಿಯುತವಾಗಿ ಹೋರಾಡಿ ಸಮಸ್ಯೆ ಗೆಲ್ಲೋಣ ಎಂದಿದ್ದಾರೆ. "ಕಾವೇರಿ ನಮ್ಮದು ಅವಳು ಯಾವತ್ತೂ ನಮ್ಮನ್ನು ಬಿಟ್ಟುಕೊಡುವುದಿಲ್ಲ ಅನ್ನೋದು ಸತ್ಯ. ಅದೆಷ್ಟೇ ಕಷ್ಟ ಆಗಲಿ. ಶಾಂತಿಯುತವಾಗಿ ಹೋರಾಡಿ ಗೆಲ್ಲೋಣ. ಇದನ್ನು ಬಿಡಬಾರದು" ಎಂದು ವಿನೋದ್ ರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿ ಹೇಳಿದ್ದಾರೆ.
ಕಾವೇರಿ ಹೋರಾಟಕ್ಕೆ ತಾರೆಯರ ಬೆಂಬಲ
ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಒಬ್ಬೊಬ್ಬರಾಗಿಯೇ ಬೆಂಬಲ ನೀಡುತ್ತಿದ್ದಾರೆ. ಕನ್ನಡ, ನಾಡು, ನುಡಿ, ಜಲ ಅಂತ ಬಂದಾಗ ಸ್ಯಾಂಡಲ್‌ವುಡ್ ತಾರೆಯರು ರೈತರ ಪರ ನಿಂತಿದ್ದಾರೆ. ಹಾಗೇ ಈ ಬಾರಿ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ದರ್ಶನ್, ಅಭಿಷೇಕ್ ಅಂಬರೀಶ್, ಲೀಲಾವತಿ, ವಿನೋದ್ ರಾಜ್ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು ಬಂದ್‌ಗೂ ಬೆಂಬಲ
ಕಾವೇರಿ ವಿವಾದದ ಬೆನ್ನಲ್ಲೇ ನಾಳೆ (ಸೆಪ್ಟೆಂಬರ್ 25) ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲ ನೀಡಿದೆ. ನಾಳೆ ಚಿತ್ರಮಂದಿರ ಹಾಗೂ ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಿ ಬೆಂಗಳೂರು ಬಂದ್‌ಗೆ ಫಿಲ್ಮ್ ಚೇಂಬರ್ ಬೆಂಬಲ ಸೂಚಿಸಿದೆ. ಹೀಗಾಗಿ ನಾಳೆಯಿಂದ ಕಾವೇರಿ ಹೋರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications











