"ಮೀಟೂವನ್ನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತೇನೋ..?"; ನಟಿ ಶ್ರುತಿ ಹರಿಹರನ್
ಮೀಟೂ ಅಭಿಯಾನ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿದ ಗಂಭೀರ ಆರೋಪ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿತ್ತು. ಈ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಸಂಧಾನಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಬಂದಿದ್ದರು. ಆದರೂ, ಪ್ರಕರಣ ಇತ್ಯರ್ಥ ಆಗಲೇ ಇಲ್ಲ.
ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜುನ್ ಸರ್ಜಾ ತನ್ನ ಮೇಲೆ ಗಂಭೀರ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಷ್ಟೆಲ್ಲ ನಡೆದು ಹೋಗಿತ್ತು. ಇಂದಿಗೂ ಈ ಮೀಟೂ ಅಭಿಯಾನದ ಬಗ್ಗೆ ಚರ್ಚೆ ಆಗುತ್ತೆ. ಯಾರು ತಪ್ಪು? ಯಾರು ಸರಿ? ಅನ್ನೋ ಪ್ರಶ್ನೆ ಮೂಡುತ್ತೆ. ಈ ಬಗ್ಗೆ ಶ್ರುತಿ ಹರಿಹರನ್ ಹಲವು ಬಾರಿ ಮೀಟೂ ಅಭಿಯಾನದ ಬಗ್ಗೆನೂ ಮಾತಾಡಿದ್ದಾರೆ.

ಈಗ ಮತ್ತೊಮ್ಮೆ ಮೀಟೂ ಬಗ್ಗೆ ಇನ್ನಷ್ಟು ಓಪನ್ ಆಗಿ ಮಾತಾಡಿದ್ದಾರೆ. ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೀಟೂ ಅಭಿಯಾನವನ್ನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತೇನೋ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಲೂಸಿಯಾ ನಟಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ಮೀಟೂ ಅಭಿಯಾನದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ತನಗೆ ಹೆಮ್ಮೆಯಿದೆ ಅಂತ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ನನಗೆ ನನ್ನ ಮೇಲೆ ಹೆಮ್ಮೆಯಿದೆ. ನನ್ನ ಸತ್ಯವನ್ನು ಹೇಳುವುದಕ್ಕೆ ನಾನು ಧೈರ್ಯ ಮಾಡಿದ್ದೆ ಅನ್ನೋ ಖುಷಿಯಿದೆ. ಇದನ್ನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತೇನೋ.. ನನ್ನ ಕಥೆಯನ್ನು ನಾನು ಹೇಳುವುದಕ್ಕೆ ನನಗೆ ಧೈರ್ಯವಿತ್ತು. ಅದರ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಅದನ್ನು ಯಾರಿಗೂ ಪ್ರೂವ್ ಮಾಡುವ ಅವಶ್ಯಕತೆಯಿಲ್ಲ. ಮೀಟೂ ಮೂಮ್ಮೆಂಟ್‌ನಲ್ಲಿ ಆ ಪವರ್ ಇತ್ತು." ಎಂದಿದ್ದಾರೆ.
ಹಾಗೇ ಮೀಟೂ ಅಭಿಯಾನದ ವೇಳೆ ನಾವು ಮಾತನಾಡಿಲ್ಲ ಅಂದರೆ, ಜಾಗೃತಿ ಎಲ್ಲಿಂದ ಹುಟ್ಟುತ್ತೆ ಎಂದಿದ್ದಾರೆ. "ಮೀಟೂ ಅಭಿಯಾನ ನನ್ನ ಪ್ರಕಾರ ತುಂಬಾ ಒಳ್ಳೆಯ ಮೂವ್ಮೆಂಟ್. ಅದು ಬಹಳ ಮುಖ್ಯ ಕೂಡ. ನಾವು ಮಾತಾಡಿಲ್ಲ ಅಂದರೆ, ಜಾಗೃತಿ ಎಲ್ಲಿಂದ ಹುಟ್ಟುತ್ತೆ. ಅದನ್ನು ಒಂದು ಪಬ್ಲಿಕ್ ಸ್ಪೇಸ್‌ನಲ್ಲಿ ಹೇಳಲಿಲ್ಲ ಅಂದರೆ, ಅದರಲ್ಲೂ ನೀವಿಬ್ಬರೂ ಪಬ್ಲಿಕ್ ಫಿಗರ್ ಆಗಿದ್ದರೆ ಅದೆಲ್ಲವೂ ಚೇಂಜ್ ಆಗುತ್ತೆ. ಮೀಟೂ ಮೂವ್ಮೆಂಟ್ ಸಿನಿಮಾ ಇಂಡಸ್ಟ್ರಿಗೆ ಬಂದಾಗ, ಚಿಕ್ಕ ಚಿಕ್ಕದೂ ದೊಡ್ಡದಾಯ್ತು." ಎಂದಿದ್ದಾರೆ.

ಹಾಗೇ "ನಾನು ಹೇಳಿದ ವ್ಯಕ್ತಿ ಒಬ್ಬ ಸೂಪರ್‌ಸ್ಟಾರ್. ನಾನು ಹಿಂತಿರುಗಿ ನೋಡಿದಾಗ, ನಾನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಾಗಿತ್ತಾ ಅಂತ. ಕೆಲವು ಸಾರಿ ನಮ್ಮ ಕೈಯಿಂದ ಎಲ್ಲಾ ಕಂಟ್ರೋಲ್ ಬಿಟ್ಟು ಹೋಗಿರುತ್ತಲ್ಲ. ಏನಾಗ್ತಿದೆ ಅಂತಾನೂ ಗೊತ್ತಾಗಲ್ಲ. ಹೇಳ್ಬೇಕಾ ಬೇಡ್ವಾ? ಇದರಿಂದ ಏನಾಗುತ್ತೆ? ಇದರ ಪ್ರಭಾವ ಏನು? ಎಷ್ಟು ಜನ ಹೆಣ್ಣು ಮಕ್ಕಳು ಸತ್ಯ ಹೇಳುತ್ತಿದ್ದಾರೆ ಅಂತ ಅನಿಸಿತ್ತು." ಎಂದು ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತಾ? ಅಂತ ಆಲೋಚಿಸುತ್ತಿದ್ದಾರೆ.
ಮೀಟೂ ಅಭಿಯಾನದಲ್ಲಿ ಭಾಗಿಯಾಗಿದ್ದರಿಂದ ಚಿತ್ರರಂಗದಲ್ಲಿ ಕೆಲವು ಬದಲಾವಣೆಗಳನ್ನು ಕಾಣುತ್ತಿದ್ದೇನೆ ಎಂದಿದ್ದಾರೆ. "ನಾನು ಇದನ್ನು ಮಾಡಿರಲಿಲ್ಲ ಅಂದರೆ, ಇವತ್ತು ನಮ್ಮ ಇಂಡಸ್ಟ್ರಿನಲ್ಲಿ ಒಂದು ಚೇಂಜ್ ಆಗುತ್ತಿರಲಿಲ್ಲ. ಆ ಒಂದು ಚೇಂಜ್ ಅನ್ನು ನಾನು ಖಂಡಿತಾ ನೋಡುತ್ತಿದ್ದೇನೆ. ನಾನು ಮಾತ್ರ ಅಲ್ಲ. ತುಂಬಾ ಜನ ಫೀಮೇಲ್ ಆಕ್ಟರ್‌ಗಳ ಜೊತೆ ಮಾತಾಡಿದ್ದೀನಿ. ಮಹಿಳೆಯರೊಂದಿಗೆ ಕೆಲವು ರೀತಿ ವರ್ತಿಸುವ ಮುನ್ನ ಜನರು ಈಗ ಯೋಚನೆ ಮಾಡುತ್ತಾರೆ. ಓ ಇವರ ಮೀಟೂ ಮಾಡಿಬಿಡ್ತಾಳೆ ಅಂತ ಹೆದರಿಕೊಂಡು ಹೋಗುವುದು ಇದೆಯಲ್ಲ ಅದೂ ಕೂಡ ಓಕೆ." ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಚಿತ್ರರಂಗಕ್ಕೆ ಬರಬೇಕು ಅನ್ನುವ ಹೆಣ್ಣು ಮಕ್ಕಳು ಮುಂದಿನ ದಿನಗಳಲ್ಲಿ ಆರಾಮಾಗಿ ಬರಬಹುದು ಎಂದಿದ್ದಾರೆ. "ನನ್ನ ಮಗಳು ಅಷ್ಟೇ ಅಲ್ಲ. ಬೇರೆಯದ್ದೇ ಮಕ್ಕಳು ಚಿತ್ರರಂಗಕ್ಕೆ ಹೋಗಬೇಕು ಅನ್ನೋ ಆಸೆ ಇದ್ದಾಗಲೆಲ್ಲ. ಎಲ್ಲರೂ ಹೇಳುತ್ತಿದ್ದರಲ್ಲ ಸಿನಿಮಾ ಇಂಡಸ್ಟ್ರಿ ಬೇಡ, ಕೊಳಕು, ಅದು ಸುರಕ್ಷಿತ ಜಾಗವಲ್ಲ ಅಂತ ಹೇಳುತ್ತಿದ್ದರಲ್ಲ. ಅದ್ಯಾಕೆ ಸೇಫ್ ಅಲ್ಲ?" ಎಂದು ಶ್ರುತಿ ಹರಿಹರನ್ ಮೀಟೂ ಬಳಿಕ ಆದ ಬದಲಾವಣೆಗಳು ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











