"ನನ್ನ ಗಂಡ ಡೆತ್ ನೋಟ್ ಮೇಲೆ ಸಹಿ ಮಾಡಿ ಸತ್ತು ಹೋಗು ಅಂದ್ರೂ ಸಹಿ ಮಾಡ್ತೀನಿ"; ಸಂಜನಾ ಗಲ್ರಾನಿ
ದರ್ಶನ್ ಬಂಧನದ ಬಳಿಕ ನಟಿ ಸಂಜನಾ ಗಲ್ರಾನಿ ಮಾಧ್ಯಮಗಳಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಡ್ರಗ್ ಕೇಸ್ ಬಗ್ಗೆ ತನ್ನದೇನು ತಪ್ಪಿಲ್ಲ ಅಂತ ಸಾರಿ ಸಾರಿ ಹೇಳುತ್ತಿದ್ದಾರೆ. ಆರೋಪಿಯಾಗಿ ಜೈಲಿಗೆ ಹೋಗಿ ಬಂದ ಮಾತ್ರಕ್ಕೆ ಅಪರಾಧಿ ಆಗುವುದಿಲ್ಲ ಎಂದು ಪ್ರತಿ ಸಂದರ್ಶನದಲ್ಲೂ ಹೇಳುತ್ತಿದ್ದಾರೆ. ಈಗ ಮತ್ತೊಂದು ಸಂದರ್ಶನ ನೀಡಿದ್ದು , ಅದರಲ್ಲಿ ತನ್ನ ಮದುವೆ ಹಾಗೂ ಪತಿಯೊಂದಿಗಿನ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಜನಾ ಗಲ್ರಾನಿ ಈ ಹಿಂದೆನೇ ಹಲವು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಫಿಲ್ಮಿಬೀಟ್ ಜೊತೆ ಮಾತಾಡುವಾಗಲೂ ಡ್ರಗ್ ಕೇಸ್‌ನಲ್ಲಿ ಸಂಜನಾ ಹಾಗೂ ರಾಗಿಣಿ ಹೆಸರು ಅಷ್ಟೇ ಕಾಣಿಸಿತ್ತಾ? ಇಲ್ಲಿ ಯಾರೂ ಗಂಡಸರು ಇರಲಿಲ್ವಾ? ಎಂದು ಕಿಡಿಕಾರಿದ್ದರು. ಈಗ ಆರ್ ಜೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೀಕ್ರೆಟ್ ಆಗಿ ಮದುವೆ ಆಗಿದ್ದರಿಂದ ಹಿಡಿದು, ಪತಿ ಡೆತ್ ನೋಟ್‌ಗೆ ಸಹಿ ಹಾಕು ಅಂದರೂ ಹಾಕುತ್ತೇನೆಂದು ಹೇಳುವವರೆಗೂ ಮಾತಾಡಿದ್ದಾರೆ.

ಬೇರೆ ಧರ್ಮದ ವ್ಯಕ್ತಿಯನ್ನು ಮದುವೆ ಆಗುವಾಗ ಪತಿಯ ಅಮ್ಮ ಹೇಗೆ ಪ್ರತಿಕ್ರಿಯೆ ನೀಡಿದ್ದರು ಅನ್ನುವುದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಅವರ ಅತ್ತೆಗೆ ಅರ್ಥ ಮಾಡಿಸುವುದು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. "ಮದುವೆ ಆದಾಗ ನನ್ನ ಅತ್ತೆ ಬದುಕಿದ್ದರು. ಅವರಿಗೆ 82 ವರ್ಷ ಆಗಿತ್ತು. ಅವರು ಹಳೆಯ ವಿಚಾರ ಇಟ್ಟುಕೊಂಡವರು. ಅವರಿಗೆ ಅರ್ಥ ಮಾಡಿಸುವುದಕ್ಕೆ ಆಗುವುದಿಲ್ಲ. ಅವರಿಗೆ ಇವಳು ಹೊರಗಿನವಳು ನಮಗೆ ಹೇಗೆ ಹೊಂದಾಣಿ ಆಗುತ್ತಾಳೆ ಅಂತ ಅನಿಸಿತ್ತು. ನಾನು ನನ್ನ ಗಂಡನ ಮುಖ ನೋಡಿದೆ. ನನ್ನ ಗಂಡ ಕನ್ವರ್ಟ್ ಆಗಿ ಅಂತ ಒಂದು ಮಾತೂ ಹೇಳಿಲ್ಲ." ಎಂದು ಹೇಳಿಕೊಂಡಿದ್ದಾರೆ.
ಸಂಜನಾ ಮಣಿಪಾಲ್ ಆಸ್ಪತ್ರೆಯ ಈವೆಂಟ್ ಒಂದಕ್ಕೆ ಹೋಗಿದ್ದರು. ಅಲ್ಲಿ ವೈದ್ಯರ ಫ್ಯಾಷನ್ ಶೋ ನಡೆಯುತ್ತಿತ್ತು. ಈ ವೇಳೆ ಬರೀ ವೈದ್ಯರ ಹಾಗೂ ನರ್ಸ್ ನಡೆದರೆ ಚೆನ್ನಾಗಿರಲ್ಲ ಅಂತ ಮಾಡಲ್‌ಗಳನ್ನು ಕರೆದಿದ್ದರು. ಆ ವೇಳೆ ಸಂಜನಾ ಅವರ ಪತಿಯೊಂದಿಗೆ ಆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಅಲ್ಲಿಂದ ಶುರುವಾಗಿದ್ದು, ಇಲ್ಲಿವರೆಗೂ ಬಂದು ನಿಂತಿದೆ ಎಂದು ಸಂಜನಾ ಗಲ್ರಾನಿ ತಮ್ಮ ಮದುವೆ, ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ತನ್ನ ಗಂಡನ ಮೇಲೆಷ್ಟು ಪ್ರೀತಿ ಇಟ್ಟುಕೊಂಡಿದ್ದೇನೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನನ್ನ ಗಂಡನ ಮೇಲೆ ನನಗೆ ಎಷ್ಟು ಪ್ರೀತಿ ಅಂದರೆ, ಡೆತ್ ನೋಟ್ ಮೇಲೆ ಒಂದು ಸಹಿ ಮಾಡು ಸಂಜನಾ ಸತ್ತು ಹೋಗು ಅಂದರೂ ನಾನು ಸಹಿ ಮಾಡಿಬಿಡುತ್ತೇನೆ. ನನ್ನ ಗಂಡನ ಮೇಲೆ ನಾನು ಪರಿಶುದ್ಧ ಪ್ರೀತಿ ಇಟ್ಟುಕೊಂಡಿದ್ದೇನೆ. ಹಾಗೇ ಅವರ ಪ್ರೀತಿ ಕೂಡ ಅಷ್ಟೇ ಪರಿಶುದ್ಧವಾಗಿದೆ. 2006ರಿಂದ ನಾವು ಒಟ್ಟಿಗೆ ಇದ್ದೇವೆ. ಸೆಕೆಂಡ್ ಪಿಯುಸಿ ರಜೆಯಲ್ಲಿ ನಾನು ಅವರೊಂದಿಗೆ ಇರುತ್ತಿದ್ದೆ." ಎಂದು ರಿವೀಲ್ ಮಾಡಿದ್ದಾರೆ.

ಸಂಜನಾ ಗಲ್ರಾನಿ ಇದರೊಂದಿಗೆ ದರ್ಶನ್ ಬಗ್ಗೆನೂ ಮತ್ತೆ ಮಾತಾಡಿದ್ದಾರೆ. ಈ ಹಿಂದೆ ದರ್ಶನ್ ಜೊತೆ 'ಅರ್ಜುನ್' ಹಾಗೂ 'ಅಗ್ರಜ' ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಾಗಿ ದರ್ಶನ್ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. "ದರ್ಶನ್ ನನ್ನ ಹಾರ್ಟ್‌ನಲ್ಲಿ ಇದ್ದಾರೆ. ದರ್ಶನ್ ಅಂದರೆ ನನಗೆ ತುಂಬಾನೇ ಇಷ್ಟ. ಅವರು ಹೇಗೆ ಕಾಣಿಸುತ್ತಾರೆ? ಅವರು ಹೇಗೆ ಪರ್ಫಾಮ್ ಮಾಡುತ್ತಾರೆ? ಅಲ್ಲದೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರೊಬ್ಬ ಜಂಟಲ್‌ಮ್ಯಾನ್. ನಾನು ಅವರನ್ನು ಇಂಪ್ರೆಸ್ ಮಾಡುವುದಕ್ಕೆ ಹೇಳುತ್ತಿಲ್ಲ. ನನ್ನ ಮನಸ್ಸಿನಲ್ಲಿ ಏನು ಅನಿಸುತ್ತಿದೆಯೋ? ನಾನು ಅದನ್ನೇ ಹೇಳುತ್ತಿದ್ದೇನೆ." ಎಂದು ಸಂಜನಾ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗೇ ಎಲ್ಲರೂ ದರ್ಶನ್ ಜೈಲು ಸೇರಿದ್ದರ ಬಗ್ಗೆನೇ ಮಾತಾಡುತ್ತಾರೆ. ಆದರೆ, ಅವರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. "ಎಷ್ಟೋ ಜನರ ಖಾಯಿಲೆ ವಾಸಿ ಮಾಡಿದ್ದಾರೆ. ಎಷ್ಟೋ ಜನರ ಸರ್ಜರಿಗಳಿಗೆ ದುಡ್ಡು ಕಟ್ಟಿದ್ದಾರೆ. ಎಷ್ಟೋ ಜನರ ಫೀಸ್ ಕಟ್ಟಿ, ಅವರು ಬೆಳೆಯಬೇಕು ಅಂತ ನೋಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಯಾಕೆ ಮಾತಾಡುತ್ತಿಲ್ಲ. ಕೆಟ್ಟ ಸಮಯ ಬಂದಾಗ ಬರೀ ಕೆಟ್ಟದನ್ನೇ ಯಾಕೆ ಮಾತಾಡುತ್ತೀರಾ? ಕೆಟ್ಟ ಘಳಿಗೆಗಳನ್ನು ಯಾಕೆ ನೆನಪಿಸುತ್ತೀರಾ? ಅಂತ ಕೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಹೇಳಿದ್ದಾರೆ.


Click it and Unblock the Notifications











