"ಅವರ ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಎನರ್ಜಿ ಬರುತ್ತೆ"; ಅನಂತ್ ನಾಗ್ ಬಗ್ಗೆ ಸುಧಾರಾಣಿ ಗುಣಗಾನ
ಕನ್ನಡ ಚಿತ್ರರಂಗದ ದಿಗ್ಗಜ ಅನಂತ್‌ನಾಗ್‌ಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಘೋಷಣೆಯಾದ ದಿನದಿಂದ ಅವರನ್ನು ಅಭಿನಂದಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಅವರ ಆತ್ಮೀಯರು ಅವರ ಮನೆಗೆ ತೆರಳಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಹಾಗೇ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಬ್ಯೂಟಿ ಸುಧಾರಾಣಿ ಕೂಡ ಅನಂತ್‌ನಾಗ್ ಅವರ ಮನೆಗೆ ತೆರಳಿ ಅಭಿನಂದಿಸಿದ್ದಾರೆ.
ನಟಿ ಸುಧಾರಾಣಿಗೆ ಕನ್ನಡದ ಮತ್ತೊಬ್ಬ ನಟಿ ಮಾಳವಿಕಾ ಅವಿನಾಶ್ ಕೂಡ ಸಾಥ್ ಕೊಟ್ಟಿದ್ದರು. ಅನಂತ್‌ನಾಗ್ ಅವರನ್ನು ಭೇಟಿ ಮಾಡಿ ಅವರಿಗೆ ಪುಸ್ತಕ ಹಾಗೂ ಉಡುಗೊರೆಯನ್ನು ನೀಡಿ ಪದ್ಮಭೂಷಣ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಕೂತು ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ತನ್ನ ನೆನಪಿಸಿಕೊಂಡು ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅನಂತ್‌ನಾಗ್ ಬಗ್ಗೆ ಅವರೇ ಬರೆದ ಸಾಲುಗಳು ಹೀಗಿವೆ.

"1981ರಲ್ಲಿ, ಅನುಪಮಾ ಸಿನಿಮಾದಲ್ಲಿ ಅನಂತ್ ನಾಗ್ Sir ಜೊತೆ ಬಾಲನಟಿಯಾಗಿ ತೆರೆ ಹಂಚಿಕೊಂಡಾಗಿನಿಂದ ಇಲ್ಲಿಯವರೆಗೂ ಅವರೊಡನೆ ಒಳ್ಳೇ ಒಡನಾಟ ಇದೆ. ಅವರನ್ನ ಭೇಟಿ ಮಾಡೋಕೆ ಕಾರಣವೇ ಬೇಕಿಲ್ಲ. ಪ್ರತಿ ಸಾರಿ ಭೇಟಿ ಮಾಡಿ ಮಾತನಾಡಿದಾಗ it'll be a Different Experience. ಕಲಿಯೋದು ಬಹಳ ಇರತ್ತೆ. ಸದಾ ನೆನಪಲ್ಲಿ ಉಳಿಯುವಂಥ ಕ್ಷಣಗಳಾಗಿರತ್ತೆ." ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.
"ಇತ್ತೀಚೆಗೆ ಅನಂತ್ ನಾಗ್ Sir ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರೋ ವಿಚಾರ ಕೇಳಿ ತುಂಬಾ ಖುಷಿಯಾಯ್ತು. ಅವರು ಪ್ರಶಸ್ತಿ ಸ್ವೀಕರಿಸೋದನ್ನ ಪ್ರತ್ಯಕ್ಷವಾಗಿ ನೋಡೋಕಾಗಲ್ಲ. ಆದರೆ ಅಂಥ ಮೇರು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ಜೊತೆ ಸಮಯ ಕಳೆಯೋ ಅವಕಾಶ ಅವರ ಸ್ವಗೃಹದಲ್ಲೇ ಸಿಗತ್ತೆ ಅಂದ್ರೆ ಬಿಡೋಕಾಗತ್ತಾ? ನಾನು ಮತ್ತು ಮಾಳವಿಕಾ ಅವಿನಾಶ್ ಇಬ್ಬರೂ ಅನಂತ್ ನಾಗ್ Sir ಅವರನ್ನ ಭೇಟಿ ಮಾಡಿ 2 ಗಂಟೆಗಳ ಕಾಲ ಅವರ ಜೊತೆ ಸಮಯ ಕಳೆದ್ವಿ. ಯಾವಾಗಲೂ ಮಾತಾಡೋ ಹಾಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ರು, ತಿಳ್ಕೊಳ್ಳೋ ವಿಚಾರಗಳು ಬೇಕಾದಷ್ಟಿತ್ತು. ಅವರ ಜೊತೆ ಕೂತು ಅವರ ಮಾತುಗಳನ್ನ ಕೇಳ್ತಿದ್ರೆ ಅವರ Energy ನೋಡಿ ನಮಗೆ Energy ಮತ್ತು Positivity ಬರತ್ತೆ. ಜೊತೆಗೆ ಅವರ ಸುಂದರವಾದ ಕುಟುಂಬ, ಗಾಯತ್ರಿ ಅವರು ಹಾಗೂ ಅವರ ಮಗಳು ಅದಿತಿ." ಎಂದಿದ್ದಾರೆ.
"ನನ್ನ ಮಗಳು ನಿಧಿಗೆ, ಅದಿತಿ Role Model ಆಗಿರಬೇಕು ಅಂತ ನಾನು ಯಾವಾಗಲೂ ಹೇಳ್ತಾ ಇದ್ದೆ. ಅದಿತಿ ಮದುವೆಗೆ ಹೋಗಿದ್ದ ನೆನಪುಗಳಿರಬಹುದು ಅಥವಾ ಅವರ ಮನೆಗೆ ಗಣಪತಿ ಹಬ್ಬಕ್ಕೆ ಹೋಗಿದ್ದ ನೆನಪುಗಳು ಇದೆಲ್ಲವನ್ನು ಅವರ ಕುಟುಂಬದ ಜೊತೆ ಕೂತು ಮೆಲುಕು ಹಾಕೋ ಅವಕಾಶ ಸಿಕ್ತು. ಅನಂತ್ ನಾಗ್ Sir ಜೊತೆ ಏಳೆಂಟು ಸಿನಿಮಾಗಳಲ್ಲಿ ನಟಿಸಿ, ಅವರೊಡನೆ ಸಮಯ ಕಳೆದಂಥ ಅನುಭವ, ಅವರಿಂದ ಕಲಿತದ್ದು ಸಾಕಷ್ಟಿದೆ. ಅದೆಲ್ಲವನ್ನ ಮುಂದೆ ನನ್ನ YouTube Channel ನಲ್ಲಿ ಹಂಚಿಕೊಳ್ತೀನಿ. ಮತ್ತೊಮ್ಮೆ ಅಭಿನಂದನೆಗಳು ಅನಂತ್ ನಾಗ್ Sir. ಇನ್ನಷ್ಟು ಉನ್ನತ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ನಿಮ್ಮನ್ನು ಅರಸಿ ಬರಲಿ. ಕನ್ನಡ ಚಿತ್ರರಂಗಕ್ಕೆ ನೀವು ಸಲ್ಲಿಸಿರುವ ಸೇವೆ ಭಾರತಾದ್ಯಂತ ಪಸರಿಸಲಿ." ಎಂದು ಅನಂತ್‌ನಾಗ್ ಅವರನ್ನು ಭೇಟಿಯಾದ ಬಳಿಕ ತಮ್ಮ ಸಂತಸವನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ.
ಅನಂತ್‌ನಾಗ್ ಹಾಗೂ ಸುಧಾರಾಣಿ ಕೆಲವೇ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅವರೇ ಹೇಳಿದಂತೆ 1981ರಲ್ಲಿ ತೆರೆಕಂಡಿದ್ದ 'ಅನುಪಮ' ಸಿನಿಮಾದಲ್ಲಿ ಅನಂತ್‌ನಾಗ್ ಅವರೊಂದಿಗೆ ಬಾಲ ನಟಿಯಾಗಿ ನಟಿಸಿದ್ದರು. ಆ ಬಳಿಕ 'ಪ್ರೀತಿ ಪ್ರೇಮ ಪ್ರಣಯ', 'ಎಷ್ಟು ನಗ್ತಿ ನಗು', 'ಮಿಸ್ಟರ್ ಗರಗಸ', 'ಗೌತಮ್', 'ಪ್ಲಸ್','ವಾಸ್ತು ಪ್ರಕಾರ'ದಂತಹ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಆದರೆ, ಇಬ್ಬರೂ ಲವ್ ಸ್ಟೋರಿಗಳಲ್ಲಿ ನಟಿಸಲಿಲ್ಲ. ವಯಸ್ಸಿನಲ್ಲಿ ಹೆಚ್ಚು ಅಂತರವಿದ್ದಿದ್ದರಿಂದ ಬಂದ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಅನಂತ್‌ನಾಗ್ ಅವರೇ ಹೇಳಿಕೊಂಡಿದ್ದರು.


Click it and Unblock the Notifications











