"ನನಗೆ ವಯಸ್ಸು 37 ಆಯ್ತು.. ನೀವಿನ್ನು 19 ಎನ್ನುತ್ತಿದ್ದೀರಿ": ಈ ಬಾರಿನಾದ್ರೂ 'ಯಶ್ 19' ಗುಟ್ಟು ರಟ್ಟಾಯ್ತಾ?
'ಕೆಜಿಎಫ್ 2' ರಿಲೀಸ್ ಆದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ಅಪರೂಪ ಎಂಬಂತಾಗಿದೆ. ತೆರೆ ಮರೆಯಲ್ಲಿಯೇ 19ನೇ ಸಿನಿಮಾ ಬಗ್ಗೆ ತಯಾರಿ ನಡೆಸುತ್ತಿದ್ದಾರೆ ಅನ್ನೋದು ಗೊತ್ತಿದ್ದರೂ, ಅದ್ಯಾವಾಗ ಅಂತ ಮಾತ್ರ ರಿವೀಲ್ ಮಾಡುತ್ತಿಲ್ಲ.
ಇಂದು (ಮೇ 10) 'ಕೆಜಿಎಫ್' ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಸಮೇತ ಬಂದು ಮತಚಲಾಯಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.
ಕಿಚ್ಚ ಸುದೀಪ್, ದರ್ಶನ್, ಶಿವಣ್ಣ ಎಲ್ಲರೂ ಪ್ರಚಾರಕ್ಕೆ ಇಳಿದಿದ್ದರು. ಆದರೆ, ಈ ಬಾರಿ ಯಶ್ ಮಾತ್ರ ಆ ಘೋಜಿಗೆ ಹೋಗಲಿಲ್ಲ. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಜೊತೆ ಹೊಸ ಸಿನಿಮಾ ಬಗ್ಗೆ ಕೇಳಿದಾಗ "ವಯಸ್ಸು 37" ಅಂತ ಹೇಳಿದ್ದಾರೆ. ಅಸಲಿಗೆ ಯಶ್ ಹೊಸ ಸಿನಿಮಾ ಬಗ್ಗೆ, ಪ್ರಚಾರ ಯಾಕೆ ಮಾಡಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ಯಶ್ ಪ್ರಚಾರಕ್ಕೆ ಯಾಕೆ ಹೋಗಿಲ್ಲ?
ರಾಕಿಂಗ್ ಸ್ಟಾರ್ ಯಶ್ ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲೂ ಸುಮಲತಾ ಪರ ಬಹಿರಂಗವಾಗಿಯೇ ಅಖಾಡಕ್ಕೆ ಇಳಿದಿದ್ದರು. ಆದರೆ, 'ಕೆಜಿಎಫ್ 2' ರಿಲೀಸ್ ಆದ ಬಳಿಕ ಪ್ರಚಾರ ಮಾಡುವುದಕ್ಕೆ ಹೋಗಲಿಲ್ಲ. ಅದ್ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಸ್ವತ: ಯಶ್ ಉತ್ತರ ಕೊಟ್ಟಿದ್ದಾರೆ.
"ಈ ಬಾರಿ ನನಗೆ ಯಾವುದೂ ಆಸಕ್ತಿ ಅನಿಸಿಲ್ಲ. ಕಳೆದ ಬಾರಿ ಮಾಡುವಾಗಲೂ ನನಗೆ ಕೆಲವು ಉದ್ದೇಶಗಳು ಇದ್ದವು. ಯಶೋಮಾರ್ಗ ಕಡೆಯಿಂದ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು ಅಂದ್ರೆ, ಹೇಗಿರುತ್ತೆ ಅಂತೆಲ್ಲಾ ಇತ್ತು. ನನ್ನ ವೈಯಕ್ತಿಕ ಆಯ್ಕೆಯಾಗಿತ್ತು." ಎಂದು ಯಶ್ ಹೇಳಿದ್ದಾರೆ.
ಯುವಕರೇ ಯಾಕೆ ವೋಟ್ ಮಾಡುತ್ತಿಲ್ಲ?
ವೋಟಿಂಗ್ ದಿನ ಯುವಕರು ಹೆಚ್ಚಾಗಿ ವೋಟ್ ಮಾಡುವುದಕ್ಕೆ ಬರುತ್ತಿಲ್ಲ ಅನ್ನೋ ಆರೋಪವಿದೆ. ಯೂತ್ ಐಕಾನ್ ಆಗಿ ಈ ಸಮಸ್ಯೆಯನ್ನು ಯಶ್ ಹೇಗೆ ನೋಡುತ್ತಿದ್ದಾರೆ? ಅನ್ನೋ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.
"ಮತ ಚಲಾಯಿಸೋದು ನಮ್ಮ ಹಕ್ಕು ಅಂತ ಅರ್ಥ ಮಾಡಿಕೊಳ್ಳಬೇಕು ಅಂದರೆ, 18 ವರ್ಷ ಆಗುತ್ತಿದ್ದಂತೆ ಅದಕ್ಕೂ ಶಿಕ್ಷಣ ಬೇಕು ಅಂತ ಅನಿಸುತ್ತೆ.ವೋಟ್ ಮಾಡುವಾಗ ಯಾರಿಗೆ ಮಾಡಿದರೆ ಏನು ಅಂತ ತುಂಬಾ ಸುಲಭವಾಗಿ ಹೇಳುತ್ತಾರೆ ಅಂತ ಅನಿಸುತ್ತೆ. ನಮ್ಮ ಹಕ್ಕು ಏನು ಅಂತ ಯುವಕರು ಅರ್ಥ ಮಾಡಿಕೊಂಡು ವೋಟ್ ಮಾಡಿದರೆ ಒಳ್ಳೆಯದು." ಎಂದು ಯಶ್ ಹೇಳಿದ್ದಾರೆ.

ಯಶ್ 19ನೇ ಸಿನಿಮಾ ಯಾವಾಗ?
ಯಶ್ ಸಿನಿಮಾಗೆ ಅವರ ಅಭಿಮಾನಿಗಳು ಕಾದು ಕಾದೂ ಹೈರಾಣಾಗಿದ್ದಾರೆ. 'ಕೆಜಿಎಫ್ 2' ಬಳಿಕ ಯಶ್ ಮುಂದಿನ ಸಿನಿಮಾ ಯಾವುದು? ಅನ್ನೋದೇ ದೊಡ್ಡ ಕುತೂಹಲವಾಗಿಬಿಟ್ಟಿದೆ. ಯಶ್ ಕೂಡ ಇದೂವರೆಗೂ ಹೊಸ ಸಿನಿಮಾ ಬಗ್ಗೆ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಡುತ್ತಿಲ್ಲ. ಈ ಬಾರಿ ಕೂಡ ವಯಸ್ಸಿನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿ ಎಸ್ಕೇಪ್ ಆಗಿದ್ದಾರೆ.
"ನನಗೆ 37 ವರ್ಷ ಆಯ್ತು ಬಿಡ್ರಿ.. ಯಶ್ 19 ಅಂತಿದ್ದೀರ. ಇದು ಸಿನಿಮಾ ಬಗ್ಗೆ ಮಾತಾಡೋ ಸಮಯ ಅಲ್ಲ. ಸಮಯ ಬಂದಾಗ ನಾನೇ ಹೇಳುತ್ತೇನೆ." ಎಂದು ಯಶ್ ನುಣುಚಿಕೊಂಡಿದ್ದಾರೆ.


Click it and Unblock the Notifications











