'ಕನ್ನಡತಿ'ಯ ಹೊಸ ಸಿನಿಮಾ ಕಾಂಗರೂ ಶೂಟಿಂಗ್ ಫಿನಿಶ್: ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಆದಿತ್ಯ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಕನ್ನಡತಿ' ಧಾರಾವಾಹಿ ಮೂಲಕ ವೀಕ್ಷಕರಿಗೆ ಇನ್ನೂ ಹತ್ತಿರವಾಗಿದ್ದ ನಟಿ ರಂಜನಿ ರಾಘವನ್. ಈ ನಟಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿರೋದು ಗೊತ್ತೇ ಇದೆ. ಕೆಲವು ತಿಂಗಳ ಹಿಂದಷ್ಟೇ ನಟ ಆದಿತ್ಯ ಜೊತೆ ಇವರ ಹೊಸ ಸಿನಿಮಾ ಸೆಟ್ಟೇರಿತ್ತು. ಅದುವೇ 'ಕಾಂಗರೂ'.
'ಡೆಡ್ಲಿ ಸೋಮ' ಖ್ಯಾತಿಯ ಆದಿತ್ಯ ಇದೇ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಂದು ಥ್ರಿಲ್ಲರ್ ಸಿನಿಮಾದಲ್ಲಿ ಆದಿತ್ಯ ನಟಿಸುತ್ತಿದ್ದಾರೆ. ಸಿನಿಪ್ರಿಯರಿಗೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು ಹೊಸದೇನು ಅಲ್ಲ. ಆದರೆ, ಈ ಸಿನಿಮಾ ವಿಭಿನ್ನ ಅನುಭವವನ್ನು ನೀಡುತ್ತೆ ಎಂಬ ಆತ್ಮ ವಿಶ್ವಾಸದಲ್ಲಿ ಚಿತ್ರತಂಡವಿದೆ.

ಆದಿತ್ಯ ಇತ್ತೀಚೆಗೆ ಹೆಚ್ಚೆಚ್ಚು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ 'ಕಾಂಗರೂ' ಸಿನಿಮಾದಲ್ಲೂ ಮತ್ತೆ ಪೊಲೀಸ್ ಅಧಿಕಾರಿಯಾಗಿಯೇ ನಟಿಸುತ್ತಿದ್ದಾರೆ. ಇತ್ತ ರಂಜನಿ ರಾಘವನ್ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಕಿಶೋರ್ ಮೇಗಳಮನೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಿನಿಮಾ ಟೈಟಲ್ ಕೂಡ ಗಮನ ಸೆಳೆಯುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದರೂ ಸಿನಿಮಾಗೆ ವಿಶಿಷ್ಟವಾಗಿ ಕಾಂಗರೂ ಅಂತ ಟೈಟಲ್ ಫಿಕ್ಸ್ ಮಾಡಿದ್ದು, ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಅಂದ್ಹಾಗೆ, ಚಿತ್ರತಂಡ ಸದ್ದಿಲ್ಲದೆ 'ಕಾಂಗರೂ' ಸಿನಿಮಾದ ಶೂಟಿಂಗ್ ಮುಗಿಸಿದೆ. ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಸದ್ಯ ಸಿನಿಮಾ ತಂಡ ಡಬ್ಬಿಂಗ್ ಮಾಡುತ್ತಿದೆ.

'ಕಾಂಗರೂ' ಸಿನಿಮಾದಲ್ಲಿ ಆದಿತ್ಯ, ರಂಜನಿ ರಾಘವನ್ ಜೊತೆ ಕನ್ನಡದ ಹಲವು ಕಲಾವಿದರು ನಟಿಸುತ್ತಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
"ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಆದರೆ, ನಮ್ಮ ಸಿನಿಮಾ ಸ್ವಲ್ಪ ವಿಭಿನ್ನ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್‌ಗಾಗಿ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಿದು. ಇನ್ನು ಕಾಂಗರೂ ಶೀರ್ಷಿಕೆ ಕುರಿತು ಹೇಳುವುದಾದರೆ, ಕಾಂಗರೂ ಒಂದು ಮುಗ್ಧ ಪ್ರಾಣಿ. ಅದು ಯಾರಿಗೂ ಏನು ಮಾಡುವುದಿಲ್ಲ. ಮತ್ತು ಈ ಕಾಂಗರೂ ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲ್ಬಾಗದಲ್ಲಿ ಇರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ. ಅಂತಹ ಸಮಯದಲ್ಲಿ ತನ್ನ ಮರಿಯ ತಂಟೆಗೆ ಯಾರಾದರೂ ಹೋದರೆ ಅದು ಯಾರನ್ನು ಬಿಡುವುದಿಲ್ಲ. ಈ ಪ್ರಾಣಿಯ ನಡವಳಿಕೆಯನ್ನು ಹೋಲುವಂತಹ ಕಥೆ ಈ ಸಿನಿಮಾದಲ್ಲಿ ಇರುತ್ತೆ" ಎಂದು ನಿರ್ದೇಶಕ ಕಿಶೋರ್ ಮೇಗಳಮನೆ ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
'ಕಾಂಗರೂ' ಸಿನಿಮಾವನ್ನು ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೇಗನೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಸ್ಟೇಜ್‌ನಲ್ಲಿರೋ ಸಿನಿಮ ಆದಷ್ಟು ಬೇಗ ರಿಲೀಸ್ ಆಗಲಿದೆ.
ಇನ್ನು 'ಕಾಂಗರೂ' ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸ್ವತ: ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ಬರೆದಿದ್ದಾರೆ. ಉದಯ್ ಲೀಲ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಈ ಸಿನಿಮಾಗಿದೆ. ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿಯನ್ನು ಬಿಟ್ಟಿಕೊಟ್ಟಿಲ್ಲ. ಬಹುಶ: ಹೊಸ ವರ್ಷಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











