ಚಿರು ಅಗಲಿಕೆ.. 3 ವರ್ಷ ಬ್ರೇಕ್.. ಹೊಸ ಬದುಕಿಗೆ ಸಿಕ್ಕಿದ್ದು 'ತತ್ಸಮ ತದ್ಭವ': ಅಂತ್ಯವಲ್ಲ ಮತ್ತೆ ಆರಂಭ!
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುವ ಸಮಯ ಬಂದಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಇವರದ್ದೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಸಿನಿಮಾದ ಮೊದಲ ಝಲಕ್ ಈಗ ರಿಲೀಸ್ ಆಗಿದ್ದು, ಹೊಸ ಭರವಸೆಯೊಂದಿಗೆ ಮೇಘನಾ ರಾಜ್ ಪ್ರತ್ಯಕ್ಷ ಆಗಿದ್ದಾರೆ.
ಹೆಚ್ಚು ಕಡಿಮೆ ಮೂರು ವರ್ಷ ಆಗಿತ್ತು. ಮೇಘನಾ ರಾಜ್ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ಚಿರಂಜೀವಿ ಸರ್ಜಾ ದಿಢೀರನೇ ಅಗಲಿಕೆ ದೊಡ್ಡ ಅಘಾತವನ್ನೇ ತಂದೊಡ್ಡಿತ್ತು. ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದ ಮೇಘನಾ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. ಅದನ್ನು ಎದುರಿಸಿ ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ಮೇಘನಾ ರಾಜ್ ನಿರ್ಧರಿಸಿದ್ದರು.

ಮೇಘನಾ ರಾಜ್ ಬದುಕಿನಲ್ಲಿ ವಿಧಿಯಾಡಿದ ಆಟಕ್ಕೆ ಅದೆಷ್ಟೋ ಮಂದಿ ಹಿಡಿ ಶಾಪ ಹಾಕಿದ್ದರು. ಆದರೆ, ಇದೆಕ್ಕೆಲ್ಲ ಹೆದರಿ ಕೂರುವಂತಹ ಜಮಾನ ಇವರದ್ದಾಗಿರಲಿಲ್ಲ. ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಸ್ನೇಹಿತರ ಬೆಂಬಲವಿತ್ತು. ಆಗಲೇ ಶುರುವಾಗಿದ್ದೇ 'ತತ್ಸಮ ತದ್ಬವ'.
'ತತ್ಸಮ ತದ್ಬವ' ಟೀಸರ್ ರಿಲೀಸ್
2020 ಮೇಘನಾ ರಾಜ್‌ಗೆ ಕಹಿ ವರುಷ. ಪತಿಯನ್ನು ಕಳೆದು ಕೊಂಡ ದು:ಖ. ಅದರಲ್ಲಿಂದ ಹೊರಬರಲೇ ಬೇಕಾದ ಅನಿವಾರ್ಯತೆ. ಇನ್ನೊಂದು ಕಡೆ ತಾಯ್ತನ. ತನ್ನ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕಿತ್ತು. ಹೀಗಾಗಿ ಸಿನಿಮಾದಿಂದ ದೂರ ಉಳಿಯಲೇ ಬೇಕಿತ್ತು. ಮಗನಿಗೆ ಮೊದಲ ಆಧ್ಯತೆ ನೀಡಲೇಬೇಕಿತ್ತು.
ಆದರೆ, ಹೆಚ್ಚು ದಿನ ಹಾಗೇ ತೆರೆ ಮರೆಯಲ್ಲಿ ಇರುವಂತೆ ಇಲ್ಲ. ತನ್ನ ವೃತ್ತಿ ಬದುಕಿನ ಕಡೆಗೂ ಗಮನ ಹರಿಸಲೇಬೇಕಿತ್ತು. ಆಗ ಮೇಘನಾ ರಾಜ್‌ಗೆ ನೆರವಾದವರೇ ಅವರ ಸ್ನೇಹಿತರು. ಪನ್ನಗಾಭರಣ, ಪ್ರಜ್ವಲ್ ದೇವರಾಜ್ ಸೇರಿ ನಟಿ ಮೇಘನಾ ರಾಜ್‌ಗಾಗಿಯೇ ಹೊಸ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದರು. ಅದುವೇ 'ತತ್ಸಮ ತದ್ಬವ'. ಈಗ ಇದೇ ಸಿನಿಮಾದ ಟೀಸರ್ ರಿಲೀಸ್ ಆಗಿ, ಮೆಚ್ಚುಗೆ ಗಳಿಸುತ್ತಿದೆ.

ಪತಿ ಹುಡುಕುತ್ತಿರೋ ಮೇಘನಾ ರಾಜ್!
ಕಾಕತಾಳಿಯವೋ ಏನೋ.. "ಪತಿ ಕಾಣೆಯಾಗಿದ್ದಾರೆ" ಅನ್ನೋ ಟೈಟಲ್ ಮೂಲಕವೇ ಮೇಘನಾ ರಾಜ್ ನಟಿಸಿದ 'ತತ್ಸಮ ತದ್ಭವ' ಸಿನಿಮಾದ ಟೀಸರ್ ಆರಂಭ ಆಗುತ್ತೆ. ಇದು ಸಿನಿಪ್ರಿಯರಿಗೆ ಟ್ರಿಗರಿಂಗ್ ಪಾಯಿಂಟ್. ಸ್ಯಾಂಡಲ್‌ವುಡ್ ಪ್ರಮುಖ ನಟರು ಈ ಸಿನಿಮಾದಲ್ಲಿ ಮೇಘನಾ ರಾಜ್‌ಗೆ ಜೊತೆಯಾಗಿದ್ದಾರೆ.
'ತತ್ಸಮ ತದ್ಬವ' ಟೀಸರ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅನ್ನೋ ಮನವರಿಕೆ ಮಾಡಿಕೊಡುತ್ತಿದೆ. ಮೇಘನಾ ರಾಜ್ ಜೊತೆ ಪ್ರಮುಖ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಇಲ್ಲಿ ಪೊಲೀಸ್ ಅಧಿಕಾರಿಗಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಹಿರಿಯ ನಟಿ ಶ್ರುತಿ, ಟಿ ಎಸ್ ನಾಗಾಭರಣ, ಗಿರಿಜಾ ಲೋಕೇಶ್, ಬಾಲಾಜಿ ಮನೋಹರ್, ಅರವಿಂದ್ ಅಯ್ಯರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ಎರಡು ಭಾಷೆಯಲ್ಲಿ ಸಿನಿಮಾ ರಿಲೀಸ್
'ತತ್ಸಮ ತದ್ಬವ' ಸಿನಿಮಾವನ್ನು ವಿಶಾಲ್ ಆತ್ರೇಯ ನಿರ್ದೇಶಿಸಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಮೇಘನಾ ರಾಜ್ ಮಲಯಾಳಂ ಚಿತ್ರರಂಗದಲ್ಲೂ ಜನಪ್ರಿಯರಾಗಿರುವುದರಿಂದ ಎರಡೂ ಭಾಷೆಗಳಲ್ಲೂ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.
ಸದ್ಯ ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಇನ್ನೊಂದು ಕಡೆ ಪತಿ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ 'ರಾಜಾಮಾರ್ತಾಂಡ' ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಈ ಎರಡೂ ಸುದ್ದಿ ಖುಷಿ ಕೊಟ್ಟಿದೆ.


Click it and Unblock the Notifications











