'ಆಪರೇಷನ್ ಲಂಡನ್ ಕೆಫೆ'ಯಲ್ಲಿ ಹಳ್ಳಿಗಾಡಿನ ಹೈಸ್ಕೂಲು ಹುಡುಗಿಯಾದ ಮೇಘಾ ಶೆಟ್ಟಿ
'ಜೊತೆಜೊತೆಯಲಿ' ಧಾರಾವಾಹಿ ಬಳಿಕ ಮೇಘಾ ಶೆಟ್ಟಿ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದಾರೆ. ಅಳೆದು ತೂಗಿ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ 'ಟ್ರಿಪಲ್ ರೈಡಿಂಗ್', 'ದಿಲ್ ಪಸಂದ್' ಹಾಗೂ 'ಕೈವ'ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇವರು ನಟಿಸಿದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಬಹಳ ದಿನಗಳಿಂದ ಈ ಸಿನಿಮಾಗಾಗಿ ಮೇಘಾ ಶೆಟ್ಟಿ ಅಭಿಮಾನಿಗಳು ಕಾಯುತ್ತಿದ್ದರು. ಅವರಿಗೀಗ ಶುಭ ಸುದ್ದಿ ಸಿಕ್ಕಿದೆ.
ಮೇಘಾ ಶೆಟ್ಟಿ ಅಭಿಮಾನಿಗಳು ಬಹಳ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿದ್ದ ಸಿನಿಮಾವಿದು. ಅದುವೇ 'ಆಪರೇಷನ್ ಲಂಡನ್ ಕೆಫೆ'. ಈ ಸಿನಿಮಾದ ಬಿಡುಗಡೆಯ ದಿನವನ್ನು ಅನೌನ್ಸ್ ಮಾಡಲಾಗಿದೆ. ಪಕ್ಕಾ ಮಾಸ್ ಕಮ್ ಕಂಟೆಂಟ್ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಲ್ಲಿವರೆಗೂ ಕುತೂಹಲವನ್ನು ಕೆರಳಿಸಿದ್ದ ಸಿನಿಮಾ ಈಗ ಸಿನಿಮಾದ ರಿಲೀಸ್ ಅನೌನ್ಸ್ ಮಾಡುವ ಕೂಡ ಪ್ರಚಾರವನ್ನು ಆರಂಭ ಮಾಡಿದೆ.

'ಆಪರೇಷನ್ ಲಂಡನ್ ಕೆಫೆ' ಸಿನಿಮಾ ಇದೇ ವರ್ಷ ನವೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮೇಘಾ ಶೆಟ್ಟಿಯ ಹಳ್ಳಿ ಹುಡುಗಿ ಲುಕ್ ಅನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡಿದ್ದಾರೆ.
ಅಂದ್ಹಾಗೆ 'ಆಪರೇಷನ್ ಲಂಡನ್ ಕೆಫೆ' ಸಿನಿಮಾವನ್ನು ಉಡುಪಿ ಮೂಲದ ಇಂಡಿಯನ್ ಫಿಲಂ ಫ್ಯಾಕ್ಟರಿ, ಮರಾಠಿಯ ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.
'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ನಾಯಕನಾಗಿ ಕವೀಶ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಮೊದಲ ಸಿನಿಮಾ 'ಜಿಲ್ಕಾ'ದ ಮೂಲಕ ಲವರ್ ಕಮ್ ಚಾಕಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದರು. 'ಆಪರೇಷನ್ ಲಂಡನ್ ಕೆಫೆ' ಸಿನಿಮಾ ಮೂಲಕ ಮಾಸ್ ಹೀರೋ ಆಗುವ ಭರವಸೆಯನ್ನು ಮೂಡಿಸಿದ್ದಾರೆ.
ಈ ಸಿನಿಮಾದಲ್ಲಿ ಕವೀಶ್ ಶೆಟ್ಟಿಯ ಮಾಸ್ ಕಮ್ ಅಕ್ಷನ್ ಪೋಸ್ಟರ್ ಹಾಗೂ ಟೀಸರ್ ಮೂಲಕ ಚಿತ್ರರಂಗಕ್ಕೆ ಗಟ್ಟಿಯಾಗಿ ನೆಲೆಯೂರುವ ಭರವಸೆಯನ್ನು ಮೂಡಿಸಿದ್ದಾರೆ. ಇವರಿಗೆ ಜೊತೆಯಾಗಿ ಕನ್ನಡಿಗರ ಮನೆ ಮಾತಿನ ಬೆಡಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯ ಗೆಟಪ್ಪಿನಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋಗಳು ಸದ್ಯ ಟ್ರೆಂಡಿಂಗ್‌ನಲ್ಲಿವೆ.
ಇನ್ನು ತಮ್ಮ ಟೆರ್ರರ್ ಲುಕ್ ಮೂಲಕ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡ್ಕೆ ತೆರೆ ಹಂಚಿಕೊಂಡಿದ್ದರೆ ಅರ್ಜುನ್ ಕಾಪಿಕಾಡ್ ಅದರಲ್ಲೂ ವಿಶೇಷವಾಗಿ ಒಬ್ಬ ಆರ್ಮಿ ಆಫೀಸರ್ ಉಡುಪಿನಲ್ಲಿ ತುಂಬಾ ಖದರ್ ಲುಕ್ ಕೊಟ್ಟಿದ್ದಾರೆ. ಇದು ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಈ ಸಿನಿಮಾ. ಇದರಲ್ಲಿ ಬಿ. ಸುರೇಶ್, ಧರ್ಮೇಂದ್ರ ಅರಸ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕನ್ನಡ ಮತ್ತು ಮರಾಠಿಯ ಹೆಸರಾಂತ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾಗೆ ಆರ್. ಡಿ. ನಾಗಾರ್ಜುನ್ ಛಾಯಾಗ್ರಹಣ, ಪ್ರಾಂಶು ಝಾ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ, ವಿಕ್ರಂ ಮೊರ್, ಮಾಸ್ ಮಾದ, ಅರ್ಜುನ್ ರಾಜ್ ಸಾಹಸವಿದ್ದು, ಕವಿರಾಜ್ ಮತ್ತು ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಅನಿರುಧ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಶ್ರೀ ಲಕ್ಷ್ಮಿ ಬೆಳ್ಮಣ್ಣು, ಪ್ರಥ್ವಿ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.


Click it and Unblock the Notifications











