"ಹಿಂದಿ ಕನ್ನಡದ ಮಕ್ಕಳ ಮೇಲೆ ಹೇರಿಕೆ ಆಗ್ಬಾರ್ದು"; ಮಧು ಬಂಗಾರಪ್ಪಗೆ ಜೈ ಎಂದ ಪೂಜಾ ಗಾಂಧಿ
ಕರ್ನಾಟಕ ಸರ್ಕಾರ ದ್ವಿಭಾಷಾ ಸೂತ್ರವನ್ನು ಅವಳವಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೃತಿಯ ಭಾಷೆಯ ಹಿಂದಿ ಭಾಷೆಗೆ ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ. ಕಳೆದ ಕೆಲವು ದಿನಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಎಂದು ಕನ್ನಡಪ ಸಂಘಟನೆಗಳು ಒತ್ತಡ ಹಾಕಿದ್ದವು. ಅದಕ್ಕೆ ಸರ್ಕಾರ ಮಣಿದಿದೆ.
ಕನ್ನಡ ಪರ ಹೋರಾಟಗಾರರ ಒತ್ತಾಯವನ್ನು ಗಣನೆಗೆ ತೆಗೆದುಕೊಂಡಿರುವ ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿದ್ದ ಹಿಂದಿಯ ಅಂಕಕ್ಕೆ ಹೊರಗಿಟ್ಟಿರುವ ಬಗ್ಗೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರದ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಆರಂಭ ಆಗಿವೆ.

ಕರ್ನಾಟಕ ಸರ್ಕಾರ ಈ ನಿರ್ಧಾರವನ್ನು ನಟಿ ಪೂಜಾ ಗಾಂಧಿ ಸ್ವಾಗತಿಸಿದ್ದಾರೆ. ಈ ಸಂಬಂಧ ಒಂದು ವಿಡಿಯೋವನ್ನು ಮಾಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ ಸರ್ಕಾರ ರಾಜ್ಯದಲ್ಲಿರುವ ತ್ರಿಭಾಷಾ ನೀತಿಯನ್ನು ತೆಗೆದು ಹಾಕುವುದಕ್ಕೆ ತೀರ್ಮಾನಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ನೀತಿ ಅನ್ವಯ ಆಗಲಿದೆ. ಅಂದರೆ, ಹಿಂದಿ ಭಾಷೆಗೆ ಅಂಕಗಳನ್ನು ನೀಡಲಾಗುತ್ತಿತ್ತು. ಅದನ್ನು ಈಗ ತೆಗೆದು, ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಅಂಕಗಳು 525ಕ್ಕೆ ಸೀಮಿತವಾಗಿರುತ್ತೆ.
ಈ ಬಗ್ಗೆ ಮುಂಗಾರು ಮಳೆ ನಟಿ ಪೂಜಾ ಗಾಂಧಿ ಹರ್ಷ ವ್ಯಕ್ತ ಪಡಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ "ನಾನು ಪೂಜಾ ಗಾಂಧಿ ಮಾತಾಡುತ್ತಿದ್ದೇನೆ. ಇವತ್ತು ನಿಜವಾಗಲೂ ತುಂಬಾನೇ ಸಂತೋಷ ಆಗುತ್ತಿದೆ. ನಾನು ಮೊದಲನೆಯದಾಗಿ ಕರ್ನಾಟಕ ಸರ್ಕಾರ ಹಾಗೂ ಮಧು ಬಂಗಾರಪ್ಪ ಅವರಿಗೆ ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಇವತ್ತು ಅವರು ತೆಗೆದುಕೊಂಡಿರುವ ತೀರ್ಪುನಿಂದ ತುಂಬಾನೇ ಖುಷಿಯಾಗುತ್ತಿದೆ." ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.
ಇದೇ ವಿಡಿಯೋದಲ್ಲಿ "ಹಿಂದಿ ಇವತ್ತು ಭಾಷೆಯಾಗಿ ಕಲಿಯುವುದು ಮುಖ್ಯ. ಅದು ಕನ್ನಡದ ಮಕ್ಕಳ ಮೇಲೆ ಹೇರಿಕೆಯಾಗಬಾರದು. ಈ ಸಂದರ್ಭದಲ್ಲಿ ಎಲ್ಲಾ ಕನ್ನಡ ಪರ ಹೋರಾಟಗಾರರು ಹಾಗೂ ಸಂಸ್ಥೆಗಳು ಯಾರೆಲ್ಲ ಹೋರಾಟ ಮಾಡಿದ್ದಾರೆ ಅವರೆಲ್ಲರಿಗೂ ಒಂದು ಜಯ ಸಿಕ್ಕಿದೆ. ಅವರೆಲ್ಲರಿಗೂ ಅಭಿನಂದನೆಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಜೈ ಹಿಂದ್.. ಜೈ ಕರ್ನಾಟಕ ಮಾತೆ" ಎಂದು ಪೂಜಾ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಯ ಅಂಕಗಳ ಬದಲಾಗಿ ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ. ಹಿಂದಿ ಭಾಷೆ ಕಡ್ಡಾಯವಾಗಿರುವುದಿಲ್ಲ ಎಂದು ಮಧು ಬಂಗಾರಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ. ಸದ್ಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುತ್ತದೆ. ಹಿಂದಿ ಭಾಷೆಗೆ ಅಂಕಗಳ ಬದಲಾಗಿ ಎ.ಬಿ.ಸಿ.ಡಿ ಎಂದು ಗ್ರೇಡ್ ನೀಡಲಾಗುತ್ತದೆ. ಹೀಗಾಗಿ ಹಿಂದೆ ಇದ್ದ ಗರಿಷ್ಠ ಅಂಕ 625ರ ಬದಲಾಗಿ 525ಕ್ಕೆ ಇಳಿಸಲಾಗಿದೆ. ಇನ್ನು ಉಳಿದ ತರಗತಿಗಳ ವಿಚಾರವನ್ನು ಶಿಕ್ಷಣ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.


Click it and Unblock the Notifications