ಜೈಲಿನಲ್ಲಿ ದರ್ಶನ್ ಭೇಟಿಯಾದ ರಕ್ಷಿತಾ-ಪ್ರೇಮ್; ಇಬ್ಬರ ನಡುವೆ ನಡೆದ ಸಂಭಾಷಣೆ ಏನು?
ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ರೇಣುಕಾಸ್ವಾಮಿ ಹತ್ಯೆ ವಿಚಾರ ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ.
ದರ್ಶನ್ ಜೈಲು ಸೇರಿದ ದಿನದಿಂದಲೂ ಸ್ಯಾಂಡಲ್‌ವುಡ್ ಮಂದಿ ಕಂಗಾಲಾಗಿದ್ದಾರೆ. ಕೆಲವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗಬೇಕು ಎಂದು ಹೇಳುತ್ತಿದ್ದಾರೆ. ಅದೇ ಮತ್ತೆ ಕೆಲವರು ದರ್ಶನ್ ಪರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ನಿರಪರಾಧಿಯಾಗಿ ಹೊರಬರುತ್ತಾರೆ ಅನ್ನುವ ನಂಬಿಕೆಯಲ್ಲಿದ್ದಾರೆ.

ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಇಬ್ಬರೂ ದರ್ಶನ್ ಉತ್ತಮ ಗೆಳೆಯರು. ಹೀಗಾಗಿ ದರ್ಶನ್ ಜೈಲು ಸೇರಿದ ಕೆಲವು ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿ ಮಾಡುವುದಕ್ಕೆ ಬಂದಿದ್ದರು. ಕೆಲ ಹೊತ್ತು ರಕ್ಷಿತಾ, ಪ್ರೇಮ್ ಜೊತೆ ದರ್ಶನ್ ಮಾತುಕಥೆ ನಡೆಸಿ ಬಂದಿದ್ದಾರೆ. ಜೈಲಿನ ಒಳಗೆ ನಡೆದ ಸಂಭಾಷಣೆ ಏನು? ಅನ್ನೋದನ್ನು ರಕ್ಷಿತಾ, ಪ್ರೇಮ್ ರಿವೀಲ್ ಮಾಡದೇ ಹೋದರೂ, "ಕಾನೂನಿಗಿಂತ ಯಾರೂ ದೊಡ್ಡವರಲ್ಲ" ಅಂತ ಕೊಟ್ಟಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
ಹೌದು, ರಕ್ಷಿತಾ ಹಾಗೂ ಜೋಗಿ ಪ್ರೇಮ್ ಜೈಲಿನಲ್ಲಿ ದರ್ಶನ್‌ರನ್ನು ಭೇಟಿ ಮಾಡಿದ ಬಳಿಕ ಹೆಚ್ಚಿನ ಮಾಹಿತಿಯನ್ನೇನು ರಿವೀಲ್ ಮಾಡಿಲ್ಲ. ಕೇವಲ ಭೇಟಿ ಮಾಡುವುದಕ್ಕೆ ಬಂದಿದ್ದೆವು ಅಷ್ಟೇ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಒಳಗೆ ದರ್ಶನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಮಾತಾಡಿದ್ರಾ? ಸಿನಿಮಾಗಳ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಂಡಿದ್ದಾರಾ? ಅನ್ನುವ ಬಗ್ಗೆ ಏನೂ ಹೇಳಿಲ್ಲ.
"ಹದಿನೈದು ಇಪ್ಪತ್ತು ದಿನಗಳಿಂದ ಏನೇನು ಆಗಿದೆಯೋ, ನೀವು ಮಾಧ್ಯಮದವರು ಏನೇನು ತೋರಿಸುತ್ತಿದ್ದಿರೋ ಅದು ಅತ್ಯಂತ ದುರಾದೃಷ್ಟಕರ. ನಾನು ಏನು ಹೇಳುವುದಕ್ಕೆ ಇಷ್ಟ ಪಡುತ್ತೇನೆ ಅಂದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ." ಎಂದು ದರ್ಶನ್ ಭೇಟಿ ಮಾಡಿದ ಬಳಿಕ ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಹಾಗೇ ಜೋಗಿ ಪ್ರೇಮ್ ಮಾತನಾಡಿ, "ದರ್ಶನ್ ನಮಗೂ ಸ್ನೇಹಿತರು ಎಲ್ಲರಿಗೂ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಇದು ಕೋರ್ಟ್‌ನಲ್ಲಿದೆ. ಹಾಗಾಗಿ ನಾವ್ಯಾರೂ ಏನೂ ಮಾತಾಡುವುದಕ್ಕೆ ಹೋಗಬಾರದು. ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳುತ್ತಾ, ಕಾನೂನು ಪ್ರಕಾರ ಏನೆಲ್ಲ ಆಗಬೇಕೋ ಅದೆಲ್ಲ ಆಗುತ್ತಿದೆ. ಕಾನೂನು ಪ್ರಕಾರ ಯಾವುದೂ ದೊಡ್ಡದಲ್ಲ. ಇದರ ಮೇಲೆ ದಯವಿಟ್ಟು ಏನೂ ಕೇಳುವುದಕ್ಕೆ ಹೋಗಬೇಡಿ." ಎಂದು ದರ್ಶನ್ ಭೇಟಿಯ ಬಳಿಕ ಪ್ರೇಮ್ ಹೇಳಿದ್ದಾರೆ.
ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋ ಪ್ರಶ್ನೆಗೆ ರಕ್ಷಿತಾ ಪ್ರೇಮ್ ಇಂತಹ ಸಮಯದಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ? ಎಂದಿದ್ದಾರೆ. "ಅವರು ಹೇಗಿದ್ದಾರೆ ಅಂತ ಕೇಳುವುದಕ್ಕೆ ಬಂದಿದ್ವಿ. ಇಂತಹ ಸಮಯದಲ್ಲಿ ನಾರ್ಮಲ್ ಆಗಿ ಇರುವುದಕ್ಕೆ ಆಗುತ್ತಾ?" ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ.


Click it and Unblock the Notifications











