9 ವರ್ಷಗಳ ಬಳಿಕ ವಿಜಯ್ ರಾಘವೇಂದ್ರ ಜೊತೆ ಸ್ಕ್ರೀನ್ ಶೇರ್ ಮಾಡಲಿರೋ ಶಿವಣ್ಣ; ಹಿರಿಯ ವಕೀಲನಾಗಿ ಸೆಂಚುರಿ ಸ್ಟಾರ್
ಸ್ಯಾಂಡಲ್‌ವುಡ್‌ನಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಬರುವುದೇ ಕಡಿಮೆ. ಅಪರೂಪಕ್ಕೆ ಒಮ್ಮೆ ಸಿನಿಮಾ ಪ್ರೇಮಿಗಳಿಗೆ ಇಂತಹದ್ದೊಂದು ಅವಕಾಶ ಸಿಗುತ್ತೆ. ಕನ್ನಡ ಸೂಪರ್‌ಸ್ಟಾರ್‌ಗಳಿಗೆ ಮಲ್ಟಿಸ್ಟಾರರ್ ಸಿನಿಮಾ ಅಂತ ಅಷ್ಟಕ್ಕಷ್ಟೇ. ಆದರೆ, ಇತ್ತೀಚೆಗೆ ಶಿವಣ್ಣ ಮಾತ್ರ ಮಲ್ಟಿಸ್ಟಾರರ್ ಸಿನಿಮಾಗಳಿಗೆ ಹೆಚ್ಚಾಗಿ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈಗ ಮತ್ತೊಂದು ಸಿನಿಮಾ ಇಂತಹದ್ದೇ ಸಿನಿಮಾ ಜೈ ಎಂದಿದ್ದಾರೆ. ಅದುವೇ 'ಮಹಾನ್.
ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಹೊಸ ಸಿನಿಮಾಗೆ ಶಿವರಾಜಕುಮಾರ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಪಿ.ಸಿ. ಶೇಖರ್ ನಿರ್ದೇಶನ ಮಾಡುತ್ತಿರುವ 'ಮಹಾನ್' ಸಿನಿಮಾದಲ್ಲಿ ಶಿವಣ್ಣ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಬಗ್ಗೆ ಇಬ್ಬರ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲವೇ ಮೂಡಿದೆ.

9 ವರ್ಷಗಳ ಬಳಿಕ ವಿಜಯ್ ರಾಘವೇಂದ್ರ ಸಿನಿಮಾದಲ್ಲಿ ಶಿವಣ್ಣ
ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರ್ತಿರೋದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಂದಿವೆ. ಆದರೆ, ಕಳೆದ 9 ವರ್ಷಗಳಿಂದ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ. ಈಗ 'ಮಹಾನ್' ಸಿನಿಮಾ ಮೂಲಕ ಇವರಿಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ.
ಆಕಾಶ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪ್ರಕಾಶ್ ಬುದ್ದೂರು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡಮನೆಯ ಇಬ್ಬರು ಜನಪ್ರಿಯ ನಟರು ಒಂದೇ ಚಿತ್ರದಲ್ಲಿ ಮುಖಾಮುಖಿಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ಮೇಲೆ ಖುಷಿ ಕೊಟ್ಟಿದೆ.
'ಮಹಾನ್' ವಕೀಲನಾಗಿ ಸೆಂಚುರಿ ಸ್ಟಾರ್
ಪಿಸಿ ಶೇಖರ್ ನಿರ್ದೇಶಿಸುತ್ತಿರುವ 'ಮಹಾನ್' ರೈತರ ಕುರಿತಾದ ಸಿನಿಮಾ ಆಗಿದೆ. ಸೂಕ್ಷ್ಮ ಹಾಗೂ ಗಂಭೀರ ವಿಷಯಗಳನ್ನು ರೋಚಕವಾಗಿ ನಿರ್ದೇಶಕರು ತೆರೆಮೇಲೆ ತರುತ್ತಿದ್ದಾರೆ.
"ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ತಪ್ಪು ಮಾಡಿದರೆ ಬುದ್ಧಿ ಹೇಳಲು ತಂದೆ-ತಾಯಿ ಇರುತ್ತಾರೆ. ಆದರೆ, ಇಡೀ ಸಮಾಜದಲ್ಲೇ ಅಂತಹ ಅನ್ಯಾಯ ಅಥವಾ ತೊಂದರೆಗಳು ಎದುರಾದಾಗ, ಇಡೀ ವ್ಯವಸ್ಥೆಯನ್ನು ತಿದ್ದಲು ಒಬ್ಬ 'ಮಹಾನ್' ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹದ್ದೇ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ನಿಲ್ಲುವ ಜವಾಬ್ದಾರಿಯುತ ಪಾತ್ರದಲ್ಲೇ ಶಿವರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ" ಎಂದು ನಿರ್ದೇಶಕ ಪಿ.ಸಿ. ಶೇಖರ್ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಅವರು ಹಿರಿಯ ವಕೀಲನ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ತಿರುವು ಕೊಡಲಿದೆ ಶಿವಣ್ಣನ ಪಾತ್ರ
ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣ ಪಾತ್ರ ಕೂಡ ಅಷ್ಟೇ ಪ್ರಮುಖವಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಪಾತ್ರವೇ ಮೇಜರ್ ಟ್ವಿಸ್ಟ್ ನೀಡುತ್ತೆ ಎಂದು ಹೇಳಲಾಗಿದೆ. ಹೀಗಾಗಿ ಸಿನಿಮಾ ಮೇಲೆ ಈಗಿನಿಂದ ಕುತೂಹಲ ದುಪ್ಪಟ್ಟಾಗಿದೆ.
ಈಡೇರಿತು ಪಿ.ಸಿ. ಶೇಖರ್ ಆಸೆ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳಬೇಕು ಅನ್ನೋದು ಅದೆಷ್ಟೋ ಮಂದಿ ನಿರ್ದೇಶಕರ ಕನಸು. ಆದರೆ, ಎಲ್ಲರಿಗೂ ಇದೊಂದು ಅವಕಾಶ ಮಾತ್ರ ಸಿಗುವುದಿಲ್ಲ. ಈಗ ಅದು ಪಿಸಿ ಶೇಖರ್ ಪಾಲಾಗಿದೆ. "ನನಗೂ ಶಿವಣ್ಣ ಅವರನ್ನು ನಿರ್ದೇಶಿಸಬೇಕೆಂಬ ಬಹಳ ದಿನಗಳ ಹಂಬಲವಿತ್ತು. 'ಮಹಾನ್' ಚಿತ್ರದ ಮೂಲಕ ಆ ಕನಸು ಈಡೇರಿದೆ. ಅವರ ನಟನೆ ಮತ್ತು ಸೆಟ್‌ನಲ್ಲಿನ ಅವರ ಶ್ರದ್ಧೆ ಇಡೀ ಚಿತ್ರತಂಡಕ್ಕೆ, ವಿಶೇಷವಾಗಿ ನಿರ್ಮಾಪಕ ಪ್ರಕಾಶ್ ಬುದ್ದೂರು ಅವರಿಗೆ ಅಪಾರ ಖುಷಿ ಕೊಟ್ಟಿದೆ" ಎಂದು ಪಿಸಿ ಶೇಖರ್ ಹೇಳಿದ್ದಾರೆ.
'ಮಹಾನ್' ಸ್ಟಾರ್‌ಕಾಸ್ಟ್ ಹೇಗಿದೆ?
ವಿಜಯ್ ರಾಘವೇಂದ್ರ-ಶಿವಣ್ಣ ಕಾಂಬೋ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಒಂದೊಳ್ಳೆ ಪ್ರಾಮುಖ್ಯತೆ ಇದೆ. ವಿಜಯ ರಾಘವೇಂದ್ರ ಚಿತ್ರದ ನಾಯಕನಾಗಿ ನಟಿಸುತ್ತಿದ್ದರೆ, ಇವರೊಂದಿಗೆ ರಾಧಿಕಾ ನಾರಾಯಣ್, ಹಾಸ್ಯ ನಟ ಮಿತ್ರ, ಕಿರುತೆರೆ ಹಾಗೂ ಹಿರಿತೆರೆ ನಟಿ ನಮ್ರತಾ ಗೌಡ, ಬಹುಭಾಷಾ ನಟಿ ವರ್ಷ ಬೊಳ್ಳಮ್ಮ ಮತ್ತು ಕಿರಣ್ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರೈತರ ಧ್ವನಿಯಾಗಿ 'ಮಹಾನ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications