ಸ್ವಚ್ಛತಾ ಕಾರ್ಮಿಕರಿಗೆ ನಟಿ ರಚಿತಾ ರಾಮ್ ಕಾರು ಡಿಕ್ಕಿ: ತಿರುಗಿಯೂ ನೋಡದ ನಟಿ!
ಚಂದನವನದ ನಟಿ ರಚಿತಾ ರಾಮ್ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ಸಿಲಿಕಾನ್ ಸಿಟಿಯ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕಾಗಿ ಫ್ಲವರ್ ಶೋ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ನಟಿ ಬಂದಿದ್ದರು. ಈ ವೇಳೆ ಅವರ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಗುದ್ದಿದೆ.
ಕಾರು ಚಾಲಕನ ಯಡವಟ್ಟಿನಿಂದ ಲಾಲ್‌ಬಾಗ್‌ನಲ್ಲಿ ಸ್ವಚ್ಛತೆ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಕಾರ್ಮಿಕ ಪಕ್ಕಕ್ಕೆ ಹೋಗಿ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಘಟನೆ ನಡೆದಾಗ ನಟಿ ಕಾರಿನಲ್ಲೇ ಇದ್ದರೂ ಕಾರನ್ನು ನಿಲ್ಲಿಸುವುದಾಗಲಿ, ಅವರ ಕಡೆ ತಿರುಗಿ ನೋಡುವುದಾಗಲಿ ಮಾಡಿಲ್ಲ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ.

ಕಾರು ಒಬ್ಬ ವ್ಯಕ್ತಿಗೆ ಗುದ್ದಿದೆ ಎಂದು ತಿಳಿದರೂ ಕೂಡ ಏನೂ ಆಗಿಯೇ ಇಲ್ಲ ಎನ್ನುವಂತೆ ಕಾರ್ಯಕ್ರಮದತ್ತ ತೆರಳಿರುವ ನಟಿ ರಚಿತಾ ರಾಮ್ ಅವರ ನಡೆಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಕಾರು ನಿಲ್ಲಿಸದೆ, ಸೌಜನ್ಯಕ್ಕಾದರೂ ಕ್ಷಮೆ ಕೇಳದ ನಟಿ ಮತ್ತು ಕಾರು ಚಾಲಕನ ನಡೆಗೆ ಜನರು ಕಿಡಿ ಕಾರಿದ್ದು, ರಚಿತಾ ರಾಮ್ ಮಾನವೀಯತೆ ಮರೆತ್ರಾ ಎಂದು ಪ್ರಶ್ನೆ ಕೇಳಿದ್ದಾರೆ.
ಇನ್ನು, ವಿಡಿಯೋದಲ್ಲಿ ಕಾಣುವಂತೆ ಘಟನೆ ನಡೆದ ತಕ್ಷಣ ರಚಿತಾ ರಾಮ್ ಅವರ ಬಾಡಿಗಾರ್ಡ್ ಓಡಿ ಬಂದು ಲಾಲ್ ಬಾಗ್ ಸಿಬ್ಬಂದಿಯನ್ನು ಬದಿಗೆ ಕಳುಹಿಸುತ್ತಾರೆ. ಅದಕ್ಕೆ ಕಾರ್ಮಿಕರ ಮೇಲೆ ರಚಿತಾ ಬಾಡಿಗಾರ್ಡ್ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ಬಳಕೆದಾರರೊಬ್ಬರು ಘಟನೆಯ ವಿಡಿಯೋ ಪ್ರಸಾರ ಮಾಡಿರುವ ಖಾಸಗಿ ವಾಹಿನಿಯ ವಿಡಿಯೋ ಹಂಚಿಕೊಂಡಿದ್ದು, "ರಚಿತಾ ರಾಮ್ ಅವರೇ ಸೌಜನ್ಯಕ್ಕಾದರೂ ಕ್ಷಮೆ ಕೇಳಬೇಕಿತ್ತು ನೀವು ಆ ವ್ಯಕ್ತಿಯ ಬಳಿ!" ಎಂದು ಹೇಳಿ ನಟಿಯನ್ನು ಟ್ಯಾಗ್ ಮಾಡಿದ್ದಾರೆ. ಮತ್ತೊಬ್ಬರು, ರಚ್ಚು ಐ ಲವ್ ಯು ಚಿತ್ರೀಕರಣದ ವೇಳೆಯೂ ನೀವು ಹೀಗೆ ಅಮಾನವೀಯವಾಗಿ ನಡೆದುಕೊಂಡಿದ್ದಿರಿ ಎಂದು ಹೇಳಿದ್ದಾರೆ.
ರಚಿತಾ ರಾಮ್ ಮತ್ತು ಅಜಯ್ ರಾವ್ ಅಭಿನಯದ ರಚ್ಚು ಐ ಲವ್ ಯು ಚಿತ್ರೀಕರಣದ ಸಮಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ಅಸಿಸ್ಟೆಂಟ್ ಫೈಟರ್ ವಿವೇಕ್ ಮೃತಪಟ್ಟ ವೇಳೆ ಒಂದು ಪೋಸ್ಟ್ ಕೂಡ ಹಾಕಿರಲಿಲ್ಲ. ಬಳಿಕ ಟೀಕೆಗಳು ವ್ಯಕ್ತವಾದ ನಂತರ ಸಂತಾಪ ಸೂಚಿಸಿದ್ದರು. ಹೀಗಾಗಿ ಲಾಲ್‌ಬಾಗ್ ಸಿಬ್ಬಂದಿ ಘಟನೆಗೆ ವಿವೇಕ್ ಘಟನೆಯನ್ನು ಹೋಲಿಸಿ ಹಲವರು ನಟಿಯ ನಡೆಯನ್ನು ಟೀಕಿಸಿದ್ದಾರೆ.
ಸದ್ಯ ರಚಿತಾ ರಾಮ್, ನಟ ಸತೀಶ್ ನಿನಾಸಂ ಜೊತೆಗೆ ಮ್ಯಾಟ್ನಿ, ಅಭಿಷೇಕ್ ಅಂಬರೀಶ್ ಜೊತೆಗೆ ಬ್ಯಾಡ್ ಮ್ಯಾನರ್ಸ್, ಶ್ರೀನಗರ ಕಿಟ್ಟಿ ಜೊತೆಗೆ ಸಂಜು ವೆಡ್ಸ್ ಗೀತಾ 2 ಸೇರಿದಂತೆ ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











