'ನಿಜವಾದ ಖುಷಿ ಇರುವುದು ಏಕತೆಯಲ್ಲಿ': ಮೋಹಕ ತಾರೆ ರಮ್ಯಾ ಹೇಳಿದ ಕಿವಿಮಾತು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆದಿದೆ. ಲಕ್ಷಾಂತರ ರಾಮ ಭಕ್ತರು ಈ ಗಳಿಗೆಯನ್ನು ಸಂಭ್ರಮಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ಚಾಲನೆ ಸಿಕ್ಕಿರುವ ಖುಷಿ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಘಟನೆಗಳಿಗೆ ಸ್ಪಂದಿಸುವ ಬಾಲಿವುಡ್‌ನ ನಟರು, ರಾಮಜನ್ಮಭೂಮಿ ಪೂಜೆಯ ವೇಳೆ ಯಾವುದೇ ಪೋಸ್ಟ್‌ಗಳನ್ನು ಹಾಕದೆ ಇರುವುದನ್ನು ಅಭಿಮಾನಿಗಳು ಟೀಕಿಸುತ್ತಿದ್ದಾರೆ.
Recommended Video
ಈ ನಡುವೆ ಮೋಹಕತಾರೆ ರಮ್ಯಾ, ಅಯೋಧ್ಯೆಯ ರಾಮಜನ್ಮಭೂಮಿ ಪೂಜೆಯ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ರಮ್ಯಾ, ಇತ್ತೀಚೆಗಷ್ಟೇ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ರಾಜಕೀಯದ ಬಗ್ಗೆ ರಮ್ಯಾ ಹೆಚ್ಚು ಪ್ರತಿಕ್ರಿಯೆ ನೀಡದೆ ಇದ್ದರೂ ಆಧ್ಯಾತ್ಮಿಕ ಮತ್ತು ವೈಯಕ್ತಿಕ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದೆ ಓದಿ...

ರಮ್ಯಾ ಹೇಳಿದ ಏಕತೆಯ ಮಂತ್ರ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದ ಎರಡು ದಿನಗಳ ಬಳಿಕ ರಮ್ಯಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ರಾಮಮಂದಿರ ನಿರ್ಮಾಣದ ಸಂಗತಿಯನ್ನು ನೇರವಾಗಿ ಟೀಕಿಸಲು ಹೋಗಿಲ್ಲ. ಹಾಗೆಯೇ ಪ್ರಶಂಸೆಯನ್ನೂ ವ್ಯಕ್ತಪಡಿಸಿಲ್ಲ. ಹಿಂದೂ ಮತ್ತು ಮುಸ್ಲಿಮರ ನಡುವೆ ಸೌಹಾರ್ದ ಮೂಡಿಸುವ ಏಕತೆಯ ಮಂತ್ರವನ್ನು ಜಪಿಸಿದ್ದಾರೆ.

ಮಂದಿರ ಅಥವಾ ಮಸೀದಿ ಬೇಕಿಲ್ಲ
ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಹಿಂದೂಗಳು ಖುಷಿಯಾಗಿರುವುದರಿಂದ ನನಗೆ ಸಂತಸವಾಗುತ್ತಿದೆ. ಮಸೀದಿ ನಿರ್ಮಾಣವಾಗಲು ಶುರುವಾದಾಗ ಮುಸ್ಲಿಮರು ಖುಷಿಪಟ್ಟ ವೇಳೆ ನಾನೂ ಖುಷಿಪಡುತ್ತೇನೆ. ಜನರು ಸಂತೋಷದಿಂದ ಇರಲು ಅಥವಾ ದೇವರನ್ನು ಅರಿತುಕೊಳ್ಳಲು ಯಾರಿಗೂ ಮಂದಿರ ಅಥವಾ ಮಸೀದಿಯ ಅಗತ್ಯವೇ ಇಲ್ಲ ಎಂಬುದು ಎಲ್ಲರಿಗೂ ಅರ್ಥವಾದಾಗ ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

ನಿಮ್ಮೊಳಗೆ ದೇವರು ಇದ್ದಾನೆ
ನಿಜವಾದ ಆನಂದ ಎನ್ನುವುದು ಏಕತೆ, ಒಗ್ಗಟ್ಟು ಹಾಗೂ ಸಹವಾಸದಲ್ಲಿ ಅಡಗಿದೆ. ಹೊರಗಿನದ್ದನ್ನು ನಿರಾಕರಿಸಿ, ನಿಮ್ಮೊಳಗೆ ನೋಡಿಕೊಳ್ಳಿ. ಅಲ್ಲಿ ನಿಮ್ಮ ನಿಜವಾದ ದೇವರು ಇದ್ದಾನೆ. ನಿಜವಾದ ನಿಮ್ಮನ್ನು ಕಾಣಬಹುದು ಎಂದು ರಮ್ಯಾ ಹೇಳಿದ್ದಾರೆ.

ರಾಜಕೀಯಕ್ಕೆ ಬಲಿಪಶುವಾಗಬೇಡಿ
ಹಾಗೆಯೇ ಜನರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ. ಎಂದಿಗೂ ರಾಜಕೀಯದ ಬಲಿಪಶುಗಳಾಗಬೇಡಿ. ಅಸ್ಮಿತೆಯ ಹೋರಾಟದೊಳಗೆ ಬಲಿಯಾಗಬೇಡಿ. ಅದು ಅಧಿಕಾರ ಮತ್ತು ನಿಯಂತ್ರಣವನ್ನು ಸೃಷ್ಟಿಸುತ್ತದೆ. ಪ್ರಶ್ನಿಸಿ, ಅದರ ಮೂಲಕ ನೋಡಿ ಮತ್ತು ಮೇಲೇಳಿ ಎಂದು ಸಲಹೆ ನೀಡಿದ್ದಾರೆ.

ರಮ್ಯಾ ಸೆಲ್ಫಿ ಅವತಾರಗಳು
ರಮ್ಯಾ ಇತ್ತೀಚೆಗೆ ತಮ್ಮ ಚಿತ್ರವಿಚಿತ್ರ ಸೆಲ್ಫಿಯ ಅವತಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೊ ತೆಗೆಸಿಕೊಳ್ಳಲು ಬಹಳ ಕಷ್ಟಪಟ್ಟು, ಕೊನೆಗೆ ಸೆಲ್ಫಿಗೆ ಮುಖವೊಡ್ಡಿದ್ದಾಗಿ ಹೇಳಿದ್ದರು. ರಾಜಕೀಯದಿಂದ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಂತೆ ಇರುವ ರಮ್ಯಾ, ಸಿನಿಮಾ ಮತ್ತು ರಾಜಕೀಯ ಎರಡಕ್ಕೂ ಯಾವಾಗ ಮರಳಲಿದ್ದಾರೆ ಎಂದು ಅಭಿಮಾನಿಗಳು ಕಾದಿದ್ದಾರೆ.


Click it and Unblock the Notifications











